ಹೊನ್ನಾವರ : ಕುಮಟಾ ವಿಧಾನಸಭಾ ಕ್ಷೇತ್ರ ಎರಡು ಬ್ಲಾಕ್ ಕಾಂಗ್ರೇಸ್ ಕಮಿಟಿಯನ್ನು ಒಳಗೊಂಡಿದೆ. ಹೊನ್ನಾವರ ಮತ್ತು ಕುಮಟಾಕ್ಕೆ ಪ್ರತ್ಯೇಕವಾಗಿರುವ ಬ್ಲಾಕ್ ಕಮಿಟಿಯವರು ತಮ್ಮ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆ ಜೊತೆಗೆ, ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ.
ಇತ್ತೀಚಿಗೆ ಚಂದಾವರ ಗ್ರಾಪಂ ವ್ಯಾಪ್ತಿಯ ಚಂದಾವರ ನಾಕಾ ವೃತ್ತದಿಂದ ಹೊನ್ನಾವರ ರಸ್ತೆಯಲ್ಲಿಯ ಸುಲ್ತಾನ್ ಕೇರಿವರೆಗೆ ಕಾಲುವೆ ನಿರ್ಮಾಣಕ್ಕೆ ಪಂಚಾಯತ್ ಮುಂದಾಗಿತ್ತು. ಆ ಸಂದರ್ಭದಲ್ಲಿ ನಾಕಿಯಲ್ಲಿರುವ ಬಡವನ ಗುಜರಿ ಅಂಗಡಿ ದ್ವಂಸಗೊಳಿಸಿದ್ದಾರೆ ಎಂದು ಸ್ಥಳೀಯ ಜನರ ಆಕ್ರೋಶಕ್ಕೂ ಕಾರಣವಾಗಿತ್ತು. ಸ್ಥಳೀಯ ಗ್ರಾಮ ಪಂಚಾಯತ ಸದಸ್ಯನೆ ಇದಕ್ಕೆ ಕಾರಣ ಎಂದು ಅವರ ವಿರುದ್ದ ಆರೋಪ ಮಾಡಲಾಗಿತ್ತು.
ಈ ಘಟನೆಗೆ ಅನೇಕರು ಬಡ ಅಂಗಡಿಕಾರನ ಬಗ್ಗೆ ಅನುಕಂಪ ವ್ಯಕ್ತಪಡಿಸಿ, ಅವನ ಪರವಾಗಿ ಧ್ವನಿ ಎತ್ತಿದ್ದರು. ಅದರಂತೆ ಕುಮಟಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಭುವನ್ ಭಾಗ್ವತ್ ಈ ಸ್ಥಳಕ್ಕೆ ಬಂದು ಗುಜರಿ ಅಂಗಡಿ ಧ್ವಂಸಗೊಳಿಸಿರುವುದನ್ನು ಪರಿಶೀಲಿಸಿ, ಅಂಗಡಿ ಕಳೆದುಕೊಂಡವನಿಗೆ ಧೈರ್ಯ ತುಂಬಿ ಹೋಗಿದ್ದರು.
ಆದರೆ ಅವರು ಬಂದು ಹೋದ ಮೇಲೆ ಕಾಂಗ್ರೇಸ್ ಪಡಸಾಲೆಯಲ್ಲಿ ಚರ್ಚೆ ಹುಟ್ಟು ಹಾಕಿದೆ. ಅಂಗಡಿ ಧ್ವಂಸವಾಗಿರುವ ಸ್ಥಳ ಹೊನ್ನಾವರ ಬ್ಲಾಕ್ ಕಾಂಗ್ರೇಸ್ ವ್ಯಾಪ್ತಿಗೆ ಒಳಪಡುತ್ತದೆ. ಭುವನ್ ಭಾಗ್ವತ್ ಕುಮಟ ತಾಲೂಕಿನ ಕಾರ್ಯವ್ಯಾಪ್ತಿಗೆ ಒಳ ಪಡುತ್ತಾರೆ. ಹೀಗಿರುವಾಗ ಕುಮಟಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ತಮ್ಮ ಕಾರ್ಯವ್ಯಾಪ್ತಿಯನ್ನು ಹೊನ್ನಾವರದ ತನಕ ವಿಸ್ತರಣೆ ಮಾಡಿಕೊಂಡರೆ ಎನ್ನುವ ಚರ್ಚೆ ಪ್ರಾರಂಭಗೊಂಡಿದೆ.
