Slide
Slide
Slide
previous arrow
next arrow

ಕಲಾಸಂಘಟನೆ, ಕಲಾ ಸಾಧಕರನ್ನು ಗೌರವಿಸುವುದು ಶ್ಲಾಘನೀಯ: ಕೆಶಿನ್ಮನೆ

300x250 AD

ಶಿರಸಿ: ಇಂದಿನ ವಿದ್ಯಮಾನದಲ್ಲಿ ಶಾಸ್ತ್ರೀಯ ಬದ್ಧವಾದ ಕಲಾ ಸಂಘಟನೆ ಮಾಡುವುದು ಹಾಗೂ ಕಲಾ ಸಾಧಕರನ್ನು ಗುರುತಿಸಿ, ಸನ್ಮಾನಿಸುವುದು ಶ್ಲಾಘನೀಯ ಕೆಲಸವಾಗಿದೆ. ಶಾಸ್ತ್ರೀಯ ಸಂಗೀತವು ಪ್ರತಿ ಕಲಾಪ್ರಕಾರಗಳಿಗೆ ಮೂಲಗಳೆಂದು ಹಿರಿಯ ತಜ್ಞರು ಉಲ್ಲೇಖಿಸಿದ್ದು, ಜೀವನದ ಸಾಧನೆಗೆ ಹಾಗೂ ವೈಯಕ್ತಿಕ ಪ್ರತಿಭಾ ಪ್ರದರ್ಶನಕ್ಕೆ ಇದೊಂದು ಒಳ್ಳೆಯ ವೇದಿಕೆ ಎಂದು ಧಾರವಾಡ ಹಾಲು ಒಕ್ಕೂಟ ಹಾಗೂ ಶಿರಸಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಹೇಳಿದರು.

ಅವರು ನಗರದ ಯೋಗಮಂದಿರ ಸಭಾಭವನದಲ್ಲಿ ಸ್ಥಳೀಯ ರಾಗಮಿತ್ರ ಪ್ರತಿಷ್ಠಾನ ಸ್ವರ್ಣವಲ್ಲೀ ಸಂಸ್ಥಾನದ ಶ್ರೀಗಳ 33ನೆಯ ಪೀಠಾರೋಹಣದ ಅಂಗವಾಗಿ ಪ್ರತಿ ತಿಂಗಳ ಮೊದಲ ಸೋಮವಾರದಂದು ಸಂಘಟಿಸುತ್ತಿರುವ ಗುರು ಅರ್ಪಣೆ ಕಲಾ ಅನುಬಂಧ ಸಂಗೀತ ಕಾರ್ಯಕ್ರಮದಲ್ಲಿ ಸಾಧಕ ಕಲಾವಿದರಿಬ್ಬರನ್ನು ಸನ್ಮಾನಿಸಿ, ಮಾತನಾಡಿದರು.

