ಶಿರಸಿ: ವೈಷ್ಣೋದೇವಿ ಯಾತ್ರಾ ತಂಡದ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿರುವ ಕ್ರಮ ಖಂಡಿಸಿ ನಗರದಲ್ಲಿ ಹಿಂದು ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಇಲ್ಲಿಯ ರಾಘವೇಂದ್ರ ಮಠ ವೃತ್ತದ ಬಳಿ ಸೇರಿದ ಕಾರ್ಯಕರ್ತರು, ಹಿಂದುಗಳನ್ನು ಹತ್ತಿಕ್ಕುವ ಕ್ರಮ ಇದಾಗಿದೆ ಎಂದು ಆರೋಪಿಸಿದರು. ಈ ವೇಳೆ ಮಾತನಾಡಿದ ವಿಶ್ವಹಿಂದು ಪರಿಷತ್ ಪ್ರಮುಖ ಗಂಗಾಧರ ಹೆಗಡೆ “ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬರುತ್ತಿದ್ದಂತೆಯೇ ಯಾತ್ರಾರ್ಥಿಗಳ ಮೇಲೆ ಉಗ್ರಗಾಮಿ ದಾಳಿ ನಡೆದಿದೆ. ಕಾಂಗ್ರೆಸ್ ಈ ಚುನಾವಣೆಯಲ್ಲಿ ಹಿಂದಿನ ಬಾರಿಗಿಂತ ಜಾಸ್ತಿ ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ಉಗ್ರಗಾಮಿಗಳಿಗೂ ಧೈರ್ಯ ಬಂದಿದೆ. ಹಿಂದುಗಳು ಯಾತ್ರೆಗೆ ತೆರಳಲು ಭಯದ ವಾತಾವರಣ ನಿರ್ಮಿಸುವುದೇ ಈ ದಾಳಿಯ ಹಿಂದಿನ ಉದ್ದೇಶ. ಕಾಂಗ್ರೆಸ್ ಎಂದಿದ್ದರೂ ಮುಸ್ಲಿಂಗೆ ಬೆಂಬಲ ನೀಡುತ್ತಿದೆ. ಹಿಂದುಗಳು ಎಂದಿಗೂ ಭಯೋತ್ಪಾದನೆಗೆ ಹೆದರುವುದಿಲ್ಲ ಎಂದರು.
ಬಳಿಕ ಮೆರವಣಿಗೆಯಲ್ಲಿ ತೆರಳಿ ಉಪವಿಭಾಗಾಧಿಕಾರಿ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಸಲ್ಲಿಸಿ ಭಯೋತ್ಪಾದನೆ ಹೋಗಲಾಡಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು. ವಿಶ್ವಹಿಂದು ಪರಿಷತ್ ಮತ್ತು ಭಜರಂಗದಳದ ಪ್ರಮುಖರಾದ ಅಮಿತ್ ಶೇಟ್, ಹರೀಶ ಕರ್ಕಿ, ಕೇಶವ ಮರಾಠೆ, ನಂದನ ಸಾಗರ, ನಾಗರಾಜ ನಾಯ್ಕ, ಉದಯ ಕಳೂರ್, ಸಂಜಯ ಸಜ್ಜನ, ಕೇಶವ ಡೊಂಬೆ, ಮೇಘನಾ ಶಾಸ್ತ್ರಿ ಸೇರಿದಂತೆ ಇತರರಿದ್ದರು.