ಶಿರಸಿ: ಜ್ಞಾನ ಎಂಬುದು ಜಗತ್ತಿನ ಪ್ರತಿಭಾ ಸಂಪತ್ತು. ಅದು ಸುಪ್ರಕಾಶದ ಬೆಳಕನ್ನು ನೀಡಿ ಜಗದ ಚಿಂತನೆಗಳಿಗೆ ಸ್ಫೂರ್ತಿ ನೀಡಿದೆ. ಪ್ರಪಂಚವನ್ನೇ ಆಳಬಲ್ಲ ಶಕ್ತಿ ವೈಚಾರಿಕತೆಗೆ ಇದೆ. ಐಡಿಯಾ ರೂಲ್ಸ್ ದ ವಲ್ಡ್ ಎಂಬ ಮಾತು ಜಾಗತಿಕವಾಗಿ ಪ್ರಸಿದ್ಧವಿದೆ ಎಂದು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್‌ನ ರಾಜ್ಯ ಸಲಹೆಗಾರ ಉತ್ತರ ಕನ್ನಡ ಜಿಲ್ಲಾ ಉಪಾಧ್ಯಕ್ಷ ಡಾ. ಜಿ. ಎ. ಹೆಗಡೆ ಸೋಂದಾ ನುಡಿದರು.
ಅವರು ರಾಜ್ಯ ಮಟ್ಟದ 12ನೇಯ ಚುಟುಕು ಸಮ್ಮೇಳನದಲ್ಲಿ ವೈಚಾರಿಕ ಚಿಂತನ ಗೋಷ್ಠಿಯ ಘನ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಆಹಾರ, ಬಟ್ಟೆ, ವಸತಿಯಂತೆಯೇ ಜ್ಞಾನವು ಬದುಕಿಗೆ ಪ್ರಧಾನವಾಗಿದೆ. ಜೀವನವನ್ನು ಅರಳಿಸಿ ಬೆಳೆಸುವ, ಬೆಳಗುವ ತನ್ಮೂಲಕ ಮನುಕುಲವನ್ನು ಬೆಳಗಿಸುವ ವೈಚಾರಿಕ ಚಿಂತನೆ ಇಂದಿನ ಅಗತ್ಯವಾಗಿದೆ ಎಂದರು. ಜ್ಞಾನದ ಹುಡುಕಾಟದಲ್ಲಿ ಹುಡುಗಾಟ ಇರಲು ಸಾಧ್ಯವಿಲ್ಲ. ಎತ್ತರ ಎತ್ತರಕ್ಕೆ ಏರಿದಂತೆ ಇನ್ನೂ ಏರಬೇಕಾದದ್ದು ಬಹಳಷ್ಟು ಇದೆ ಎಂಬ ಪರಿಜ್ಞಾನ ಎಲ್ಲರಿಗೂ ಅಗತ್ಯ. “ಕಲಿತದ್ದು ಕೈ ಅಗಲ, ಕಲಿಯಬೇಕಾದ್ದು ಕಡಲಗಲ” ಎಂಬ ವೈಚಾರಿಕ ಚಿಂತನೆ ಅತ್ಯಗತ್ಯ. ಸಾವಿರಾರು ಗ್ರಂಥಗಳನ್ನು ಅಧ್ಯಯನ ಮಾಡಿ ಸಾವಿರಾರು ಜನರಿಂದ ವೈಚಾರಿಕ ಉಪದೇಶ ಪಡೆದ ಶ್ರೇಷ್ಠ ತತ್ವಜ್ಞಾನಿ ಅರಿಸ್ಟಾಟಲನಿಗೆ ಕೊನೆಯಲ್ಲಿ “ನನಗೇನೂ ಗೊತ್ತಿಲ್ಲ ತಿಳಿಯಬೇಕಾದದ್ದು ಇನ್ನೂ ಬೆಟ್ಟದಷ್ಟಿದೆ” ಎಂಬ ಜ್ಞಾನೋದಯ ಉಂಟಾಗಿತ್ತು ಎಂದರು.
ಉಪನ್ಯಾಸಕ ವಸಂತ ನಾಯ್ಕ ಅಂಕೋಲಾ ವಿಚಾರ ಮಂಡಿಸಿ ನಮ್ಮ ಜಿಲ್ಲೆಯ ಚುಟುಕು ಸಾಹಿತಿಗಳು ಸಾಹಿತ್ಯ ಕ್ಷೇತ್ರಕ್ಕೆ ಅಡಿಪಾಯ ನೀಡಿ ಬೆಳೆಯಲು ಕಾರಣರಾಗಿದ್ದಾರೆ ಎಂದರು. ಸಂಸ್ಕೃತ ವಿದ್ವಾಂಸ ವಿ. ರಘುಪತಿ ಭಟ್ಟ ಉಡುಪಿ, ಭಾರತೀಯ ಪರಂಪರೆಯಲ್ಲಿ ಅಡಕವಾದ ಅಪಾರ ಜ್ಞಾನ ರಾಶಿ ಜಗತ್ತಿಗೇ ಸಂಸ್ಕಾರ ನೀಡಬಲ್ಲ ಸಾಮರ್ಥ್ಯ ಹೊಂದಿದೆ ಎಂದರು. ಶಿಕ್ಷಕಿ ಯಶಸ್ವಿನಿ ಶ್ರೀಧರಮೂರ್ತಿ, ಕಾನಸೂರು ವಿಚಾರ ಮಂಡಿಸಿ ಇಂದಿನ ಯುವ ಜನಾಂಗ ಸಾಹಿತ್ಯದತ್ತ ಹೊರಳಿ ಆಳವಾದ ಅಧ್ಯಯನಕ್ಕೆ ಮನಮಾಡುತ್ತಿಲ್ಲ. ಇದು ಖೇದದ ಸಂಗತಿಯಾಗಿ ತಲ್ಲಣಕ್ಕೆ ಕಾರಣವಾಗಿದೆ ಎಂದರು. ಸಾಹಿತಿ ಮತ್ತು ಭಾನುಲಿ ಅಧಿಕಾರಿ ಎನ್. ವಿ. ರಮೇಶ ಮೈಸೂರು ಇಂದಿನ ಯುವ ಜನಾಂಗವು ಬದುಕಿನಲ್ಲಿ ಆರ್ಥಿಕ ಭದ್ರತೆ ಕುರಿತಾಗಿ ಮಹತ್ವ ನೀಡಿದಷ್ಟು ಭಾವನಾತ್ಮಕ ಭದ್ರತೆಯ ಕುರಿತಾಗಿ ಮಹತ್ವ ನೀಡದಿರುವುದು ಹಲವು ತಲ್ಲಣಗಳಿಗೆ ಕಾರಣವಾಗಿದೆ. ಸಾಹಿತ್ಯಾಸಕ್ತಿಯಲ್ಲಿ ಹಲವು ಸಮಸ್ಯೆಗಳಿಗೆ ಉತ್ತರವಿದೆ ಎಂದರು.
ಶಿಕ್ಷಕಿ ರೇಣುಕಾ ನಾಗರಾಜ ಶಿರಸಿ, ಸಾಹಿತಿ ಸತೀಶ ವಾಲಿ ಬಿಜಾಪುರ ಗೋಷ್ಠಿಯನ್ನು ನಿರ್ವಹಿಸಿದರು. ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಜಿಲ್ಲಾಧ್ಯಕ್ಷ ಜಿ.ಯು. ನಾಯಕ ಅಂಕೋಲಾ ಉಪಸ್ಥಿತರಿದ್ದರು.