ಚಿಕ್ಕಮಕ್ಕಳಿರುವಾಗಲೇ ಶಾಸ್ತ್ರೀಯ ಕಲೆಯ ಸಂಸ್ಕಾರವನ್ನು ಮಾರ್ಗದರ್ಶನ ಮಾಡಿದರೆ ಮುಂದೊಂದು ದಿನ ಆ ಮಕ್ಕಳು ಸಾಧನೆ ಹಾಗೂ ಊರಿಗೆ ಕೀರ್ತಿ ತರಲು ಸಾಧ್ಯವಾಗುತ್ತದೆ. ಇದಕ್ಕೆ ಹತ್ತಾರು ಉದಾಹರಣೆಗಳನ್ನು ಸಮಾಜದಲ್ಲಿ ಕಾಣಬಹುದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಬಡಗುತಿಟ್ಟಿನ ಯಕ್ಷಗಾನ ಕ್ಷೇತ್ರದ ಭಾಗವತಿಕೆಯಲ್ಲಿ ಜನಪ್ರಿಯರಾದ ರಾಮಕೃಷ್ಣ ಹೆಗಡೆ ಹಿಲ್ಲೂರ ಅವರನ್ನು ಹಾಗೂ ಬಾನ್ಸೂರಿ ವಾದನದಲ್ಲಿ ಸಾಧನೆ ಗೈದ ವಿದ್ವಾನ್ ನಾಗರಾಜ ಹೆಗಡೆ ಶಿರನಾಲಾ ಇವರನ್ನು ಶಾಲು ಹೊದೆಸಿ, ಫಲತಾಂಬೂಲದೊಂದಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಾದೇಶಿಕ ಸಾರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಜಿ.ಎಸ್.ಹೆಗಡೆ ಹಲಸರಿಗೆ ಮಾತನಾಡಿ, ದೈನಂದಿನ ಕೆಲಸದ ಒತ್ತಡದಲ್ಲಿ ಶಾಸ್ತ್ರೀಯ ಸಂಗೀತಗಳನ್ನು ಆಲಿಸಿದಾಗ ಮನಸ್ಸಿಗೆ ನೆಮ್ಮದಿ ನೀಡುತ್ತದೆ ಮತ್ತು ಏಕಾಗ್ರತೆ ಭಾವನೆ ಹೊರಹೊಮ್ಮಿಸಲು ನಮ್ಮ ಕೆಲಸಗಳನ್ನು ಸುಗಮವಾಗಿ ನಡೆಸಲು ಸಹಕಾರಿಯಾಗುತ್ತದೆ ಎಂದರು. ಸನ್ಮಾನ ಸ್ವೀಕರಿಸಿ, ಭಾಗವತ ಹಿಲ್ಲೂರ ರಾಮಕೃಷ್ಣ ಹೆಗಡೆ ಕೃತಜ್ಞತೆ ತಿಳಿಸುತ್ತ, ಅಪೇಕ್ಷೆಯ ಮೇರೆಗೆ ಭಾಮಿನಿಯಲ್ಲಿ ಸುಂದರವಾಗಿ ದೇವಿ ಸ್ತುತಿ ಹಾಡಿ ಸಭೆಯನ್ನು ಮಂತ್ರಮುಗ್ದಗೊಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ನಿವೃತ್ತ ಉದ್ಯೋಗಿ ಸಂಗೀತಾಭಿಮಾನಿ ಆರ್.ಎನ್.ಭಟ್ಟ ಸುಗಾವಿ ಮಾತನಾಡಿ, ಮಕ್ಕಳು ಅಭ್ಯಾಸ ಮಾಡುವಾಗ ನಿರ್ಲಕ್ಷ್ಯ ವಹಿಸದೇ ತಪಸ್ಸನ್ನಾಚರಿಸಿದಂತೆ ಅಭ್ಯಸಿಸಿ ಹಾಗೂ ಪ್ರಚಾರದ ಗೀಳಿಗೆ ಹೋಗದೇ ಸಾಧನೆ ಮಾರ್ಗದಲ್ಲಿ ತೊಡಗಿಕೊಂಡರೆ ತನ್ನಿಂದ ತಾನೆಯೇ ಗೌರವ, ಕೀರ್ತಿ ಲಭಿಸುತ್ತದೆ ಎಂದರು. ವೇದಿಕೆಯಲ್ಲಿ ರಾಗಮಿತ್ರ ಪ್ರತಿಷ್ಠಾನದ ಅಧ್ಯಕ್ಷ ಎಂ.ಎನ್.ಹೆಗಡೆ ಮಾಳೆನಳ್ಳಿ ಉಪಸ್ಥಿತರಿದ್ದರು.

