Slide
Slide
Slide
previous arrow
next arrow

ಬೇಜವಾಬ್ದಾರಿ ಹೇಳಿಕೆಗಳು ಕಾಗೇರಿಯವರಿಗೆ ಶೋಭೆಯಲ್ಲ; ದೀಪಕ ದೊಡ್ಡೂರು

300x250 AD

ಶಿರಸಿ: ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುವ ಟಿಎಸ್ಎಸ್ ನ ಇತ್ತಿಚಿನ ಬೆಳವಣಿಗೆ ಹಿನ್ನೆಲೆಯಲ್ಲಿ ಮಾಜಿ ವಿಧಾನಸಭಾಧ್ಯಕ್ಷ, ಹಿರಿಯ ಪ್ರಬುದ್ಧ ರಾಜಕಾರಣಿ ವಿಶ್ವೇಶ್ವರ ಹೆಗಡೆಯವರ ಹೇಳಿಕೆ ಅತ್ಯಂತ ಬೇಸರ, ನೋವನ್ನು ಉಂಟುಮಾಡಿದೆ. ಇಂತಹ ಹೇಳಿಕೆಗಳು ಕಾಗೇರಿವರಿಗೆ ಶೋಭೆಯಲ್ಲ. ಇದನ್ನು ಖಂಡಿಸುವುದಾಗಿ ಕೆಪಿಸಿಸಿ ಸದಸ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೀಪಕ್ ಹೆಗಡೆ ದೊಡ್ಡೂರು ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಾಜಿ ಶಾಸಕ ಕಾಗೇರಿಯವರು ಈ ಹಿಂದೆ ನಡೆದ ಘಟನೆಯೊಂದನ್ನು ಒಮ್ಮೆ ಮೆಲುಕು ಹಾಕಿಕೊಳ್ಳುವುದು ಈ ಸಮಯಕ್ಕೆ ಸೂಕ್ತ ಎನಿಸುತ್ತದೆ. 2011-12 ರ ಸಾಲಿನಲ್ಲಿ ಇದೇ ಟಿಎಸ್ಎಸ್ ಸಹಕಾರಿ ಸಂಸ್ಥೆ ಮತ್ತು ಆಸ್ಪತ್ರೆ ಸಂಬಂಧಿಸಿ ಅಂದಿನ ಕೆಲ ಶೇರು ಸದಸ್ಯರು ಆಡಳಿತ ಮಂಡಳಿಯ ವಿರುದ್ಧ ಅನೇಕ ಲೋಪ-ದೋಷಗಳನ್ನು ಹೊರಿಸಿ ಸಹಕಾರಿ ಸಂಘಗಳ ಕಾಯ್ದೆ ಸೆ.64 ವಿಚಾರಣೆ ನಡೆಸುವಂತೆ ಅಂದಿನ ಸರಕಾರದ ಅಧೀನದಲ್ಲಿದ್ದ ಸಹಕಾರಿ ಇಲಾಖೆಗೆ ಪತ್ರಮುಖೇನ ಆಗ್ರಹಿಸಿದ್ದರು. ದಿ. ಶಾಂತಾರಾಮ ಹೆಗಡೆಯವರು ಅಂದು ಸಂಸ್ಥೆಯ ಅಧ್ಯಕ್ಷರಾಗಿದ್ದರು. ಆಗ ಆಡಳಿತದಲ್ಲಿದ್ದ ಬಿಜೆಪಿ ಸರಕಾರದಲ್ಲಿ ಮಾನ್ಯ ಕಾಗೇರಿಯವರೇ ಶಿಕ್ಷಣ ಸಚಿವರಾಗಿ ಅಧಿಕಾರದಲ್ಲಿದ್ದರು. ನಂತರದಲ್ಲಿ ಅಂದಿನ ಸರಕಾರದ ಅಧೀನದಲ್ಲಿದ್ದ ಸಹಕಾರಿ ಇಲಾಖೆ ಸೆ.64 ವಿಚಾರಣೆ ನಡೆಸಿ, ಸೆ.68 ರಂತೆ ಯಾವುದೇ ಲೋಪಗಳಾಗಿಲ್ಲ ಎಂಬ ತೀರ್ಪನ್ನೂ ಸಹ ಪ್ರಕಟಿಸಿತ್ತು‌. ಸಹಕಾರಿ ಇಲಾಖೆಯ ಆ ನಡೆಯನ್ನು ಸ್ವತಃ ಸಂಸ್ಥೆಯ ಅಧ್ಯಕ್ಷರಾಗಿದ್ದ ಶಾಂತಾರಾಮ ಹೆಗಡೆಯವರೇ ಸ್ವಾಗತಿಸಿದ್ದರು. ಕಾಗೇರಿಯವರಿಗೆ ಟಿಎಸ್ಎಸ್ ಕುರಿತಾಗಿ ಅಷ್ಟೊಂದು ಪ್ರೀತಿ, ಮಮಕಾರ ಇದ್ದಿದ್ದರೆ ಸ್ವತಃ ಸಚಿವಾರಗಿದ್ದ ಅವರು ಅಂದಿನ ಬಿಜೆಪಿ ಸರಕಾರದ ಅಧೀನದಲ್ಲಿದ್ದ ಸಹಕಾರಿ ಇಲಾಖೆಯ ಕ್ರಮವನ್ನು ಯಾಕೇ ವಿರೋಧಿಸಿಲ್ಲ ? ಸರಕಾರ ಮತ್ತು ಶೇರು ಸದಸ್ಯರ ನಡುವಿನ ಮಧ್ಯಸ್ಥಿಕೆಯನ್ನು ಯಾಕೆ ವಹಿಸಿಕೊಂಡಿಲ್ಲ ? ಎನ್ನುವುದನ್ನು ಅವರೇ ಸ್ಪಷ್ಟಪಡಿಸಬೇಕಿದೆ.

