ಜೋಯಿಡಾ: ತಾಲೂಕಿನಲ್ಲಿ ಸೋಮವಾರ ಕೆಲ ಕಡೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾದರೆ ಇನ್ನೂ ಕೆಲವು ಕಡೆಗಳಲ್ಲಿ ಭಾರೀ ಗಾಳಿಯಿಂದ ಮರಗಳು ಧರೆಗುರುಳಿ ಸಂಚಾರಕ್ಕೆ ಅಡಚಣೆ ಉಂಟಾಯಿತು.
ತಾಲೂಕಿನ ನಂದಿಗದ್ದಾ ಗ್ರಾ.ಪಂ.ವ್ಯಾಪ್ತಿಯ ಕರಿಯಾದಿ ಬಳಿ ಭಾರಿ ಗಾತ್ರದ ಮರವೊಂದು ಧರೆಗುರುಳಿ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು, ಕೆಲ ಕಾಲ ವಿದ್ಯುತ್ ಸಮಸ್ಯೆ ಉಂಟಾಯಿತು. ಗುಂದ ಅರಣ್ಯ ಇಲಾಕೆಯ ವಲಯ ಅರಣ್ಯಾಧಿಕಾರಿ ರವಿಕಿರಣ್ ಸಂಪಗಾವಿ ಸೋಮವಾರ ಬೆಳಂ ಬೆಳಗ್ಗೆ ಸ್ಥಳಕ್ಕೆ ಬಂದು ತಮ್ಮ ಇಲಾಕೆ ಸಿಬ್ಬಂದಿಗಳ ಸಹಾಯದಿಂದ ಭಾರಿ ಗಾತ್ರದ ಬಿದ್ದ ಮರವನ್ನು ಕತ್ತರಿಸಿ ಜನರಿಗೆ ಅನುಕೂಲ ಮಾಡಿಕೊಟ್ಟರು.
ಪ್ರತಿದಿನ ಸಾಯಂಕಾಲ ಸಮಯಕ್ಕೆ ಮಳೆ ಸುರಿಯುತ್ತಿದ್ದು ದಿನವೂ ಮಳೆ ಬೀಳುತ್ತಿರುವುದರಿಂದ ಕೆರೆ ಕಟ್ಟೆಗಳಲ್ಲಿ ನಿಧಾನಗತಿಯಲ್ಲಿ ನೀರು ತುಂಬುತ್ತಿದೆ, ಇದರಿಂದ ಪ್ರಾಣಿ ಪಕ್ಷಿಗಳಿಗೆ ನೀರು ಸಿಗುವಂತಾಗಿದೆ, ಪ್ರತಿ ದಿನ ಮಳೆ ಸುರಿಯುತ್ತಿರುವುದರಿಂದ ಅರಣ್ಯದಲ್ಲಿ ಬೆಂಕಿ ಬೀಳುವುದು ನಿಂತಿದೆ.
ಜೋಯಿಡಾ ತಾಲೂಕಿನಲ್ಲಿ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಮರಗಳು ಮುರಿದು ಬೀಳುವುದು ಸಹಜ ,ಆದರೆ ರಸ್ತೆಯಲ್ಲಿ ಬಿದ್ದ ಮರಗಳನ್ನು ಸರಿಯಾಗಿ ಕಟಾವು ಮಾಡದೆ ,ವಾಹನ ಸವಾರರಿಗೆ ತೊಂದರೆ ಆಗುವ ರೀತಿಯಲ್ಲಿ ಇದ್ದದ್ದು ಕಂಡು ಬಂದಿದೆ, ಈ ಬಗ್ಗೆ ಲೋಕೋಪಯೋಗಿ ಇಲಾಕೆ ಮತ್ತು ಅರಣ್ಯ ಇಲಾಕೆ ಅಧಿಕಾರಿಗಳು ಲಕ್ಷ್ಯ ವಹಿಸಿ ಎಲ್ಲಿ ಮರಗಳು ರಸ್ತೆಯಲ್ಲಿ ಬಿದ್ದಿವೆ ಎಂಬುದನ್ನು ಗಮನಿಸಿ ಬಿದ್ದ ಮರಗಳನ್ನು ಸರಿಯಾಗಿ ಕಟಾವು ಮಾಡಿ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಿದೆ. ಈ ಹಿಂದೆ ಲೋಕೋಪಯೋಗಿ ಇಲಾಖೆಯವರು ರಸ್ತೆ ಪಕ್ಕದಲ್ಲಿ ಬಿದ್ದ ಮರಗಳಿಗೆ ಸುಣ್ಣ ಬಡಿದ ಉದಾಹರಣೆಗಳಿವೆ, ಇನ್ನಾದರೂ ಎಚ್ಚೆತ್ತು ಅಧಿಕಾರಿಗಳು ಬಿದ್ದ ಮರಗಳಿಗೆ ಸರಿಯಾದ ವ್ಯವಸ್ಥೆ ಮಾಡಬೇಕಿದೆ.