ರಾಷ್ಟ್ರದ ಒಳಿತಿಗೆ ಎಂದಿಗೂ ಕಟಿಬದ್ಧ | ಕಲೆ, ಶಿಕ್ಷಣ, ಸಹಕಾರಿ ರಂಗದಲ್ಲಿ ಅಪರಿಮಿತ ಸೇವೆ
ಶಿರಸಿ: ಸಮಾಜದಲ್ಲಿ ಎಲ್ಲ ವರ್ಗಗಳ ಜನರಿರುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ಥರಹದ ಅವಶ್ಯಕತೆ, ಅನಿವಾರ್ಯತೆ ಇರುತ್ತದೆ. ಎಲ್ಲರನ್ನೂ ಮೆಚ್ವಿಸಲು ಯಾರಿದಂಲೂ ಸಾಧ್ಯವಿಲ್ಲ. ಆದರೆ ಕಷ್ಟದಲ್ಲಿರುವ ಜನರಿಗೆ ಕಿರು ಸಹಾಯಹಸ್ತವೊಂದು ದೊರೆತಾಗ, ಕಷ್ಟದ ಸಮಯದಲ್ಲಿ ಅದು ತುಂಬಾ ಮರೆಯಲಾಗದ ಉಪಕಾರ ಎನಿಸುತ್ತದೆ. ರೋಗಿಗಳು, ಬಡವರು, ಅಶಕ್ತರು ಹೀಗೆ ಕೈಲಾಗದವರಿಗೆ ಆ ಸಮಯಕ್ಕೆ ಸಹಾಯಹಸ್ತವೊಂದು ದೊರೆತಾಗ ಜೀವನಪರ್ಯಂತ ಕೃತಜ್ಞತೆಯ ಭಾವನೆ ಅಂತವರಲ್ಲಿ ಇರುತ್ತದೆ. ಹೀಗೆ ಯಾರಿಗೆ ನಿಜವಾಗಿ ಸಮಸ್ಯೆಯಿದ್ದು, ಸಹಾಯದ ಅನಿವಾರ್ಯತೆ ಇರುತ್ತದೆಯೋ ಅಂತವರಿಗೆ ತಮ್ಮ ಕೈಲಾದಷ್ಟು ಪ್ರಾಮಾಣಿಕವಾಗಿ ಸಹಾಯ ಮಾಡಿದ ವ್ಯಕ್ತಿಗಳಲ್ಲಿ ಕೆಡಿಸಿಸಿ ನಿರ್ದೇಶಕ, ಹಾಲಿ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರಾಗಿರುವ ಸುರೇಶ್ಚಂದ್ರ ಕೆಶಿನ್ಮನೆ ಒಬ್ಬರಾಗಿ ಕಾಣುತ್ತಾರೆ.
ಜನರ ಸಮಸ್ಯೆಗೆ ಸ್ಪಂದಿಸುವ ಕೆಶಿನ್ಮನೆ ಅವರ ಮಾನವೀಯ ಗುಣಕ್ಕೆ ಸರಿಸಾಟಿಯಿಲ್ಲ ಎಂದೇ ಜನರ ಭಾವನೆ. ಕಷ್ಟದ ಸಮಯಕ್ಕೆ, ತಮ್ಮ ಕೈಲಾದಷ್ಟು ಸಹಾಯ ಮಾಡುವ ಮನೋಭಾವ, ಜನಾನುರಾಗಿ ವಿಚಾರಗಳು ಅವರನ್ನು ಇನ್ನಷ್ಟು ಜನರೊಟ್ಟಿಗೆ ಬಿಗಿಯಾಗಿ ಬಂಧಿಸಿದೆ. ಕಷ್ಟಕಾಲದಲ್ಲಿ ಕೈ ಹಿಡಿವ ಗುಣದ ಕಾರಣಕ್ಕೆ ಕ್ಷೇತ್ರದ ಜನತೆಗೂ ಅವರೆಂದರೆ ಗೌರವ, ಅಚ್ಚುಮೆಚ್ಚು.