ಪ್ರಸ್ತುತ ಟಿಎಸ್ಎಸ್ ಚುನಾವಣೆಗೆ ಸಂಬಂಧಿಸಿ, ಚುನಾವಣೆಗೆ ಸ್ಪರ್ಧಿಸಿದವರ ಅರ್ಹತೆಯ ಕುರಿತಾಗಿ ಚುನಾವಣಾಧಿಕಾರಿಗೆ ಅಂದೇ ಕೆಲ ಸದಸ್ಯರು ತಕರಾರು ಸಲ್ಲಿಸಿದ್ದರು. ಚುನಾವಣಾಧಿಕಾರಿ ಸಕ್ಷಮ ಪ್ರಾಧಿಕಾರದಲ್ಲಿ ಇದನ್ನು ಬಗೆಹರಿಸಿಕೊಳ್ಳಿ ಎಂದು ಹೇಳಿದ ಮೇಲೆ, ಕೂಡಲೇ ಅಂದರೆ ಕಳೆದ ಏಳೆಂಟು ತಿಂಗಳುಗಳ ಹಿಂದೆಯೇ ತಕರಾರಿನ ಅರ್ಜಿಯನ್ನು ಸದಸ್ಯರು ಸಲ್ಲಿಸಿದ್ದರು. ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿ, ದಾಖಲೆ-ಪುರಾವೆಗಳನ್ನು ಪರಿಶೀಲಿಸಿದ ನಂತರ ನ್ಯಾಯಾಲಯ ಅಂದಿನ ಚುನಾವಣಾಧಿಕಾರಿಯ ನಡೆ ಸಹಕಾರ ಸಂಘಗಳ ಕಾಯ್ದೆಯನ್ನು ಮೀರಿದ್ದು, ಚುನಾವಣೆಯೇ ಅಸಿಂಧು ಆಗಿದೆ. ಹಾಗಾಗಿ ಪುನಃ ಕಾಯ್ದೆಯನ್ವಯ ಚುನಾವಣೆಯನ್ನು ನಿಗಧಿತ ಸಮಯದೊಳಗೆ ನಡೆಸಲು ಆದೇಶಿಸಿ, ತೆರವಾದ ನಿರ್ದೇಶಕರ ಸ್ಥಾನಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ, ಹಾಲಿ ಅಧಿಕಾರದಲ್ಲಿದ್ದ ಆಡಳಿತ ಮಂಡಳಿ ಈ ಹಿಂದಿನ ಮಂಡಳಿಯ ಮೇಲೆ ಸಾಕಷ್ಟು ಆರೋಪವನ್ನು ಹೊರಿಸಿತ್ತು. ಆದರೆ ಈ ಹಿಂದಿನ ಆಡಳಿತ ಮಂಡಳಿ ಅವರ ಎಲ್ಲ ಆರೋಪಗಳನ್ನು ತಳ್ಳಿಹಾಕಿದೆ. ಜೊತೆಗೆ ಸ್ವತಃ ನನ್ನ ಮೇಲೂ ಆರೋಪವಿದೆ. ಹೀಗಿರುವಾಗ ಸಹಕಾರಿ ಕ್ಷೇತ್ರದ ಮೇಲಿನ ಕಳಕಳಿ, ಸದಸ್ಯ ರೈತರ ಹಿತದೃಷ್ಟಿಯಿಂದ ಈಗಿನ ಸರಕಾರದ ಅಧೀನದಲ್ಲಿರುವ ಸಹಕಾರಿ ಇಲಾಖೆ ಆಡಳಿತಾಧಿಕಾರಿಯನ್ನು ನೇಮಿಸಿದೆ. ಕಳೆದ ಚುನಾವಣೆಯಲ್ಲಿ ಆಯ್ಕೆಯಾದ ಹೊಸ ಆಡಳಿತ ಮಂಡಳಿಗೂ ಸಹ ಸರಕಾರಿ ಲೆಕ್ಕ ಪರಿಶೋಧನೆಯನ್ನು ಮಾಡಿಸುವ ಅವಕಾಶವಿತ್ತು. ಆದರೆ ಅವರು ಅದನ್ನು ಮಾಡಿಲ್ಲ. ಪ್ರಸ್ತುತ ನ್ಯಾಯಾಲಯವೇ ಈ ಹಿಂದೆ ನಡೆದ ಚುನಾವಣೆ ಅಸಿಂಧು ಎಂದು ತೀರ್ಪು ನೀಡಿರುವ ಆಧಾರದ ಮೇಲೆ, ಜವಾಬ್ದಾರಿಯುತ ಇಲಾಖೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ಇದು ಸೂಕ್ತವಾದ ನಿರ್ಧಾರವೂ ಹೌದು ಎಂಬುದು ನನ್ನ ಅಭಿಪ್ರಾಯವಾಗಿದೆ.

