ಶಿರಸಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಉನ್ನತ ಶಿಕ್ಷಣ ಆಯುಕ್ತರು, ಸಂಬಂಧಪಟ್ಟ ಸಚಿವರ ಗಮನಕ್ಕೆ ತರುತ್ತೇನೆ. ತನಿಖೆ ನಡೆಸಲು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಜತೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದ್ದಾರೆ.
ಅವರು ಮಂಗಳವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅವ್ಯವಹಾರ ನಡೆದಿರುವುದು ಪತ್ರಿಕೆಗಳಲ್ಲಿ ಪ್ರಕಟವಾದ ಬಳಿಕ ಬಂದಿದ್ದು, ಆ ಬಳಿಕ ಕಾಲೇಜು ಅಭಿವೃದ್ಧಿ ಸಮಿತಿಗೆ ಸೂಚನೆ ನೀಡಿ, ನಿವೃತ್ತ ಪ್ರಾಂಶುಪಾಲರ ಬಳಿ ಪ್ರತಿಯೊಂದೂ ಲೆಕ್ಕ ಮತ್ತು ದಾಖಲೆಪತ್ರಗಳನ್ನು ಪಡೆದು ಜವಾಬ್ದಾರಿ ವಹಿಸಿಕೊಳ್ಳಲು ಇಂದಿನ ಪ್ರಾಂಶುಪಾಲರಿಗೆ ತಿಳಿಸಿದ್ದೇನೆ. ಶಿರಸಿ ಶೈಕ್ಷಣಿಕ ಜಿಲ್ಲೆಯು ಗುಣಮಟ್ಟದ ಶಿಕ್ಷಣದಲ್ಲಿ ಮುಂದಿದೆ. ಉತ್ತಮ ಉಪನ್ಯಾಸಕಕರಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸ್ಪರ್ಧೆ ನೀಡುವ ಮಟ್ಟದಲ್ಲಿ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಬೆಳೆದಿದ್ದಾರೆ. ರಾಜ್ಯಮಟ್ಟದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯು ಹೆಸರು ಮಾಡುತ್ತಿದೆ. ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೊಸ ಅಭಿವೃದ್ಧಿ ಸಮಿತಿ ರಚನೆ ಮಾಡಿ, ಆಡಳಿತ ವ್ಯವಸ್ಥಿತ ರೀತಿಯಲ್ಲಿ ಅಚ್ಚುಕಟ್ಟಾಗಿ ನಡೆಸಬೇಕು. ಪ್ರತಿ ತಿಂಗಳಿಗೊಮ್ಮೆ ಮಾತ್ರವಲ್ಲದೇ, ವಾರಕ್ಕೊಮ್ಮೆ ಸಭೆ ನಡೆಸುವಂತೆ ಹಾಗೂ ಕಾಲೇಜಿನ ಚಟುವಟಿಕೆಗಳ ಬಗ್ಗೆ ಗಮನಹರಿಸಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಹಿಂದಿನ ಶಾಸಕರು, ಹಿಂದಿನ ಅಭಿವೃದ್ಧಿ ಸಮಿತಿ ಏನು ಮಾಡಿದೆ ಎಂಬುದು ನನ್ನ ಗಮನಕ್ಕಿಲ್ಲ. ಆ ಸಮಿತಿಯನ್ನು ದೂರಲು ಇಷ್ಟಪಡುವುದಿಲ್ಲ. ಅವ್ಯವಹಾರದ ಕುರಿತು ತನಿಖೆ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಕಾಲೇಜಿನ 16 ಬ್ಯಾಂಕ್ ಖಾತೆಗಳಿದ್ದು, ಖರ್ಚು-ವೆಚ್ಚದ ಪೂರ್ಣ ಮಾಹಿತಿ ಇನ್ನೂ ಕೊಟ್ಟಿಲ್ಲ. ಇದರಿಂದ ಅನಾನುಕೂಲ ಉಂಟಾಗುತ್ತಿದೆ. ದಾಖಲೆಪತ್ರಗಳನ್ನು ಇಟ್ಟಿರುವ ಕಪಾಟನ್ನು ಸೀಲ್ ಮಾಡಿ ಹೋಗಿದ್ದಾರೆ. ಇದರ ಕುರಿತು ಸಂಯುಕ್ತ ನಿಬಂಧಕರ ಬಳಿ ಚರ್ಚಿಸಲಾಗುತ್ತದೆ ಎಂದು ಹೇಳಿದರು.
ಉಪನ್ಯಾಸಕರ ಮಧ್ಯೆ ಗುಂಪುಗಾರಿಕೆ ಇದೆ ಎಂದು ತಿಳಿದು ಬಂದಿದೆ. ಉಪನ್ಯಾಸಕರ ಜತೆ ಸಭೆ ನಡೆಸಿ ಚರ್ಚಿಸುತ್ತೇನೆ. ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣ ಸಂಸ್ಥೆಯಲ್ಲಿ ಇಂತಹ ವ್ಯವಸ್ಥೆಯನ್ನು ಖಂಡಿತ ಸಹಿಸಲು ಸಾಧ್ಯವಿಲ್ಲ. ಹಂತ ಹಂತವಾಗಿ ವ್ಯವಸ್ಥೆಯನ್ನು ಸರಿದಾರಿಗೆ ತರಲಾಗುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಎಂ.ಎಂ.ಕಮನಳ್ಳಿ, ಪ್ರಾಂಶುಪಾಲೆ ಮಂಜುಳಾ ಪೂಜಾರ ಹಾಗೂ ಸಮಿತಿಯ ಸದಸ್ಯರು ಇದ್ದರು.