ಡಿಅರ್ ಆದೇಶಕ್ಕೆ ಜಾಂಯ್ಟ್ ರಿಜಿಸ್ಟ್ರಾರ್ ತಡೆಯಾಜ್ಞೆ | ಶಿರಸಿಯಲ್ಲಿ ಸಾವಿರ ಜನರಿಂದ ಪ್ರತಿಭಟನಾ ಜಾಥಾ
ಶಿರಸಿ: ಪ್ರತಿಷ್ಟಿತ ಸಹಕಾರಿ ಸಂಸ್ಥೆ ಟಿಎಸ್ಎಸ್ ನಲ್ಲಿ ಈ ಹಿಂದಿನ ಆಡಳಿತ ಮಂಡಳಿ ವಜಾಗೊಳಿಸಿ, ಆಡಳಿತಾಧಿಕಾರಿ ನೇಮಕ ಹೊರಡಿಸಿ ಜಿಲ್ಲಾ ಸಹಕಾರಿ ಇಲಾಖೆಯ ಉಪನಿಬಂಧಕರ ಆದೇಶಕ್ಕೆ ಬೆಳಗಾವಿ ಜಾಂಯ್ಟ್ ರಿಜಿಸ್ಟ್ರಾರ್ ತಡೆಯಾಜ್ಞೆ ನೀಡಿದರು. ಇದರಿಂದ ತೆರವಾದ ಆಡಳಿತಾಧಿಕಾರಿ ಸ್ಥಾನದ ಕರ್ತವ್ಯ ನಿರ್ವಹಣೆಗಾಗಿ ಪುನಃ ಅಧ್ಯಕ್ಷರಾಗಿ ಗೋಪಾಲಕೃಷ್ಣ ವೈದ್ಯ ಪುನಃ ಅಧಿಕಾರ ಸ್ವೀಕರಿಸಿದರು.
ಕಳೆದ ಶುಕ್ರವಾರ ಕಾರವಾರದಲ್ಲಿ ಸಹಕಾರ ಇಲಾಖೆ ಉಪನಿಬಂಧಕರು ಏಕಾಏಕಿಯಾಗಿ ಹಾಲಿ ಆಡಳಿತ ಮಂಡಳಿಯನ್ನು ವಜಾ ಮಾಡಿ, ಆಡಳಿತಾಧಿಕಾರಿ ನೇಮಕ ಮಾಡಿದ್ದರು. ತಕ್ಷಣವೇ ಆಡಳಿತಾಧಿಕಾರಿ ಅಧಿಕಾರವನ್ನೂ ಸ್ವೀಕಾರ ಮಾಡಿದ್ದರು. ಇದರ ಬೆನ್ನಲೇ ವಜಾಗೊಂಡ ಆಡಳಿತ ಮಂಡಳಿ ಪ್ರಮುಖರು ಬೆಳಗಾವಿಯ ಜಂಟಿ ನಿರ್ದೇಶಕರ ಬಳಿ ನ್ಯಾಯಕ್ಕೆ ಮೊರೆ ಹೋಗಿತ್ತು.
ಸೋಮವಾರ ಇದಕ್ಕೆ ಸಂಬಂಧಿಸಿದಂತೆ ಸಂಯುಕ್ತ ನಿಬಂಧಕರು ಹೊಸ ಆದೇಶ ಹೊರಡಿಸಿ, ಕಾರವಾರದ ಸಹಕಾರ ಇಲಾಖೆಯ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದಾರೆ. ಅಲ್ಲದೇ ಹಿಂದೆ ಚುನಾವಣಾ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಮಂಡಳಿಗೆ ಅಧಿಕಾರ ನೀಡಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ. ಇದರಿಂದ ಮಂಗಳವಾರ ಬೆಳಿಗ್ಗೆ ನಿಕಟಪೂರ್ವ ಆಡಳಿತ ಮಂಡಳಿಯವರು ಆಗಮಿಸಿ, ಆದೇಶ ಪ್ರತಿಯನ್ನು ಓದಿಕೊಂಡು ತಕ್ಷಣ ಆಡಳಿತಾಧಿಕಾರಿಯಿಂದ ಅಧಿಕಾರ ಸ್ವೀಕರಿಸಿದರು. ವೈದ್ಯ ಪುನಃ ಅಧ್ಯಕ್ಷ ಸ್ಥಾನದಲ್ಲಿ ಕೂತು, ಸಹಕಾರಿಗೆ ಗೆಲುವು ಎಂದು ಘೋಷಿಸಿದರು.