300x250 AD

ಮಾನ್ಯ ಕಾಗೇರಿಯವರಿಗೆ ಅಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಸಹಕಾರಿ ಇಲಾಖೆ ಮಾಡಿದ್ದ ಸೆ.64 ತನಿಖೆ ಸರಿಯಾಗಿತ್ತೆಂದರೆ, ಇಂದಿನ ಸಹಕಾರಿ ಇಲಾಖೆ ನೇಮಿಸಿದ ಆಡಳಿತಾಧಿಕಾರಿಯ ನಡೆಯನ್ನು ವಿರೋಧಿಸುವ ಹಿಂದಿನ ದುರುದ್ಧೇಶ ಅರ್ಥವಾಗುತ್ತಿಲ್ಲ. ತಾವು ಅಧಿಕಾರದಲ್ಲಿದ್ದಾಗ ಮಾಡಿದ್ದೆಲ್ಲವೂ ಸರಿ. ಅದು ಸಂಸ್ಥೆಯೆಡೆಗಿನ ಕಾಳಜಿ, ಕಳಕಳಿ. ಬೇರೆಯವರು ಮಾಡಿದರೆ ಅದು ಹಾಳು ಎನ್ನುವ ಇಬ್ಬಂದಿ ಮನಸ್ಥಿತಿ ಏಕೆ ? ಸಾಮಾಜಿಕ ಹಾಗು ರಾಜಕೀಯ ಜೀವನದಲ್ಲಿ 40 ಕ್ಕೂ ಅಧಿಕ ವರ್ಷಗಳ ಕಾಲ ಅನುಭವ ಇರುವ ಕಾಗೇರಿಯವರಿಗೆ ಇಂತಹ ನಡೆ ಥರವಲ್ಲ. ಸುಧೀರ್ಘ ಅವಧಿಗೆ ಶಾಸಕ, ಸಚಿವ, ವಿಧಾನಸಭಾಧ್ಯಕ್ಷ ಹುದ್ದೆಯನ್ನು ನಿಭಾಯಿಸುವ ಮೂಲಕ ಸರಕಾರದ ಭಾಗವಾಗಿ ಅನುಭವ ಹೊಂದಿರುವ ಕಾಗೇರಿಯವರು, ಸಹಕಾರಿ ಸಂಘದ ಇಂತಹ ಕ್ಲಿಷ್ಟ ವಾತಾವರಣದಲ್ಲಿ ಸಹಕಾರಿ ಇಲಾಖೆಯ ಮೂಲಕ ಗೌರ್ಮೆಂಟ್ ಆಡಿಟ್ ನಡೆಸಲಿ, ಆ ಮೂಲಕ ಸಂಪೂರ್ಣ ತನಿಖೆಯಾಗಿ ಸತ್ಯಾಂಶ ಹೊರಬರಲಿ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿಬೇಕಿತ್ತು. ಆದರೆ ಇವರ ನಡೆ ಸಂಪೂರ್ಣ ತದ್ವಿರುದ್ಧವಿದೆ. ಸಹಕಾರಿ ರಂಗದಲ್ಲಿ ರಾಜಕೀಯ ಹೇಳಿಕೆ, ರಾಜಕೀಯ ಪ್ರೇರಿತ ಚಟುವಟಿಕೆಗಳು ಯಾರಿಗೂ ಶೋಭೆಯಲ್ಲ. ಇನ್ನು ಮುಂದಾದರೂ ಕಾಗೇರಿಯವರು ತಮ್ಮ ಜವಾಬ್ದಾರಿಯನ್ನು ಅರಿತು ಹೇಳಿಕೆ ನೀಡಲಿ ಎಂದು ಆಶಿಸುವುದಾಗಿ ದೊಡ್ಡೂರು ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top