ಕಾರವಾರ: ರಾಜ್ಯ ಸರ್ಕಾರದ ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆಯಡಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮಾಧ್ಯಮಿಕ/ಪ್ರೌಢ ಶಾಲಾ ವಿದ್ಯಾರ್ಥಿ ಕ್ರೀಡಾಪಟು (6 ರಿಂದ 10 ನೇ ತರಗತಿ) ಗಳಿಗೆ ವಾರ್ಷಿಕ ರೂ. 10,000 ಗಳಂತೆ ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
2023-24 ನೇ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ ಅರ್ಹ ಕ್ರೀಡಾಪಟುಗಳು ಕಚೇರಿಯ ಅಧಿಕೃತ ಜಾಲತಾಣ : https://sevasindhuservices.karnataka.gov.in ಆನ್‌ಲೈನ್ ಮೂಲಕ ಜೂನ್ 30 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿದಾರರು 2023-24 ನೇ ಸಾಲಿನಲ್ಲಿ ವಿದ್ಯಾರ್ಥಿಯಾಗಿದ್ದು, ಮಾಧ್ಯಮಿಕ ಅಥವಾ ಪ್ರೌಢ ಶಾಲೆ (6 ರಿಂದ 10 ನೇ ತರಗತಿ) ಯಲ್ಲಿ ಓದುತ್ತಿರಬೇಕು. ಅರ್ಜಿದಾರರು ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ ನೊಂದಾಯಿತವಾದ ಕ್ರೀಡಾ ಸಂಸ್ಥೆಗಳು ದಿನಾಂಕ: 01-04-2023 ರಿಂದ 31-03-2024 ರವರೆಗೆ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರಬೇಕು ಅಥವಾ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಅಧಿಕೃತ ಕ್ರೀಡಾ ಸಂಸ್ಥೆಗಳು ಆಯೋಜಿಸುವ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿರಬೇಕು. ಅಂದರೆ ದಿನಾಂಕ: 01-04-2023 ರಿಂದ 31-03-2024 ರ ಅವಧಿಯಲ್ಲಿ ನಡೆದ ಕ್ರೀಡಾಕೂಟಗಳಲ್ಲಿನ ಸಾಧನೆಗಳನ್ನು ಮಾತ್ರ ಪರಿಗಣಿಸಲಾಗುವುದು. ರಾಷ್ಟ್ರೀಯ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಭಾಗವಹಿಸಿದ್ದಲ್ಲಿ ಅಂತಹ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದಾಗಿದೆ. ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಭಾಗವಹಿಸಿದ್ದಲ್ಲಿ ಅಂತಹ ಕ್ರೀಡಾ ಪಟುಗಳು ಅರ್ಜಿ ಸಲ್ಲಿಸಬಹುದಾಗಿದೆ. ಒಬ್ಬ ಕ್ರೀಡಾಪಟು ಒಂದಿಕ್ಕಿಂತ ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಿದ್ದರೂ ಸಹ ವಾರ್ಷಿಕ ಒಂದೇ ವಿದ್ಯಾರ್ಥಿವೇತನದ ಮೊತ್ತಕ್ಕೆ ಮಾತ್ರ ಅರ್ಹರಿರುತ್ತಾರೆ. ವೇತನದ ಮೊತ್ತವನ್ನು ವಾರ್ಷಿಕ ರೂ. 10,000 ಗಳನ್ನು ಮಾತ್ರ ಮಂಜೂರು ಮಾಡಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.