ಕಲೆ, ಸಾಹಿತ್ಯ, ಶಿಕ್ಷಣಕ್ಕೆ ಸಹಾಯ ಹಸ್ತ:
ಕೇವಲ ಹೈನುಗಾರಿಕಾ ಕ್ಷೇತ್ರ ಮಾತ್ರವಲ್ಲದೇ ನಾಟಕ ರಂಗದಲ್ಲಿ ತೀವ್ರ ಆಸಕ್ತಿಯಿದ್ದ ಕೆಶಿನ್ಮನೆ ಸ್ವತಃ ನಾಟಕ ಪಾತ್ರಧಾರಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಜೊತೆಗೆ ಯಕ್ಷಗಾನ, ಸಂಗೀತ ಹೀಗೆ ಯಾವುದೇ ಕಾರ್ಯಕ್ರಮಗಳಿರಲಿ. ಕಳೆದ ಸಾಕಷ್ಟು ವರ್ಷಗಳಿಂದ ಸಂಘಟಕರಿಗೆ ನೆರವಾಗಲು ತಮ್ಮ ಕೈಲಾದ ಕಲಾಸೇವೆಯನ್ನು ಮಾಡಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿರುವ ಅವರು ಸ್ವರ್ಣವಲ್ಲೀ ಶ್ರೀಮಠದ ಶಿಷ್ಯರಾಗಿ, ಶ್ರೀಮಠದ ಪ್ರಮುಖ ಕಾರ್ಯಕ್ರಮಗಳಲ್ಲಿ ಜವಾಬ್ದಾರಿ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಶೈಕ್ಷಣಿಕ ವಿಭಾಗದಲ್ಲಿಯೂ ಮುಂದಾಳಾಗಿರುವ ಸುರೇಶ್ಚಂದ್ರ ಕೆಶಿನ್ಮನೆ ಎಂ.ಇ.ಎಸ್ ಶಿಕ್ಷಣ ಸಂಸ್ಥೆ, ಭೈರುಂಬೆ ಶ್ರೀ ಶಾರದಾಂಬಾ ಸಂಸ್ಥೆಗಳಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಪ್ರತಿವರ್ಷ ಬಡ ವಿದ್ಯಾರ್ಥಿಗಳಿಗೆ ತಮ್ಮ ಕೈಲಾದಷ್ಟು ಅನುಕೂಲ ಮಾಡಿಕೊಡುತ್ತಾ ಬಂದಿದ್ದಾರೆ.
ಒಟ್ಟಾರೆಯಾಗಿ ಸಮಾಜದ ಎಲ್ಲ ರಂಗದಲ್ಲಿ, ಜನರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸುರೇಶ್ಚಂದ್ರ ಕೆಶಿನ್ಮನೆ ತಮ್ಮ ರಾಜಕೀಯ ಕ್ಷೇತ್ರದಲ್ಲಿ ಇನ್ನೂ ಎತ್ತರಕ್ಕೆ ಏರಲಿ, ಆಮೂಲಕ ಜನತೆಯ ಆಶೋತ್ತರಗಳಿಗೆ ಇನ್ನಷ್ಟು ಸ್ಪಂದಿಸುವಂತಾಗಲಿ ಎಂಬುದೇ ಅವರ ಅಭಿಮಾನಿಗಳ ಆಶಯವಾಗಿದೆ.
ಸಹಕಾರಿ ರಂಗದಲ್ಲಿ ದಶಕದ ಅನುಭವ:
ಭೈರುಂಬೆ ಹಾಲು ಉತ್ಪಾದಕ ಸಹಕಾರಿ ಸಂಸ್ಥೆಯ ಅಧ್ಯಕ್ಷರಾಗಿ ದಶಕಗಳಿಗೂ ಹೆಚ್ಚು ಕಾಲದಿಂದ ಕಾರ್ಯ ನಿರ್ವಹಿಸುವುದರ ಜೊತೆಗೆ ಹುಳಗೋಳ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಜಿಲ್ಲೆಯ ಪ್ರತಿಷ್ಠಿತ ಕೆಡಿಸಿಸಿ ಬ್ಯಾಂಕಿಗೆ ಹಾಲುಉತ್ಪಾದಕರು ಹಾಗು ಮೀನುಗಾರರ ಕ್ಷೇತ್ರದಿಂದ ಪ್ರತಿನಿಧಿಸಿ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಪ್ರಸ್ತುತ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
RSS ನ ಕಾರ್ಯಕರಾಗಿ ರಾಷ್ಟ್ರೀಯ ಒಳಿತಿಗೆ ಆದ್ಯತೆ:
ಆರಂಭದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ, ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ಸುರೇಶ್ಚಂದ್ರ ಕೆಶಿನ್ಮನೆ ಭಾರತೀಯ ಜನತಾ ಪಕ್ಷದ ಕಟ್ಟರ್ ಕಾರ್ಯಕರ್ತರಾಗಿ, ಜಿಲ್ಲೆಯಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಕ್ಷೇತ್ರದಲ್ಲಿನ ಕೆಲಸದಲ್ಲಿ ರಾಷ್ಟ್ರೀಯ ವಿಚಾರಗಳಿಗೆ, ಹಿತಾಸಕ್ತಿಗೆ ಆದ್ಯತೆ ನೀಡುವ ಮೂಲಕ ರಾಷ್ಟ್ರೀಯತೆಯ ಪ್ರಬಲ ಪ್ರತಿಪಾದಕರಾಗಿ ಗುರುತಿಸಿಕೊಂಡಿದ್ದಾರೆ.