Slide
Slide
Slide
previous arrow
next arrow

TSS ಚುನಾವಣೆಯೇ ಅಸಿಂಧು; ಸಂಸ್ಥೆಗೆ ‘ವಿಶೇಷ ಅಧಿಕಾರಿ’ ನೇಮಕ

300x250 AD

ಚುನಾವಣೆಯಲ್ಲಿ ಚುನಾವಣಾಧಿಕಾರಿಯಿಂದ ಕಾನೂನು ಬಾಹಿರ ಕ್ರಮ | ವಿಶೇಷ ಅಧಿಕಾರಿಯಾಗಿ ಎಂ.ಎಚ್. ನಾಯ್ಕ ಅಧಿಕಾರ ಸ್ವೀಕಾರ

ಶಿರಸಿ: ಪ್ರತಿಷ್ಠಿತ ಟಿಎಸ್ಎಸ್ ಸಹಕಾರಿ ಸಂಘದ ಹಾಲಿ ಆಡಳಿತ ಮಂಡಳಿಯ ಅಧಿಕಾರವನ್ನು ಮೊಟಕುಗೊಳಿಸಿ, ವಿಶೇಷ ಅಧಿಕಾರಿಯನ್ನು ನೇಮಿಸಿ ಶುಕ್ರವಾರ ಉತ್ತರ ಕನ್ನಡ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಎಸ್.ಜಿ. ಮಂಜುನಾಥ್ ಸಿಂಗ್ ಆದೇಶ ಹೊರಡಿಸಿದ್ದಾರೆ.

ಕಳೆದ ಅಗಸ್ಟ್ ನಲ್ಲಿ ನಡೆದ ಟಿಎಸ್ಎಸ್ ಚುನಾವಣೆಯಲ್ಲಿ, (ಚುನಾವಣಾಧಿಕಾರಿ) ರಿಟರ್ನಿಂಗ್ ಆಫಿಸರ್ ಸಹಕಾರಿ ಸಂಘಗಳ ಅಧಿನಿಯಮಗಳ ಪ್ರಕಾರ ಚುನಾವಣಾ ಪ್ರಕ್ರಿಯೆ ನಡೆಸದೇ, ಕಾನೂನು ಬಾಹಿರವಾಗಿ ಚುನಾವಣೆ ನಡೆಸಿದ್ದರು ಎಂದು ಸಂಘದ ಸದಸ್ಯರಾದ ಗಣಪತಿ ರಾಯ್ಸದ್ ಹಾಗು ವಿನಾಯಕ ಭಟ್ಟ ಗೋಳಿಕೊಪ್ಪ ಈ ಹಿಂದೆ ಕೋರ್ಟಿನಲ್ಲಿ ಪ್ರಕರಣ ದಾಖಲಿಸಿದ್ದರು. ಹಲವು ತಿಂಗಳುಗಳ ಕಾಲ ವಾದ-ಪ್ರತಿವಾದವನ್ನು ಆಲಿಸಿ, ವಿಚಾರಣೆ ನಡೆಸಿದ ಸಹಕಾರಿ ಇಲಾಖೆಯ ನ್ಯಾಯಾಲಯ ಚುನಾವಣಾಧಿಕಾರಿಯು ಕಾನೂನು ಬಾಹಿರವಾಗಿ, ಕಾಯ್ದೆಗಳನ್ನು ಉಲ್ಲಂಘಿಸಿ ಚುನಾವಣಾ ಪ್ರಕ್ರಿಯೆ ನಡೆಸಿರುವುದು ಸಾಬಿತಾಗಿದೆ. ಆ ಹಿನ್ನಲೆಯಲ್ಲಿ ಚುನಾವಣೆಯನ್ನೇ ಅಸಿಂಧು ಎಂದು ಘೋಷಿಸುವ ಮೂಲಕ ಗೋಪಾಲಕೃಷ್ಣ ವೈದ್ಯ ನೇತೃತ್ವದ ಹಾಲಿ ಆಡಳಿತ ಮಂಡಳಿಯ ಅಧಿಕಾರವನ್ನು ಮೊಟಕುಗೊಳಿಸಿ ಮುಂದಿನ 6 ತಿಂಗಳುಗಳ ವರೆಗೆ ವಿಶೇಷ ಅಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಿದೆ. ಮತ್ತು 200 ದಿನಗಳೊಳಗೆ ಚುನಾವಣೆ‌ ಕೂಡ ನಡೆಸುವಂತೆ ಸ್ಪಷ್ಟವಾಗಿ ಆದೇಶ ಹೊರಡಿಸಿದೆ.

