ಶಿರಸಿ: ಸಪ್ಟೆಂಬರ್-2023 ನೇ ಮಾಹೆಯ ರೂ.5 ಪ್ರೋತ್ಸಾಹಧನ ಜೂ.25,ಮಂಗಳವಾರದಂದು ಜಮಾ ಆಗಿದೆ ಎಂದು ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನಿರ್ದೇಶಕರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ತಿಳಿಸಿದರು.
ಈ ಸಂದರ್ಭದಲ್ಲಿ ಹೇಳಿಕೆ ನೀಡಿದ ಅವರು ಇದೇ ಜೂನ್ ಮಾಹೆಯ 4 ಮತ್ತು 12 ನೇ ತಾರೀಖಿನಂದು ಏಪ್ರಿಲ್ ಹಾಗೂ ಮಾರ್ಚ್-2024 ಮಾಹೆಗಳ ಪ್ರೋತ್ಸಾಹಧನ ಜಮಾ ಆಗಿದ್ದು, ಈಗ ಸಪ್ಟೆಂಬರ್-2023 ನೇ ಮಾಹೆಯ ರೂ. 5 ಪ್ರೋತ್ಸಾಹಧನ ಕೂಡ ಹಾಲು ಉತ್ಪಾದಕರ ರೈತರ ಖಾತೆಗೆ ಜಮಾ ಆದಂತಾಗಿದೆ ಎಂದರು. ಇನ್ನುಳಿದಂತೆ 2023-2024 ನೇ ಸಾಲಿನಲ್ಲಿ ಅಕ್ಟೋಬರ್, ನವೆಂಬರ್, ಡಿಸೆಂಬರ್, ಜನವರಿ, ಫೆಬ್ರವರಿ ಹಾಗೂ ಮಾಹೆಗಳ ರೂ. 5 ಪ್ರೋತ್ಸಾಹಧನ ಸರ್ಕಾರದಿಂದ ಹಾಲು ಉತ್ಪಾದಕ ರೈತರ ಖಾತೆಗೆ ಸರ್ಕಾರದಿಂದ ಜಮಾ ಆಗಬೇಕಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರಕ್ಕೂ ಕೂಡ ಮನವಿ ಸಲ್ಲಿಸಲಾಗಿದ್ದು, ಬಾಕಿ ಇರುವ ಮಾಹೆಗಳ ರೂ.5 ಪ್ರೋತ್ಸಾಹಧನ ಕೂಡ ಶ್ರೀಘ್ರವೇ ರಾಜ್ಯ ಸರ್ಕಾರದಿಂದ ಹಾಲು ಉತ್ಪಾದಕ ರೈತರ ಖಾತೆಗೆ ಜಮಾ ಆಗುವ ನೀರಿಕ್ಷೆಯಿದೆ ಎಂದು ಮಾಹಿತಿ ನೀಡಿದರು. ಸಪ್ಟೆಂಬರ್-2023 ನೇ ಮಾಹೆಯ ರೂ.5 ಪ್ರೋತ್ಸಾಹಧನ ಜಮಾ ಆಗದ ಹಾಲು ಉತ್ಪಾದಕ ರೈತರು ಕೂಡಲೇ ಆಯಾ ವ್ಯಾಪ್ತಿಯ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಿದರು.