ಶಿರಸಿ: ಕೀವು ತುಂಬಿ ಮಾಮೂಲಿಗಿಂತ 25ಕ್ಕೂ ಹೆಚ್ಚುಪಟ್ಟು ದೊಡ್ಡದಾಗಿ ಊದಿಕೊಂಡಿದ್ದ ಗರ್ಭಕೋಶವನ್ನು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಶ್ವಾನವೊಂದಕ್ಕೆ ಮರುಜೀವ ನೀಡಿದ ಘಟನೆ ವರದಿಯಾಗಿದೆ.
ಹೃದಯ ಸಂಬಂಧಿ ಖಾಯಿಲೆ, ವಯೋಸಹಜ ಸಮಸ್ಯೆ, ಇವೆರಡರ ಮಧ್ಯೆ ಕೀವು ತುಂಬಿದ ಗರ್ಭಕೋಶವನ್ನು ತೆಗೆಯಲೇಬೇಕಾದ ಅನಿವಾರ್ಯತೆಯ ಮಧ್ಯೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಮರಾಠಿಕೊಪ್ಪದ ರಾಜಧಾನಿ ಸೌಹಾರ್ದದ ಅಧ್ಯಕ್ಷ ಕಿರಣ್ ಚಿತ್ರಕಾರ್ ಹಾಗೂ ಅವರ ಕುಟುಂಬದ ಅಚ್ಚುಮೆಚ್ಚಿನ ಪಗ್ ನಾಯಿಗೆ ಸಮರ್ಪಣದ ಡಾ.ಪಿ.ಎಸ್.ಹೆಗಡೆ ಜೀವದಾನ ನೀಡಿದ್ದಾರೆ.
ಶಸ್ತ್ರಚಿಕಿತ್ಸೆ ಕ್ಲಿಷ್ಟಕರವಾಗಿಲ್ಲದಿದ್ದರೂ, ಶ್ವಾನದ ದೈಹಿಕ ಪರಿಸ್ಥಿತಿಯನ್ನು ಪರಿಗಣಿಸಿ ಹೆಚ್ಚಿನ ಸೌಲಭ್ಯ ಹೊಂದಿರುವ ನಗರಕ್ಕೆ ಕೊಂಡೊಯ್ಯಲು ಪಶುವೈದ್ಯರು ಸಲಹೆ ನೀಡಿದ್ದರು. ಆದರೂ ಮಾಲಕರ ನಂಬಿಕೆ, ಒತ್ತಾಯ, ವಿಶ್ವಾಸ ಹಾಗೂ ಅಭಿಮಾನಕ್ಕೆ ಕಟ್ಟುಬಿದ್ದು ಶಿರಸಿಯಲ್ಲಿಯೇ ಶಸ್ತ್ರಚಿಕಿತ್ಸೆ ನಡೆಸಿ, ಶ್ವಾನದ ಜೀವ ಉಳಿಸಿ ಕುಟುಂಬಸ್ಥರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸ್ಕ್ಯಾನರ್ ಅಥವಾ ಎಕ್ಸ್‌ರೇ ಸಹಾಯವಿಲ್ಲದೇ ಕೇವಲ ರಕ್ತಪರೀಕ್ಷೆ, ರೋಗದ ಲಕ್ಷಣದಿಂದಲೇ ರೋಗವನ್ನು ಪತ್ತೆಹಚ್ಚಿ ಸಾವಿರಾರು ಪ್ರಾಣಿಗಳ ಜೀವ ಉಳಿಸಿದ ಡಾ.ಪಿ.ಎಸ್.ಹೆಗಡೆಯವರ ಕಾರ್ಯ ಶ್ಲಾಘನೀಯವಾಗಿದೆ..
ಪ್ರಸ್ತುತ ಶ್ವಾನ ಚೇತರಿಸಿಕೊಳ್ಳುತ್ತಿದ್ದು, ಪಶುವೈದ್ಯರ ಮೇಲಿನ ವಿಶ್ವಾಸಾರ್ಹತೆ ಹೆಚ್ಚಿಸುವಲ್ಲಿ ಟಿಎಸ್ಎಸ್ ಸಮರ್ಪಣ ಕಟಿಬದ್ಧವಾಗಿದೆ ಎಂಬುದು ಸಾಬೀತಾಗಿದೆ. ಶಸ್ತ್ರಚಿಕಿತ್ಸೆ ವೇಳೆ ಡಾ.ಸುಬ್ರಾಯ ಭಟ್ ಮುದ್ದಿನಪಾಲು, ಸಿಸ್ಟರ್ ಮೋಹಿನಿ, ರಘುಪತಿ ಭಟ್, ವಿವೇಕ್ ಭಟ್ ಸಹಕರಿಸಿದರು.