ಶಿರಸಿ: ಜನಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಗದಂತೆ ಪ್ರತಿಯೊಂದು ಇಲಾಖೆಗಳು ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರಿಂದ ಯಾವುದೇ ದೂರುಗಳು ಬಾರದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ್ ಕಾಂದೂ ಅವರು ಸೂಚನೆ ನೀಡಿದರು.
ಬುಧವಾರ ಶಿರಸಿ ತಾಲೂಕಿನ ಸದಾಶಿವಳ್ಳಿ ಗ್ರಾಮ ಪಂಚಾಯತ್ ನ ಜೇನು ಸಾಕಾಣಿಕ ಕೇಂದ್ರ, ಹೊಸದಾಗಿ ನಿರ್ಮಾಣವಾದ ಗ್ರಂಥಾಲಯ ಕೇಂದ್ರ ಹಾಗೂ ಮಳೆ ನೀರಿನ ಕೊಯ್ಲು ವೀಕ್ಷಿಸಿ ಕಾಮಗಾರಿಗಳಿಗೆ ಸಂಬಂಧಿಸಿದ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ನಂತರ ದೊಡ್ನಳ್ಳಿ ಗ್ರಾಮ ಪಂಚಾಯತ್ ನ ನಾರಾಯಣಗುರು ನಗರದಲ್ಲಿ ಜೆಜೆಎಮ್ ಯೋಜನೆಯಡಿ ನಿರ್ಮಾಣವಾದ ನೀರಿನ ಟ್ಯಾಂಕ್ ವೀಕ್ಷಿಸಿ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿದರು.
ನಗರದಲ್ಲಿ ಸಂಜೀವಿನಿ ಒಕ್ಕೂಟದಡಿ ನಿರ್ಮಾಣವಾದ ಸಂಜೀವಿನಿ ಮಳಿಗೆಗೆ ಭೇಟಿ ನೀಡಿದ ಅವರು ಸಂಜೀವಿನಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ದೃಷ್ಟಿಯಿಂದ ಸರ್ಕಾರಿ ಕಚೇರಿಗಳಲ್ಲಿ ಅವಶ್ಯಕವಿರುವ ವಸ್ತುಗಳನ್ನು ಖರೀದಿಸಲು ಸೂಚನೆ ನೀಡಲು ಅಧಿಕಾರಿಗಳಿಗೆ ತಿಳಿಸಿದರು.
ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಮಕ್ಕಳ ಹಾಜರಾತಿ, ಅವರ ಅಗತ್ಯತೆಗಳು, ಗ್ರಂಥಾಲಯ ವೀಕ್ಷಣೆ, ಹಾಗೂ ಮಕ್ಕಳ ವಸತಿ ಕೋಣೆಗಳು ಸೇರಿದಂತೆ ಅಡುಗೆ ಕೋಣೆಗಳನ್ನು ವೀಕ್ಷಿಸಿ ಆಹಾರ ಪದಾರ್ಥಗಳನ್ನು ಪರಿಶೀಲಿಸಿ ಗುಣಮಟ್ಟ ಕಾಯ್ದುಕೊಳ್ಳುವಂತೆ ತಿಳಿಸಿದರು.
ತಾಲೂಕಿನ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಮಾತನಾಡಿಸಿ ಯೋಗಕ್ಷೇಮ ವಿಚಾರಿಸುವ ಮೂಲಕ ಆರೋಗ್ಯದ ಜಾಗೃತೆ ವಹಿಸುವಂತೆ ತಿಳಿಸಿದರು. ಇನ್ನೂ ಈ ಆರೋಗ್ಯ ಕೇಂದ್ರದಲ್ಲಿ ನಡೆಯುತ್ತಿರುವ ಧ್ಯಾನ ಕೇಂದ್ರ ಸಂಪರ್ಕಿಸಿ ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸತೀಶ ಹೆಗಡೆ, ನರೇಗಾ ಸಹಾಯಕ ನಿರ್ದೇಶಕ ಬಿ.ವಾಯ್ ರಾಮಮೂರ್ತಿ,ತಾಲೂಕು ಪಂಚಾಯತ್ ವ್ಯವಸ್ಥಾಪಕ ಸುಬ್ರಾಯ ಭಟ್, PRED ಅಧಿಕಾರಿಗಳು, ಶಿಕ್ಷಣಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ತಾಲೂಕು ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.
ಶಿರಸಿ ತಾಲೂಕಿಗೆ ಸಿಇಒ ಭೇಟಿ, ವಿವಿಧ ಕಾಮಗಾರಿಗಳ ಪರಿಶೀಲನೆ