ಶುಕ್ರವಾರ ಸಂಘಕ್ಕೆ ವಿಶೇಷ ಆಡಳಿತಾಧಿಕಾರಿಯಾಗಿ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ಬಿಇಓ ಎಂ.ಎಚ್.ನಾಯ್ಕ ಅವರು ಆಗಮಿಸಿ, ಪೊಲೀಸ್ ರಕ್ಷಣೆಯಲ್ಲಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ಸ್ಥಳದಲ್ಲಿದ್ದ ಉಪಾಧ್ಯಕ್ಷ ಎಂ.ಎನ್.ಭಟ್ಟ ಅವರು ನಮಗೆ ಆದೇಶ‌ ಬಂದಿಲ್ಲ ಎಂದು ವಾದಿಸಿದರು. ಆದರೆ, ಅದಕ್ಕೆ ಉತ್ತರಿಸಿದ ಅಧಿಕಾರಿ ಆದೇಶ ಪ್ರತಿ‌ ನ್ಯಾಯಾಲಯದಿಂದ ಪಡೆಯುವಂತೆ ಹಾಗೂ ನ್ಯಾಯಾಲಯದ ಆದೇಶ ಅನುಷ್ಠಾ‌ನ ತಾವು ಮಾಡುವುದಾಗಿ ಆಡಳಿತ ಅಧಿಕಾರಿಗಳು ಅವರಿಗೆ ಸೂಚಿಸಿದರು. ಬಳಿಕ ಪ್ರಮುಖ ಸಂಘದ ಸಿಬಂದಿಗಳ ಸಭೆ ನಡೆಸಿದರು.

ಈಗಾಗಲೇ ನಡೆದ ಚುನಾವಣೆ ಅಸಿಂಧು ಎನ್ನಲು ಕಾರಣಗಳೇನು ?

1) ಸಹಕಾರಿ ಸಂಘಗಳ ಅಧಿನಿಯಮಗಳ ಪ್ರಕಾರ ಕೆಲವು ವ್ಯಕ್ತಿಗಳು ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧಿಸಲು ಅನರ್ಹರಾಗಿದ್ದರು. ಆದರೂ ಅಂತವರು ನಾಮಪತ್ರ ಸಲ್ಲಿಸಿದ್ದರು. ಇದಕ್ಕೆ ಎದುರು ಬದಿಯ ಕೆಲ ಸದಸ್ಯರು ಅಂತವರ ನಾಮಪತ್ರ ತಿರಸ್ಕರಿಸುವಂತೆ ಆ ವೇಳೆಯಲ್ಲಿ ತಕರಾರು ಸಲ್ಲಿಸಿದ್ದರೂ ಸಹ ರಿಟರ್ನಿಂಗ್ ಅಧಿಕಾರಿ ಅದನ್ನು ಕಾನೂನು ಪ್ರಕಾರ ಪರಿಗಣಿಸಲಿಲ್ಲ. ಹಾಗಾಗಿ ಸದ್ರಿ ಚುನಾವಣೆಯು ಕಾನೂನು ಬಾಹಿರವಾಗಿದೆ.

2) ಸಂಸ್ಥೆಯು ಸಹಕಾರಿ ಸಂಘಗಳ ಅಧಿನಿಯಮಗಳ ಪ್ರಕಾರ ಅನರ್ಹ ಮತದಾರರಿಗೆ ನೀಡಬೇಕಾದ ನೋಟಿಸನ್ನು ನೀಡದ ಪ್ರಕಾರ ಸಂಪೂರ್ಣ ಚುನಾವಣೆ ಅಸಿಂಧು ಮತ್ತು ಕಾನೂನು ಬಾಹಿರ ಎನಿಸಿಕೊಳ್ಳಲಿದೆ.

3) ಸಂಸ್ಥೆಗೆ ಆಯ್ಕೆಯಾಗಿದ್ದ ಹಿಂದಿನ ಆಡಳಿತ ಮಂಡಳಿ ಸದಸ್ಯರ ಅಧಿಕಾರಾವಧಿ ಮುಗಿಯುವ ಮೊದಲೇ ಚುನಾವಣೆ ನಡೆಸಲು ಬರುತ್ತಿರಲಿಲ್ಲ.

