Slide
Slide
Slide
previous arrow
next arrow

ಎಡೆಬಿಡದೆ ಸುರಿದ ಮಳೆ: ಜನಜೀವನ ಅಸ್ತವ್ಯಸ್ತ

300x250 AD

ಭಟ್ಕಳ: ತಾಲೂಕಿನಾದ್ಯಂತ ಬುಧವಾರ ಬೆಳಿಗ್ಗೆಯಿಂದ ಸುರಿಯುತ್ತಿರುವ ಗಾಳಿಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ ಪರಿಣಾಮ ಜನರು ತೊಂದರೆ ಅನುಭವಿಸಿದ್ದಾರೆ. ಗಾಳಿಮಳೆಗೆ ವಿವಿಧೆಡೆ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ.

ಹವಾಮಾನ ಇಲಾಖೆ ಕರಾವಳಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿತ್ತು. ಅದರಂತೆ ನಿನ್ನೆ ಮಂಗಳವಾರ ಸಂಜೆಯಿಂದ ಶುರುವಾದ ಮಳೆಗೆ ಜನರ ಜೀವನ ಆಸ್ತವ್ಯಸ್ತಗೊಂಡಿದೆ. ತಾಲೂಕಿನ ಹೆಬಳೆ ಜಟಗೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ಮುರುಡೇಶ್ವರ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕೂಡ ಸಂಪೂರ್ಣ ಜಲಾವೃತಗೊಂಡಿದೆ.

ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರಿಗೆ ತೊಂದರೆ ಉಂಟಾಗಿದೆ. ಭಟ್ಕಳ ಶಂಸುದ್ದಿನ್ ಸರ್ಕಲ್ ಸಮೀಪ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಂದಿನಂತೆ ನೀರು ನಿಂತಿತ್ತು. ರಂಗಿನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂಡ ಎಂದಿನಂತೆ ನೀರು ನಿಂತ ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸಿದರು.

ಗಾಳಿಮಳೆಗೆ ವಿವಿಧೆಡೆ ಆಸ್ತಿಪಾಸ್ತಿಗಳಿಗೆ ಹಾನಿ :
ಮಾವಳ್ಳಿ 1 ಗ್ರಾಮದ ಜನತಾ ಕಾಲೋನಿಯ ಅಂಗನವಾಡಿ ಕಟ್ಟಡದ ಮೇಲೆ ಬೆಳಿಗ್ಗೆ 8 ಗಂಟೆಗೆ ಅಕೇಶಿಯ ಮರ ಬಿದ್ದು ಅಂಗನವಾಡಿ ಕೇಂದ್ರದ ಹೆಂಚು ಮುರಿದು ಬಿದ್ದಿದೆ. ಗೋಡೆಯಲ್ಲಿ ಸ್ವಲ್ಪ ಪ್ರಮಾಣದ ಬಿರುಕು ಕಾಣಿಸಿಕೊಂಡಿದೆ. ಈ ವೇಳೆ ಅಂಗನವಾಡಿ ಕೇಂದ್ರದಲ್ಲಿ ಯಾವುದೇ ಮಕ್ಕಳು ಇಲ್ಲದೆ ಇರುವುದರಿಂದ ಅನಾಹುತ ತಪ್ಪಿದಂತಾಗಿದೆ.

300x250 AD

ಶಿರಾಲಿ 1 ಗ್ರಾಮದ ಗಣಪತಿ ನಾರಾಯಣ ದೇವಾಡಿಗ ಇವರ ವಾಸ್ತವ್ಯದ ಮನೆ ಮೇಲೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಹೆಬಳೆ ಗ್ರಾಮದ ತೆಂಗಿನಗುಂಡಿ, ಹಿರೇಕೇರಿಯಲ್ಲಿ ಇಂದು ಮಳೆಯ ನೀರಿನ ಜೊತೆಗೆ ಸಮುದ್ರದ ನೀರು ಸಹ ಉಕ್ಕಿ ಸಾರ್ವಜನಿಕ ವಾಸ್ತವ್ಯ ಇರುವ ಪ್ರದೇಶಗಳಿಗೆ ನುಗ್ಗಿದೆ. ಈ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಹೆಬಳೆ ಗ್ರಾಮ ಪಂಚಾಯತ ಪಿ.ಡಿ.ಓ. ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಕೆಲವರ ಮನೆಯಂಚಿನವರೆಗೂ ನೀರು ತುಂಬಿದೆ. ಕೃಷಿ ಜಮೀನಿಗೂ ನೀರು ನುಗ್ಗಿದೆ.

ಕೊಪ್ಪ ಗ್ರಾಮದ ಹಿಂಡ ಸಮೀಪದ ವೆಂಕಟೇಶ ದುರ್ಗು ನಾಯ್ಕರವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ತೀವ್ರ ಹಾನಿಯಾಗಿದೆ. ಯಾವುದೇ ಜನ ಜಾನುವಾರುಗಳಿಗೆ ಜೀವ ಹಾನಿಯಾಗಿಲ್ಲ. ಇವರ ವಾಸ್ತವ್ಯದ ಮನೆಗೆ ಕಳೆದ ಸಾಲಿನಲ್ಲಿ ಸಹ ಹಾನಿಯಾಗಿದ್ದು, ಪರಿಹಾರ ನೀಡಲಾಗಿತ್ತು.

ಬೇಂಗ್ರೆ ಚಿಟ್ಟಿಹಕ್ಕಲಿನ ಗೊಯ್ದು ಈರಯ್ಯ ದೇವಾಡಿಗ ಮನೆಯ ಮೇಲೆ ಅಡಿಕೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ದುರ್ಗಮ್ಮ ನಾರಾಯಣ ದೇವಡಿಗ ಮಠದಮನೆ ಪಕ್ಕಾ ಮನೆಯ ಮೇಲ್ಛಾವಣಿ ಭಾಗಶಃ ಹಾನಿಯಾಗಿದೆ. ಪಾರ್ವತಿ ಸುಕ್ರಯ್ಯ ದೇವಡಿಗ ಮಠದಮನೆ ಪಕ್ಕಾಮನೆಯ ಮೇಲ್ಛಾವಣಿ ಹೆಂಚು ಹಾರಿಹೋಗಿ ಭಾಗಶಃ ಹಾನಿಯಾಗಿದೆ. ಗಣಪತಿ ಸುಕ್ರಯ್ಯ ದೇವಡಿಗ ಬೊಗ್ರಿಜಡ್ಡು ವಾಸ್ತವ್ಯದ ಪಕ್ಕಾ ಮನೆಯ ಮೇಲ್ಛಾವಣಿಯ ಹೆಂಚು ಗಾಳಿಮಳೆಗೆ ಹಾರಿಹೋಗಿ ಭಾಗಶಃ ಹಾನಿಯಾಗಿದೆ. ಅದೃಷ್ಟವಶಾತ್ ಜನಜಾನುವಾರುಗಳಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ.

Share This
300x250 AD
300x250 AD
300x250 AD
Back to top