ಈಗಾಗಲೇ ಹೊನ್ನಾವರ ಬ್ಲಾಕ್ ಕಾಂಗ್ರೇಸ್ ನಲ್ಲಿ ಬಿನ್ನಮತ ಬುಗಿಲೆದ್ದಿದೆ. ಆರೋಪ, ಪ್ರತ್ಯಾರೋಪ ಬಿರುಸುಗೊಂಡಿದೆ. ಕ್ಷೇತ್ರದಲ್ಲಿಯು ಆಳ್ವಾ ಬಣ, ಮಾಜಿ ಶಾಸಕಿ ಶಾರದಾ ಶೆಟ್ಟಿ ಬಣ, ಪರ ಕ್ಷೇತ್ರದ ಪ್ರಭಾವಿ ಮುಖಂಡನ ರಾಜಕೀಯ ದಾಳ, ಇವರ ಹೊರತಾಗಿ ಈ ಹಿಂದೆ ಟಿಕೆಟ್ ರೇಸ್ ನಲ್ಲಿದ್ದವರ ಬಣಗಳ ರಾಜಕೀಯ ಚಟುವಟಿಕೆಯ ನಡುವೆ ಕುಮಟ ಬ್ಲಾಕ್ ಅಧ್ಯಕ್ಷರು ಹೊನ್ನಾವರ ಬ್ಲಾಕ್ ವ್ಯಾಪ್ತಿಗೆ ಪ್ರವೇಶ ಮಾಡಿ ತನ್ನ ಉಪಸ್ಥಿತಿ ತೋರಿಸಿಕೊಂಡಿದ್ದಾರೆ. ಭುವನ್ ಭಾಗ್ವತ್ ಪರಾಜೀತ ಅಭ್ಯರ್ಥಿ ನಿವೇದಿತ್ ಆಳ್ವಾ ಗುಂಪಿನಲ್ಲಿ ಕಾಣಿಸಿಕೊಂಡವರು, ಕುಮಟಾ ಬ್ಲಾಕ್ ಕೂಡ ಆಳ್ವಾ ಅಣತಿಯಂತೆ ಕಾರ್ಯನಿರ್ವಹಿಸುತ್ತಾರೆ ಎನ್ನುವ ವರ್ತಮಾನ ಕ್ಷೇತ್ರದಲ್ಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭುವನ್ ಭಾಗ್ವತ್ ಕೂಡ ಟಿಕೆಟ್ ಆಕಾ0ಕ್ಷಿ ಆಗಿದ್ದರು. ಮುಂಬರುವ ಚುನಾವಣೆ ಮೇಲೆ ಇವರು ಕಣ್ಣಿಟ್ಟು ಕ್ಷೇತ್ರ ಪೂರ್ತಿ ಸುತ್ತಾಟ ಮಾಡಲು ಈಗಲೇ ಪ್ರಾರಂಭ ಮಾಡಿರಬಹುದೇ ಎನ್ನುವ ಹಲವು ಪ್ರಶ್ನೆ ಹುಟ್ಟು ಹಾಕಿದೆ.
ಕುಮಟಾ ಕ್ಷೇತ್ರದಲ್ಲಿ ಮಾಜಿ ಶಾಸಕರು, ಪ್ರಭಾವಿ ಮುಖಂಡರು, ಒಟ್ಟಾರೆ ಹೊನ್ನಾವರ ಬ್ಲಾಕ್ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಮುಖ ಮುಖಂಡರು ಇರುವುದರ ನಡುವೆ ಅವರನ್ನು ಚೇಸ್ ಮಾಡಿ ಭುವನ್ ಪಕ್ಷ ಸಂಘಟನೆ ಮಾಡುತ್ತಿರಬಹುದೇ ಎನ್ನುವ ಅನುಮಾನಕ್ಕೂ ಎಡೆ ಮಾಡಿಕೊಟ್ಟಿದೆ.