300x250 AD

ಒಟ್ಟಾರೆಯಾಗಿ ಎಲ್ಲ ಅಂಶಗಳನ್ನು ಗಮನಿಸಿದರೆ ಚುನಾವಣೆ ನಡೆಸಿದ್ದ ರಿಟರ್ನಿಂಗ್ ಅಧಿಕಾರಿಯು ಸಹಕಾರಿ ಸಂಘಗಳ ಅಧಿನಿಯಮಗಳ ಪ್ರಕಾರ ಚುನಾವಣಾ ಪ್ರಕ್ರಿಯೆ ನಡೆಸದೇ, ಯಾರದ್ದೋ ಒತ್ತಡಕ್ಕೆ, ಲಾಭಕ್ಕೆ ಅಥವಾ ಇನ್ಯಾವುದೋ ಆಮೀಷಕ್ಕೆ ಒಳಗಾಗಿ ಕಾನೂನು ಬಾಹಿರವಾಗಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಿ, ನಂತರದಲ್ಲಿ ಫಲಿತಾಂಶ ಘೋಷಿಸಿದ್ದರು ಎಂಬುದು ಸಂಸ್ಥೆಯ ಕೆಲ ಸದಸ್ಯರ ಆರೋಪವಾಗಿತ್ತು. ಇದೀಗ ಸಹಕಾರಿ ಸಂಘಗಳ ನ್ಯಾಯಾಲಯವು ಎರಡೂ ಕಡೆಯವರ ವಾದ-ಪ್ರತಿವಾದಗಳನ್ನು ಆಲಿಸಿ, ವಿಚಾರಣೆ ನಡೆಸಿ ಸತ್ಯವನ್ನು ಎತ್ತಿಹಿಡಿದಿದೆ. ಆ ಮೂಲಕ ಕಳೆದ ಚುನಾವಣೆಯಲ್ಲಿ ರಿಟರ್ನಿಂಗ್ ಅಧಿಕಾರಿಯು ನಡೆಸಿದ್ದ ಅಕ್ರಮ ಕೆಲಸ, ಕಾನೂನು ಬಾಹಿರ ಕ್ರಮಗಳನ್ನು ಅನರ್ಹಗೊಳಿಸಿ, ಮುಂದಿನ 200 ದಿನಗಳ ವರೆಗೆ ವಿಶೇಷ ಅಧಿಕಾರಿಯನ್ನು ನೇಮಕ ಮಾಡಿದ್ದು ಸತ್ಯಕ್ಕೆ ಸಂದ ಗೆಲುವಾಗಿದೆ ಎಂಬುದು ಸಂಸ್ಥೆಯ ಸದಸ್ಯರೊಬ್ಬರ ಅಭಿಪ್ರಾಯವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ:
ಟಿಎಸ್ಎಸ್ ಗೆ ವಿಶೇಷ ಅಧಿಕಾರಿಯನ್ನು ನೇಮಿಸಿದ ನ್ಯಾಯಾಲಯದ ಆದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಸಂಸ್ಥೆಯ ಕೆಲ ಸದಸ್ಯರು, ಸಾರ್ವಜನಿಕರು ಹಂಚಿಕೊಂಡು ಪರ-ವಿರೋಧದ ಚರ್ಚೆ ನಡೆಸಿದ್ದಾರೆ. ಚುನಾವಣಾ ಪ್ರಕ್ರಿಯೆ ಕಾನೂನು ಬಾಹಿರವಾಗಿದ್ದಲ್ಲಿ ಅಂತವರ ಮೇಲೆ ಕಠಿಣ ಕ್ರಮ ಕೈಗೊಂಡು, ಸಹಕಾರಿ ನ್ಯಾಯವನ್ನು ಎತ್ತಿಹಿಡಿಯಬೇಕು ಎಂಬುದು ಬಹುತೇಕರ ಅನಿಸಿಕೆಯಾಗಿದೆ.

ಆವೇಶದ ಮಾತಿಗೆ ಸಹನೆಯ ಉತ್ತರ:
ವಿಶೇಷ ಅಧಿಕಾರಿಯಾಗಿ ನ್ಯಾಯಾಲಯದ ಆದೇಶದನ್ವಯ ಅಧಿಕಾರ ಸ್ವೀಕರಿಸಿದ ಅಧಿಕಾರಿಯ ಬಳಿ ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ಎಂ.ಎನ್. ಭಟ್ಟ ಆವೇಶಭರಿತರಾಗಿ ಮಾತನಾಡಿದ್ದು ಕಂಡುಬಂತು. ಆದರೆ ಹಿರಿಯ ಸಹಕಾರಿಗಳು ಆವೇಶದ ಮಾತುಗಳನ್ನಾಡಿದರೂ ಸಹ, ಅವರ ಹಿರಿತನಕ್ಕೆ ಮತ್ತು ಅನುಭವಕ್ಕೆ ಗೌರವವಿಟ್ಟು ವಿಶೇಷ ಅಧಿಕಾರಿ ಎಂ.ಎಚ್. ನಾಯ್ಕ ಸಹನೆಯಿಂದ, ಗೌರವದಿಂದ ಉತ್ತರ ನೀಡಿದ್ದು ಸ್ಥಳದಲ್ಲಿದ್ದ ಅನೇಕರ ಮೆಚ್ಚುಗೆಗೆ ಪಾತ್ರವಾಯಿತು.

