ಕುಮಟಾ: ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕುಮಟಾದ ಗೋರೆಯ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನ 2024-25ನೇ ಶೈಕ್ಷಣಿಕ ಸಾಲಿನ ಪಠ್ಯ – ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಅದ್ದೂರಿಯಾಗಿ ನಡೆದಿದ್ದು ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯ ಸಂಸ್ಥಾಪಕರಾದ ಡಾ. ತೇಜಸ್ವಿನಿ ಅನಂತಕುಮಾರ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು “ವಿದ್ಯಾರ್ಥಿಗಳು ಅಂಕ ಗಳಿಕೆಯ ಜೊತೆಗೆ ಸಂಸ್ಕಾರಯುತವಾದ ಶಿಕ್ಷಣ ಪಡೆದಾಗ ಮಾತ್ರ ಸಮಾಜದಲ್ಲಿ ಸತ್ಪ್ರಜೆಯಾಗಲು ಸಾಧ್ಯ. ಅಂತಹ ಶಿಕ್ಷಣವನ್ನು ಡಾ. ಹೆಗಡೆಯವರು ಕಾಲೇಜಿನ ಮೂಲಕ ನೀಡುತ್ತಿರುವುದು ಪ್ರಶಂಸನೀಯ. ಪ್ರತಿಭಾವಂತರ ಜಿಲ್ಲೆ ಎಂದೇ ಕರೆಯಿಸಿಕೊಳ್ಳುವ ಉತ್ತರಕನ್ನಡ ಜಿಲ್ಲೆಯ ಈ ಪ್ರತಿಷ್ಠಿತ ಸಂಸ್ಥೆಯಲ್ಲಿ ಪ್ರವೇಶಾತಿ ದೊರಕಿರುವುದು ವಿದ್ಯಾರ್ಥಿಗಳ ಭಾಗ್ಯ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರತಿಭೆಗಳು ಈ ಕಾಲೇಜಿನಿಂದ ಗುರುತಿಸಿಕೊಳ್ಳುವಂತಾಗಲಿ ಎಂದು ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಉ.ಕ ಜಿಲ್ಲೆಯ ಮಾನ್ಯ ಉಪನಿರ್ದೇಶಕರಾದ ಸತೀಶ ಬಿ. ನಾಯ್ಕ, ಪ್ರಾರಂಭವಾದ ಕೇವಲ ೩ ವರ್ಷಗಳಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಗುಣಮಟ್ಟದ ಶಿಕ್ಷಣದ ಸದುಪಯೋಗ ಪಡೆದುಕೊಂಡು ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಸಂಸ್ಥೆಯ ಪ್ರಾಚಾರ್ಯರಾದ ಡಿ.ಎನ್. ಭಟ್ಟ ಆಗಮಿಸಿದ ಸರ್ವರನ್ನೂ ಸ್ವಾಗತಿಸಿದರು. ಉಪನ್ಯಾಸಕರಾದ ಶಂಕರ ನಾರಾಯಣ ಉಪಾಧ್ಯಾಯರವರು ವಂದಿಸಿದರು. ಶ್ರೀಮತಿ ಪೂಜಾ ಭಟ್ಟರವರು ಕಾರ್ಯಕ್ರಮ ನಿರೂಪಿಸಿದರು.
ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನ ಅಧ್ಯಕ್ಷರಾದ ಡಾ. ಜಿ.ಜಿ.ಹಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಾರ್ಯದರ್ಶಿಗಳಾದ ಡಾ. ಸೀತಾಲಕ್ಷ್ಮಿ ಹೆಗಡೆ, ಪ್ರಾಚಾರ್ಯರಾದ ಡಿ.ಎನ್ ಭಟ್ಟ, ಆಡಳಿತಾಧಿಕಾರಿ ಶಶಾಂಕ ಶಾಸ್ತ್ರಿ, ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸಹಕರಿಸಿದರು.