ಕುಮಟಾ: ಪರಿಸರವಿಲ್ಲದೇ ಮಾನವಕುಲ ಬದುಕಲು ಸಾಧ್ಯವಿಲ್ಲ. ವರ್ಷದಿಂದ ವರ್ಷಕ್ಕೆ ಪರಿಸರವು ವಿನಾಶದತ್ತ ಸಾಗುತ್ತಿದೆ. ಇದಕ್ಕೆ ನಾವೇ ಹೊಣೆಗಾರರು. ನಾವೆಲ್ಲರೂ ಪರಿಸರವನ್ನು ಸಂರಕ್ಷಿಸುವಲ್ಲಿ ಪಣತೊಡದಿದ್ದಲ್ಲಿ ಮುಂದಿನ ದಿನಗಳಲ್ಲಿ ತುಂಬಾ ಪಶ್ಚಾತ್ತಾಪಪಡಬೇಕಾಗುತ್ತದೆ ಎಂಬುದಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರವಾರ ವಿಭಾಗದ ಉಪಪರಿಸರ ಅಧಿಕಾರಿಗಳಾದ ಡಾ. ಗಣಪತಿ ಹೆಗಡೆ ಹೇಳಿದರು.
ಇವರು ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆವಹಿಸಿದ ಡಾ. ಪ್ರೀತಿ ಭಂಡಾರಕರ ಮುಂದೆ ಶಿಕ್ಷಕರಾಗುವ ಬಿ.ಇಡಿ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಕುರಿತು ಹೇಗೆ ಕಾಳಜಿ ವಹಿಸಬೇಕೆಂಬುದಾಗಿ ವಿವರಿಸಿದರು. ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಛೇರಿ ಕಾರವಾರ, ಸಂಗಮ ಸೇವಾಸಂಸ್ಥೆ(ರಿ) ಬಾಳೆಗುಳಿ ಅಂಕೋಲಾ ಹಾಗೂ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಕುಮಟಾ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆಸಲಾಯಿತು. ಸಂಗಮ ಸೇವಾಸಂಸ್ಥೆ ಅಧ್ಯಕ್ಷರಾದ ರವಿ ಶೆಟ್ಟಿಯವರು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಕುಮಾರಿ ಸಮೀಕ್ಷಾ ಮತ್ತು ಉಷಾ ಪ್ರಾರ್ಥಿಸಿದರು. ದಿವ್ಯಾ ಭಟ್ ವಂದಿಸಿದರು. ಚೈತ್ರಾ ಮೋರೆ ಹಾಗೂ ಸುಮತಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಪ್ರೊ. ಉಮೇಶ ನಾಯ್ಕ ಎಸ್. ಜೆ. ಹಾಗೂ ತಿಮ್ಮಣ್ಣ ಭಟ್ ಉಪಸ್ಥಿತರಿದ್ದರು.