ಸಂಸ್ಥೆಯತ್ತ ಸುಳಿಯದ ಮಾಜಿ ಅಧ್ಯಕ್ಷ ವೈದ್ಯ:
ಸಂಸ್ಥೆಗೆ ವಿಶೇಷ ಅಧಿಕಾರಿ ನೇಮಕ ಆಗಿದೆ ಎಂದು ಊರೆಲ್ಲಾ ಗುಲ್ಲಾಗಿ ಅನೇಕ ಶೇರು ಸದಸ್ಯರು ಸಂಸ್ಥೆಗೆ ಆಗಮಿಸಿದರೂ ಸಹ ಸಂಸ್ಥೆಯ ಈ ವರೆಗಿನ ಅಧ್ಯಕ್ಷರಾಗಿದ್ದ ಗೋಪಾಲಕೃಷ್ಣ ವೈದ್ಯ ಮಾತ್ರ ಪತ್ತೆಯೇ ಇರಲಿಲ್ಲ. ಹಾಗಾಗಿ ನ್ಯಾಯಾಲಯದಲ್ಲಿ ಬರುವ ತೀರ್ಪಿನ ಕುರಿತಾಗಿ ಮುಂಚೆಯೇ ಅಂದಾಜಿಸಿದ್ದರು. ಹಾಗಾಗಿ ವೈದ್ಯರು ಮಧ್ಯಾಹ್ನದ ನಂತರ ಕಛೇರಿಯ ಕಡೆ ಸುಳಿಯಲೇ ಇಲ್ಲ ಎಂದು ಸದಸ್ಯರು ಮಾತನಾಡಿಕೊಳ್ಳುತ್ತಿರುವುದು ಕಂಡುಬಂದಿತು.

ದಿ. ಶ್ರೀಪಾದ ಹೆಗಡೆ ಕಡವೆಯವರ ಆಶಯದಂತೆ ಸಂಸ್ಥೆಯ, ಸದಸ್ಯರ ಹಿತಕ್ಕಾಗಿ ದುಡಿಯುವೆ

ಅಧಿಕಾರ ಸ್ವೀಕರಿಸಿ ಸಿಬ್ಬಂದಿಗಳ ಜೊತೆ ಸಭೆ ನಡೆಸಿದ ನಂತರದಲ್ಲಿ ಸಂಘದ ವಾಟ್ಸಪ್ ಚ್ಯಾನೆಲ್ ಮೂಲಕ‌ಸದಸ್ಯರಿಗೆ ಹಾಗು ಸಾರ್ವಜನಿಕರಿಗೆ ಮಾಹಿತಿ ನೀಡಿದ ಅವರು, ಸಹಕಾರಿ ಸಂಘಗಳ ಉಪನಿಬಂಧಕರು ಕಾರವಾರ ಇವರ ಆದೇಶದಂತೆ ಎಮ್.ಎಚ್.ನಾಯ್ಕ ಶಿಕ್ಷಣಾಧಿಕಾರಿ, ಶಿರಸಿ ಆದ ನಾನು ಪ್ರತಿಷ್ಠಿತ ಟಿ.ಎಸ್.ಎಸ್. ನ ಆಡಳಿತಾಧಿಕಾರಿಯಾಗಿ ಇಂದಿನಿಂದ ಅಧಿಕಾರ ಸ್ವೀಕರಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ನಾನು ಸರ್ಕಾರದ ಪ್ರತಿನಿಧಿಯಾಗಿ ಸದಸ್ಯರಿಗೆ ತಿಳಿಸುವುದೇನೆಂದರೆ ದಿ.ಶ್ರೀಪಾದ ಹೆಗಡೆ ಕಡವೆಯವರ ಆಶಯದಂತೆ ಸಂಘದ ಯಾವತ್ತೂ ಸದಸ್ಯರ ಹಿತ ಕಾಪಾಡಿ ಸುಗಮವಾಗಿ ಸಂಘವನ್ನು ಮುನ್ನಡೆಸುವ ಭರವಸೆಯನ್ನು ನೀಡುತ್ತಿದ್ದೇನೆ. ಯಾವುದೇ ಸದಸ್ಯರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸಂಘದ ಯಾವುದೇ ವ್ಯವಹಾರದ ಕುರಿತು ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ. ಹಾಗೆಯೇ ಈಗ ನಡೆಯುತ್ತಿರುವ ಎಲ್ಲಾ ವ್ಯವಹಾರಗಳು ಎಂದಿನಂತೆ ಸುಗಮವಾಗಿ ನಡೆಯಲಿವೆ. ಸಂಘದ ಯಾವತ್ತೂ ಸದಸ್ಯರು ಈ ಮುಂಚಿನಂತೆ ಸಹಕಾರ ನೀಡಲು ಕೋರುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top