ದಾಂಡೇಲಿ : ಜೂನ್.17ರಂದು ನಡೆಯಲಿರುವ ಬಕ್ರೀದ್ ಹಬ್ಬವನ್ನು ಶಾಂತಿ, ಸೌಹಾರ್ದಯಿಂದ ಆಚರಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ನಗರ ಪೊಲೀಸ್ ಠಾಣೆಯಲ್ಲಿ ಶಾಂತಿಪಾಲನಾ ಸಭೆಯನ್ನು ಬುಧವಾರ ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪೊಲೀಸ್ ಉಪಾಧೀಕ್ಷಕ ಶಿವಾನಂದ ಮದರಕಂಡಿ ಅವರು ದಾಂಡೇಲಿಯ ಜನ ಶಾಂತಿ, ಸೌಹಾರ್ದತೆಗೆ ವಿಶೇಷವಾದ ಒತ್ತನ್ನು ಕೊಡುತ್ತಿರುವುದು ಶ್ಲಾಘನೀಯ. ಪೊಲೀಸ್ ಇಲಾಖೆಯೊಂದಿಗೆ ಅತ್ಯುತ್ತಮವಾದ ಸಂಬಂಧವನ್ನು ಇಲ್ಲಿನ ಜನತೆ ಇಟ್ಟುಕೊಂಡಿದ್ದಾರೆ. ಬರಲಿರುವ ಬಕ್ರೀದ್ ಹಬ್ಬವನ್ನು ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಶಾಂತಿ, ಸೌಹಾರ್ದತೆಯಿಂದ ಆಚರಿಸುವಂತೆ ವಿನಂತಿಸಿದರು. ಬಕ್ರೀದ್ ಹಬ್ಬದ ದಿನದಂದು ಯಾವುದೇ ರೀತಿಯ ಪ್ರಾಣಿವಧೆಯನ್ನು ಮಾಡಬಾರದು. ಬಕ್ರೀದ್ ಹಬ್ಬದಂದು ಪ್ರಾರ್ಥನೆಗೆ ತೆರಳುವ ಮಾರ್ಗದಲ್ಲಿ ಅನ್ಯಕೋಮಿನ ವಿರುದ್ಧ ಯಾವುದೇ ಘೋಷಣೆಗಳನ್ನು ಕೂಗಬಾರದು. ಪ್ರಾರ್ಥನೆಗೆ ತೆರಳುವ ಸಮಯದಲ್ಲಿ ಬೈಕ್ ಹಾಗೂ ಇನ್ನಿತರ ವಾಹನಗಳನ್ನು ಅಡ್ಡಾದಿಡ್ಡಿ ಚಲಾಯಸುವಂತಿಲ್ಲ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆಯನ್ನು ವಹಿಸಿಕೊಳ್ಳಬೇಕು. ಬಕ್ರೀದ್ ಹಬ್ಬದ ನಂತರ ಯಾವುದೇ ನದಿ ದಂಡೆ ಅಥವಾ ಪ್ರವಾಸಿ ತಾಣಗಳಿಗೆ ಹೋದ ಸಂದರ್ಭದಲ್ಲಿ ಸೂಕ್ತ ಜಾಗರೂಕ ಕ್ರಮಗಳನ್ನು ಕೈಗೊಳ್ಳಬೇಕು. ಬಕ್ರೀದ್ ಹಬ್ಬದ ಪ್ರಾರ್ಥನೆಯ ಸಂದರ್ಭದಲ್ಲಿ ಯಾವುದೇ ರಾಜಕೀಯ ಚರ್ಚೆಗಳು ಮಾಡಬಾರದು. ಬಕ್ರೀದ್ ಪ್ರಾರ್ಥನೆ ಮುಕ್ತಾಯದ ನಂತರ ಅನಾವಶ್ಯಕವಾಗಿ ರಸ್ತೆಗಳಲ್ಲಿ, ಬೀದಿಗಳಲ್ಲಿ ಗುಂಪು ಗುಂಪಾಗಿ ನಿಲ್ಲಬಾರದು. ನಗರದಲ್ಲಿ ಶಾಂತಿ ಕಾಪಾಡಲು ಇಲಾಖೆಯೊಂದಿಗೆ ನಗರದ ನಾಗರೀಕರು ಕೈ ಜೋಡಿಸಬೇಕು. ಯಾವುದೇ ಸಮಸ್ಯೆಗಳಿದ್ದರೂ ನಗರದ ಜನತೆ ಮುಕ್ತವಾಗಿ ಸಂಪರ್ಕಿಸಬಹುದೆಂದು ಹೇಳಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಸಿಪಿಐ ಭೀಮಣ್ಣ.ಎಂ.ಸೂರಿ, ದಾಂಡೇಲಿ ಸರ್ವ ಧರ್ಮ ಸಮನ್ವಯತೆಯ ನಗರವಾಗಿದೆ. ನಗರದ ಜನತೆ ವರ್ಷ ಪೂರ್ತಿ ಶಾಂತಿಯುತವಾದ ವಾತಾವರಣವನ್ನು ನಿರ್ಮಿಸಿ, ನಮ್ಮ ಇಲಾಖೆಗೆ ಅತ್ಯುತ್ತಮ ಸಹಕಾರ ನೀಡುತ್ತಿರುವುದು ಸ್ಮರಣೀಯ. ಈ ನಿಟ್ಟಿನಲ್ಲಿ ನಗರದ ಜನತೆ ಅಭಿನಂದನೆಗೆ ಅರ್ಹರು ಎಂದು ಹೇಳಿದರು.
ಸಭೆಯಲ್ಲಿ ನಗರ ಹಾಗೂ ನಗರದ ಸಮೀಪದ ವಿವಿಧ ಗ್ರಾಮಗಳ ಮುಸ್ಲಿಂ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಮತ್ತು ವಿವಿಧ ಸಮಾಜಗಳ ಪದಾಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಗಣ್ಯರು ಉಪಸ್ಥಿತರಿದ್ದು ತಮ್ಮ ತಮ್ಮ ಅಭಿಪ್ರಾಯ, ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಪಿಎಸ್ಐಗಳಾದ ಐಆರ್.ಗಡ್ಡೇಕರ್ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಕೃಷ್ಣ ಅರಕೇರಿ ವಂದಿಸಿದರು. ರವೀಂದ್ರ ಬಿರದಾರ ಮತ್ತು ಜಗದೀಶ್ ನಿರೂಪಿಸಿದರು.