300x250 AD

ನಂತರ ನಡೆದ ಕಲಾನುಬಂಧ ಸಂಗೀತದ ಭಕ್ತಿ ಸಂಗೀತದಲ್ಲಿ ವಾನಳ್ಳಿಯ ನಾರಿಶಕ್ತಿ ಮಹಿಳಾ ತಂಡದ ಮಾತೆಯರು ಸುಂದರವಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಹಾರ್ಮೋನಿಯಂನಲ್ಲಿ ಗಾಯಕಿ ಸುಮಾ ಹೆಗಡೆ ವಾನಳ್ಳಿ, ತಬಲಾದಲ್ಲಿ ಸಮರ್ಥ ಹೆಗಡೆ ಸಹಕರಿಸಿದರು. ನಂತರದ ಗಾಯನದಲ್ಲಿ ಯುವ ಗಾಯಕಿ ಸ್ನೇಹಾ ಅಮ್ಮಿನಳ್ಳಿ ತಮ್ಮ ಸಂಗೀತ ಕಛೇರಿ ನಡೆಸಿಕೊಡುತ್ತ ರಾಗ್ ಮಧುವಂತಿಯಲ್ಲಿ ವಿಸ್ತಾರವಾಗಿ ಹಾಡಿ ಜನಪ್ರಿಯ ದಾಸರಪದವೊಂದನ್ನು ಹಾಡಿ ಸೈ ಎನಿಸಿಕೊಂಡರು.‌ ಸ್ನೇಹಾ ಅವರ ಗಾನಕ್ಕೆ ಹಾರ್ಮೋನಿಯಂನಲ್ಲಿ ವಿದ್ವಾನ್ ಪ್ರಕಾಶ ಹೆಗಡೆ ಯಡಳ್ಳಿ ಹಾಗೂ  ತಬಲಾದಲ್ಲಿ ವಿಜಯೇಂದ್ರ ಹೆಗಡೆ ಅಜ್ಜೀಬಳ, ತಂಬೂರದಲ್ಲಿ ಭರತ ಹೆಗಡೆ ಹೆಬ್ಬಲಸು ಸಹಕರಿಸಿದರು.

ಇದೇ ಸಂದರ್ಭದಲ್ಲಿ ಅನನ್ಯಾ ಉದಯ ಕೂಗಲಕುಳಿ ನಿರ್ವಹಿಸಿದರು. ಕಲಾನುಬಂಧ ಕೊನೆಯ ಕಾರ್ಯಕ್ರಮವಾಗಿ ಸಂಘಟಿಸಿದ್ದ ಬಾನ್ಸೂರಿ ವಾದನದಲ್ಲಿ ಖ್ಯಾತ ಕೊಳಲು ವಾದಕ ನಾಗರಾಜ ಹೆಗಡೆ ಶಿರನಾಲಾ ಕಛೇರಿ ನಡೆಸಿಕೊಡುತ್ತ ಆರಂಭದಲ್ಲಿ ರಾಗ್ ಪೂರಿಯಾ ಕಲ್ಯಾಣ್ ವೈವಿಧ್ಯಮಯವಾಗಿ ನುಡಿಸಿದರು. ನಂತರದಲ್ಲಿ ಭಕ್ತಿ ಭಜನ್ ಗಳನ್ನು ನುಡಿಸುತ್ತ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿದರು. ಶಿರಾನಾಲರವರ ಕೊಳಲು ವಾದನಕ್ಕೆ ತಬಲಾದಲ್ಲಿ ವಿದ್ವಾನ್ ಲಕ್ಷ್ಮೀಶ ರಾವ್ ಕಲ್ಗುಂಡಿಕೊಪ್ಪ ಹಾಗೂ ಸಹ ಕೊಳಲು ವಾದನದಲ್ಲಿ ಕು.ಅಖಿಲಾ ಹೆಗಡೆ ಸಾಥ್ ನೀಡಿದರು. ರಾಗಮಿತ್ರ ಪ್ರತಿಷ್ಠಾನದ ವಿದ್ವಾನ್ ಪ್ರಕಾಶ ಹೆಗಡೆ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರೆ, ಗಿರಿಧರ ಕಬ್ನಳ್ಳಿ ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Share This
300x250 AD
300x250 AD
300x250 AD
Back to top