ನಿಬಂಧಕರ ಆದೇಶ ಬರುವುದಕ್ಕೂ ಮೊದಲೇ ಮಂಗಳವಾರ ಸಹಕಾರಿ ಇಲಾಖೆಯ ಕರಾಳ ದಿನ ಎಂದು ಘೋಷಿಸಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಮಧ್ಯಂತರದಲ್ಲಿ ಆದೇಶ ಪ್ರತಿ ದೊರಕಿದ ಕಾರಣ, ಹಿಂದೆ ಆಡಳಿತಾಧಿಕಾರಿ ಅಧಿಕಾರ ಸ್ವೀಕರಿಸಿದ ರೀತಿಯಲ್ಲಿಯೇ ವೈದ್ಯರೂ ಸಹ ಮರಳಿ ಅಧಿಕಾರ ಪಡೆದುಕೊಂಡರು. ಬಳಿಕ ಠರಾವು ಪುಸ್ತಕ, ಅಗತ್ಯ ದಾಖಲೆ ಪಡೆದುಕೊಳ್ಳಲಾಯಿತು. ಕ್ಯಾಶ್ ಕೌಂಟರ್ ಗೆ ತೆರಳಿ ಪರಿಶೀಲನೆ ನಡೆಸಲಾಯಿತು.
ಅಷ್ಟರಲ್ಲಾಗಲೇ ಪ್ರತಿಭಟನಾ ಮೆರವಣಿಗೆಗೆ ಷೇರು ಸದಸ್ಯರು, ಅಭಿಮಾನಿಗಳು ಟಿಎಸ್ಎಸ್ ಪ್ರಾಂಗಣದಲ್ಲಿ ಜಮಾಯಿಸಿದ್ದರು. ಇದರಿಂದ ಅಧಿಕಾರ ಸ್ವೀಕಾರದ ನಂತರ ತಕ್ಷಣ ವೈದ್ಯ ಮತ್ತು ಉಳಿದ ಆಡಳಿತ ಮಂಡಳಿ ಪ್ರಮುಖರು ಜನರೆದುರು ಬಂದು ಗೆಲುವಿನ ಘೋಷಣೆ ಮಾಡಿದರು.
ಮರು ಚುನಾವಣೆ ಆದೇಶಕ್ಕೆ ತಡೆಯಿಲ್ಲ, ಆಡಳಿತಾಧಿಕಾರಿ ನೇಮಕಕ್ಕೆ ಮಾತ್ರ ತಡೆ:
ದಿನಾಂಕ 27/05/2024 ರ ಸಹಾಯಕ ಜಂಟಿ ಆಯುಕ್ತರು ಬೆಳಗಾವಿ ಇವರು ಸಹಕಾರ ಉಪನಿಭಂದಕರ ನ್ಯಾಯಾಲಯ ಕಾರವಾರ ಇವರ ಆದೇಶ ಸಂಖ್ಯೆ ಡಿ ಅರ್ ಎನ್ /ಆಡಳಿತ / ವಿಶೇಷಾಧಿಕಾರಿ/ ಟಿ ಎಸ ಎಸ್/ 2024-25 ರ ಆದೇಶಕ್ಕೆ ಮುಂದಿನ ಆದೇಶದ ವರೆಗೆ ತಡೆಯಾಜ್ಞೆ ಎಂದು ನೀಡಿರುತ್ತಾರೆ. ಹಾಗೂ ಅವರ ಪ್ರಭಾರವನ್ನು 20-08-2023 ರ ಆಯ್ಕೆಯಾದವರಿಗೆ ಮುಂದುವರೆಸಲು ನೀಡಿರುತ್ತಾರೆ. ಕಾರಣ ಮಾನ್ಯ ಸಹಕಾರ ಉಪನಿಭಂದಕರ ನ್ಯಾಯಾಲಯ ಕಾರವಾರ ಇವರ ಆದೇಶ ಸಂಖ್ಯೆ: ಡಿ ಆರ್ ಎನ್/ಎಫ್/ಡಿ ಡಿ ಎಸ್/ 439/ 2023-24 ಮತ್ತು 440/2023-24 ಇವುಗಳಿಗೆ ಯಾವುದೇ ತಡೆಯಾಜ್ಞೆ ಇರುವುದಿಲ್ಲ
ಆದ ಕಾರಣ ಪ್ರಸಕ್ತ ಅಂದರೆ 20-08-2023 ರಂದು ಆಯ್ಕೆಗೊಂಡ ಆಡಳಿತ ಕಮಿಟಿ ರದ್ದಾಗಿದೆ ಮತ್ತು ಮರು ಚುನಾವಣೆ ನಡೆಯಲಿದೆ. ಆದರಿಂದ ನಮಗೆ ಯಾವುದೇ ಹಿನ್ನಡೆ ಆಗಿಲ್ಲ. ಚುನಾವಣೆ ನಡೆಸುವುದು ಈಗ ಪ್ರಭಾರ ವಹಿಸಿರುವ ಸಮಿತಿಯು ಮಾಡಲೇಬೇಕಾಗಿದ್ದು ಮುಂದಿನ 6 ತಿಂಗಳ ಒಳಗಾಗಿ ಚುನಾವಣೆ ನಡೆಯುವುದು ಸುನಿಶ್ಚಿತ ಎಂದು ಶ್ರೀಪಾದ ಹೆಗಡೆ ಕಡವೆ ಪ್ರತಿಕ್ರಿಯೆ ನೀಡಿದ್ದಾರೆ.