ಹೊನ್ನಾವರ: ಸ್ಪಿಕ್ ಮೆಕೆ ಹಾಗೂ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಹಯೋಗದಲ್ಲಿ ದೇಶದ ಉನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಉಸ್ತಾದ್ ಶಾಹಿದ್ ಪರ್ವೇಜ್ ಖಾನ್ ಅವರ ಸಿತಾರ್ ವಾದನ ಹಾಗೂ ಇವರಿಗೆ ತಬಲಾ ಸಾಥ್ ನೀಡಿದ ಖ್ಯಾತ ಕಲಾವಿದ ಪಂ.ರವೀಂದ್ರ ಯಾವಗಲ್ ಅವರ ಸಂಗೀತ ಕಾರ್ಯಕ್ರಮ ನೆರೆದವರನ್ನು ರಂಜಿಸಿತು.
ಮಲ್ನಾಡ್ ಪ್ರೋಗ್ರೆಸಿವ್ ಎಜ್ಯುಕೇಶನ್ ಸೊಸೈಟಿ ಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು.
ಸ್ಪಿಕ್ ಮೆಕೆ ಇದು ಯುವ ಜನಾಂಗದವರಲ್ಲಿ ಶಾಸ್ತ್ರೀಯ ಸಂಗೀತದ ಅಭಿರುಚಿಯನ್ನು ಬೆಳೆಸುವ ದೃಷ್ಟಿಯಿಂದ ಹುಟ್ಟಿಕೊಂಡ ಸಾಮಾಜಿಕ ಸಂಸ್ಥೆಯಾಗಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸಂಗೀತವನ್ನು ಪ್ರಚುರಪಡಿಸುತ್ತಾ ಬಂದಿರುವ ಈ ದಿಗ್ಗಜ ಕಲಾವಿದರು ಎಸ್.ಡಿ.ಎಂ.ಕಾಲೇಜಿನಲ್ಲಿ ಸಂಗೀತ ಸುಧೆಯನ್ನು ಹರಿಸಿದರು.
ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ವತಿಯಿಂದ ಉಸ್ತಾದ್ ಶಾಹಿದ್ ಪರ್ವೇಜ್ ಖಾನ್ ಹಾಗೂ ಪಂ.ರವೀಂದ್ರ ಯಾವಗಲ್ ಅವರನ್ನು ಆತ್ಮೀಯವಾಗಿ ಶಾಲು ಹೊದಿಸಿ ಗೌರವಿಸಲಾಯಿತು.
ಸುಮಾರು ಒಂದುವರೆ ತಾಸು ನಡೆದ ಸಂಗೀತ ಕಾರ್ಯಕ್ರಮ ನೆರೆದವರನ್ನು ಹೊಸ ಲೋಕಕ್ಕೆ ಕೊಂಡೊಯ್ದಿತು.ಉಸ್ತಾದ್ ಶಾಹಿದ್ ಪರ್ವೇಜ್ ಖಾನ್ ಅವರು ಸಂಗೀತದ ಬಗ್ಗೆ ಮಾತನಾಡುತ್ತಾ ನಾವು ಯಾವುದೇ ದೇಶಕ್ಕೆ ಹೊದರೂ ನಮ್ಮ ಸಂಸ್ಕೃತಿಯನ್ನು ಮರೆಯಬಾರದು ಎಂದರು. ನಂತರ ರಾಗ್-ಚಾರುಕೇಶಿಯನ್ನು ಸಿತಾರ್ ದಲ್ಲಿ ನುಡಿಸಿ ಸಂಗೀತಾಭಿಮಾನಿಗಳ , ನೆರೆದ ಶೋತ್ರುಗಳನ್ನು ರಂಜಿಸಿದರು.
ಮಲ್ನಾಡ್ ಪ್ರೋಗ್ರೆಸಿವ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರು ಹಾಗೂ ಸದಸ್ಯರು, ಪ್ರಾಂಶುಪಾಲರು, ಸಂಗೀತಾಭಿಮಾನಿಗಳು , ಉಪನ್ಯಾಸಕರು ಪದವಿ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.ಕಾಲೇಜಿನ ಸಂಗೀತ ವಿಭಾಗದ ವತಿಯಿಂದ ಈ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ನಡೆಯಿತು.