Slide
Slide
Slide
previous arrow
next arrow

ಪೋಸ್ಟ್‌ಮ್ಯಾನ್ ಮಂಜುನಾಥ್ ಹೆಗಡೆ ನಿವೃತ್ತಿ: ಹೃದಯಸ್ಪರ್ಶಿ ಬೀಳ್ಕೊಡುಗೆ

300x250 AD

ಶಿರಸಿ : ದೂರು ಬಾರದೆ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿದ ಸಿಬ್ಬಂದಿ ಎಂದರೆ ಉತ್ತಮ ಸಿಬ್ಬಂದಿ ಎಂದಾಗಿದೆ. ೪೩ ವರ್ಷ ಯಾವುದೇ ದೂರುಗಳಿಲ್ಲದೇ ಸೇವೆ ಸಲ್ಲಿಸುವುದು ಎಂದಾದರೆ, ಅದೊಂದು ಅಪೂರ್ವ ಸೇವೆ, ಪ್ರಾಮಾಣಿಕ ಸೇವೆ. ಅವರ ಸೇವೆಯನ್ನು ಗೌರವಿಸುತ್ತೇವೆ. ಇಂತಹ ಸಿಬ್ಬಂದಿಯಿಂದಲೇ ಅಂಚೆ ಸೇವೆ ಇಂದು ಆಧುನಿಕ ಜಗತ್ತಿನಲ್ಲಿಯೂ ತನ್ನ ಸೇವೆ ನೀಡುತ್ತಾ ಮುಂದುವರೆದಿದೆ ಎಂದು ಅಂಚೆ ಇಲಾಖೆಯ ಶಿರಸಿ ವಿಭಾಗದ ಎಸ್‌ಪಿ ಹೂವಪ್ಪ ಜಿ. ಹೇಳಿದರು.

ಅವರು ಶುಕ್ರವಾರ ಇಲ್ಲಿನ ಚಿಪಗಿ ಪೋಸ್ಟ್ ಆಫೀಸ್‌ನಲ್ಲಿ ೪೩ ವರ್ಷ ಪೋಸ್ಟ ಮ್ಯಾನ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮಂಜುನಾಥ ಡಿ.ಹೆಗಡೆ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಎಎಸ್‌ಪಿ ವಿವೇಕಾನಂದ ನಿಂಬರ್ಗಿ ಮಾತನಾಡುತ್ತಾ, ೪೩ ವರ್ಷಗಳ ಸೇವೆ ಸಾರ್ಥಕವಾಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ರೀತಿಯ ಪ್ರದೇಶದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಸೇವೆ ಒದಗಿಸಿ, ಬದುಕಿನಲ್ಲಿ ಯಶಸ್ಸು ಸಾಧಿಸಿದವರಿಗೆ ಅಭಿನಂದಿಸಬೇಕು. ಇವರು ಒಬ್ಬ ಆದರ್ಶ ವ್ಯಕ್ತಿ, ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ದೊಡ್ನಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಹೆಗಡೆ, ೪೩ ವರ್ಷ ನಿಷ್ಠೆಯಿಂದ ಅಂಚೆ ಇಲಾಖೆಯಲ್ಲಿ ಸೇವೆ ಒದಗಿಸಿ, ಮನೆಯಲ್ಲಿ ಉತ್ತಮ ಕೃಷಿಕರಾಗಿ ತಮ್ಮ ಬದುಕಿನಲ್ಲಿ ಬಂದ ಕಷ್ಟವನ್ನು ಎಂದೂ ಯಾರಲ್ಲೂ ತೋರಿಸದೇ ಸದಾ ಹಸನ್ಮುಖಿಯಾಗಿ ಕೆಲಸ ಮಾಡಿ ಉತ್ತಮ ಸಿಬ್ಬಂದಿಯಾಗಿ ಜನಮನ ಗೆದ್ದವರು. ಜನರಿಗೆ ನೋವಾಗದ ರೀತಿಯಲ್ಲಿ ಸೇವೆ ನೀಡಿದವರು. ಅವರ ಸೇವೆಗೆ ಅವರ ಕುಟುಂಬದವರ ಸಹಕಾರವೂ ಮುಖ್ಯ. ಅವರ ಕೊಡುಗೆಯೂ ಇದೆ, ಎಂದರು.

300x250 AD

ಇಸಳೂರು ಗ್ರಾ.ಪಂ.ಸದಸ್ಯರಾದ ಪ್ರಸನ್ನ ಹೆಗಡೆ ಮಾತನಾಡುತ್ತಾ, ಅಂಚೆ ಇಲಾಖೆ ಜನರ ಮನಸ್ಸಿನ ಭಾವನೆ ಹಂಚಿಕೊಳ್ಳಲು ಇರುವ ವ್ಯವಸ್ಥೆ. ಹಿಂದೆ ಬೇರೆ ಯಾವುದೇ ಸಂಪರ್ಕ ಸಾಧನೆ ಇಲ್ಲದೇ ಇದ್ದಾಗ ಕೇವಲ ಅಂಚೆ ಒಂದೇ ಸಾಧನ ಆಗಿತ್ತು. ಅಂದು ಸರ್ಕಾರ ನೀಡಿದ ಮಾನ್ಯತೆ ಇಂದಿಗೂ ಉಳಿಯುವಂತೆ ಮಾಡುತ್ತಿರುವವರು ಪ್ರಾಮಾಣಿಕ ಸೇವೆ ಸಲ್ಲಿಸಿದ ಅಧಿಕಾರಿಗಳು, ಸಿಬ್ಬಂದಿಗಳು. ಅವರಿಗೆ ನಾವು ಅಭಿನಂದಿಸಲೇಬೇಕು. ಉದ್ಯೋಗ ಖಾತ್ರಿ ಯೋಜನೆ, ವಿವಿಧ ಯೋಜನೆಯ ಹಣ ಸರಿಯಾಗಿ ತಲುಪಲು ಖಾತೆದಾರರಿಗೆ ಸ್ಪಂದಿಸುವಂತಾಗಬೇಕು. ಚಿಪಗಿ ಪೋಸ್ಟ್ ಗ್ರಾಮೀಣ ಭಾಗದ್ದಾಗಿದೆ. ಆದರೆ ಇದು ಇರುವುದು ನಗರಸಭೆ ವ್ಯಾಪ್ತಿಯಲ್ಲಿ. ಗ್ರಾಮೀಣ ಭಾಗಕ್ಕೆ ಪ್ರತ್ಯೇಕ ಪೋಸ್ಟ ಒದಗಿಸಿಕೊಡುವಂತಾಗಬೇಕು ಎಂದು ಅಧಿಕಾರಿಗಳಲ್ಲಿ ವಿನಂತಿಸುತ್ತೇನೆ ಎಂದರು.

ಮೋಹನ್ ಮಾಳವದೆ ಮಾತನಾಡುತ್ತಾ, ನನ್ನ ವಯಸ್ಸಿಗಿಂತ ಹೆಚ್ಚು ವರ್ಷ ವೃತ್ತಿ ಜೀವನದಲ್ಲಿ ಸಂಸ್ಥೆಗೆ ನೀಡಿದ್ದಾರೆ. ವೃತ್ತಿ ಜೀವನದಲ್ಲಿ ಉತ್ತಮ ಸೇವೆ ನೀಡಿದ ಅವರ ಸೇವೆಗೆ ಅಭಿನಂದಿಸುತ್ತೇನೆ. ನಮ್ಮ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾದ ಬಹುತೇಕರು ಸದೃಢ ದೇಹ ಸಾಮರ್ಥ್ಯವನ್ನು ಹೊಂದಿರುವುದನ್ನು ಕಂಡಿದ್ದೇನೆ. ಇಲ್ಲಿ ತಲೆಯ ಜೊತೆ ದೇಹಕ್ಕೂ ವ್ಯಾಯಾಮ ಇದ್ದೇ ಇರುವಂತಹ ಕೆಲಸ ಆಗಿದೆ. ಮಂಜುನಾಥ ಡಿ.ಹೆಗಡೆ ಅವರ ಸೇವೆ ಪ್ರಾಮಾಣಿಕತೆಗೆ ಈಗ ಗೌರವ ಸಿಗುವಂತಾಗಿದೆ. ಅವರ ಸೇವೆ ಅನುಭವ ಇಲಾಖೆಗೆ ಸದಾ ಇರಲಿ, ಎಂದರು.
ಈ ಸಂದರ್ಭದಲ್ಲಿ ಚಿಪಗಿ ಪೋಸ್ಟ ಮಾಸ್ಟರ್ ಶ್ರೀರಾಮ ಶಾನಭಾಗ, ಶಿರಸಿ ನಗರಸಭೆ ಸದಸ್ಯ ರಾಘವೇಂದ್ರ ಶೆಟ್ಟಿ, ಹಾಗೂ ಇತರರು ಉಪಸ್ಥಿತರಿದ್ದರು.
ಶ್ರೀಮತಿ ಹೆಗಡೆ ಸ್ವಾಗತ ಗೀತೆ ಹಾಡಿದರು. ಚಂದ್ರು ಎಸಳೆ ಸ್ವಾಗತಿಸಿ, ನಿರೂಪಿಸಿದರು.

Share This
300x250 AD
300x250 AD
300x250 AD
Back to top