ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶ್ರೀಲಕ್ಷ್ಮೀನೃಸಿಂಹ ಜಯಂತಿ ಹಿನ್ನಲೆಯಲ್ಲಿ ಕೃಷಿ ಜಯಂತಿ ಕೂಡ ಆಚರಿಸಲಾಗುತ್ತಿದ್ದು, ಮಂಗಳವಾರದಿಂದ ಎರಡು ದಿನಗಳ ವಿವಿಧ ಧಾರ್ಮಿಕ, ಕೃಷಿಗೆ ಸಂಬಂಧಿತ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಆಶ್ರಯದಲ್ಲಿ ಟಿಎಸ್‌ಎಸ್ ಶಿರಸಿ, ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ಗ್ರಾಮಾಭ್ಯುದಯ ಸ್ವರ್ಣವಲ್ಲೀ ಸಹಯೋಗದಲ್ಲಿ ಜೀವ ವೈವಿದ್ಯ ಮಂಡಳಿ, ಶಿರಸಿ ತಾಲೂಕ ಪಂಚಾಯತ, ಜೀವ ವೈವಿಧ್ಯ ಸಮಿತಿ ಹಾಗೂ ಸಸ್ಯಲೋಕ ಸ್ವರ್ಣವಲ್ಲೀ ಸಹಕಾರದಲ್ಲಿ ಇಂದು ಮೇ.21ರಂದು ಬೆಳಿಗ್ಗೆ 10ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನಾಧೀಶ್ವರ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ತತ್ ಕರಕಮಲಸಂಜಾತ ಶ್ರೀ ಆನಂದಭೋದೇಂದ್ರ ಸರಸ್ವತೀ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಜಡೆ ಸಂಸ್ಥಾನ ಮಠದ ಶ್ರೀ ಡಾ| ಮಹಾಂತ ಮಹಾಸ್ವಾಮಿಗಳು ಕೃಷಿ ಜಯಂತಿಯನ್ನು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಸಸ್ಯಲೋಕದ ಸಂಚಾಲಕ ಅನಂತ ಹೆಗಡೆ ಅಶೀಸರ, ಬಾಗಲಕೋಟದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ| ಲಕ್ಷ್ಮೀ ನಾರಾಯಣ ಹೆಗಡೆ, ಬೆಂಗಳೂರು ಜೀವ ವೈವಿಧ್ಯ ಮಂಡಳಿಯ ಸದಸ್ಯ ಕಾರ್ಯದರ್ಶಿ ಜಗತ್ ರಾಮ್, ಅರಣ್ಯ ಮಹಾವಿದ್ಯಾಲಯದ ಡೀನ್ ಆರ್.ವಾಸುದೇವ ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ದೇವರ ಕಾಡು ನಾಮಫಲಕ ಅನಾವರಣ ಹಾಗೂ ಸ್ವರ್ಣವಲ್ಲೀ ಪ್ರಭಾ ಕೃಷಿ ವಿಶೇಷಾಂಕ ಬಿಡುಗಡೆ ಮತ್ತು ಉತ್ತಮ ಬೆಟ್ಟ ನಿರ್ವಹಣಾ ಪ್ರಶಸ್ತಿ ಪ್ರದಾನ ಕಾರ್ಯ ಜರುಗಲಿದೆ.
ಮೇ 21ರ ಸಂಜೆ 4 ಗಂಟೆಗೆ ಬಾಗಲಕೋಟ ತೋಟಗಾರಿಕೆ ವಿ.ವಿಯ ವಿಸ್ತರಣಾ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಹೆಗಡೆ ಅಧ್ಯಕ್ಷತೆಯಲ್ಲಿ “ಮಲೆನಾಡಿನ ಕೃಷಿಯಲ್ಲಿ ಭವಿಷ್ಯದ ಸವಾಲುಗಳು” ಎಂಬ ವಿಷಯದ ಕುರಿತು ಸಿಂಜೆಂಟಾ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ಡಾ. ಸತೀಶ ಹೆಗಡೆ ಹುಳಗೋಳ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಲಿದ್ದಾರೆ. ಯುವ ಪ್ರಗತಿಪರ ಕೃಷಿಕರಾದ ಸುಜಯ ಭಟ್ಟ ಹೊಸಳ್ಳಿ ಹಾಗೂ ಚಿನ್ಮಯ್ ಹೆಗಡೆ ಬೊಮ್ಮನಳ್ಳಿ ಯುವ ಕೃಷಿಕರ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಟಿಎಸ್‌ಎಸ್ ಕೃಷಿ ಗ್ರಾಮ ಯೋಜನೆ ಮಾಹಿತಿ ನೀಡಲಾಗುತ್ತದೆ.
ನಾಳೆ ಸಮಾರೋಪ:
ಮೇ.22ರ ಬೆಳಗ್ಗೆ 10.30 ಗಂಟೆಗೆ ಶ್ರೀ ಮಠದ ಕೃಷಿ ಉಪ ಸಮಿತಿಯ ನೇತೃತ್ವದಲ್ಲಿ ಶ್ರೀ ಮಠದ ತೋಟ ಮತ್ತು ಗೋ ಶಾಲೆಯನ್ನು ವೀಕ್ಷಣೆ ಹಾಗೂ ತೋಟಗಾರಿಕೆ ಹಾಗೂ ಹೈನುಗಾರಿಕೆ ಕುರಿತು ಯುವ ಕೃಷಿಕರಿಗೆ ವಿಶೇಷ ಮಾಹಿತಿನೀಡಲಾಗುತ್ತದೆ. ಕೃಷಿ ತಜ್ಞರಾದ ಲಿಂಗನಮಕ್ಕಿಯ ಡಾ.ಶ್ರೀಕಾಂತ ರಾವ್ ಮೊಹರೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಶಿರಸಿಯ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸತೀಶ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸ್ವರ್ಣವಲ್ಲೀ ಉಭಯ ಶ್ರೀಗಳು, ತೋಟಗಾರಿಕಾ ವಿವಿ ಡಾ. ಎನ್.ಕೆ.ಹೆಗಡೆ, ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಭಾಗವಹಿಸಲಿದ್ದಾರೆ. ಅತ್ಯುತ್ತಮ ಕೃಷಿ ಕುಟುಂಬ, ಸಾಧಕ ಪ್ರಶಸ್ತಿ ಪ್ರದಾನ ನಡೆಯಲಿದೆ. ಎರಡೂ ದಿನ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಶ್ರೀ ಲಕ್ಷ್ಮೀನರಸಿಂಹ ಜಯಂತಿಯ ಅಂಗವಾಗಿ ಬೆಳಿಗ್ಗೆ ಶ್ರೀ ದೇವರಿಗೆ ಶತರುದ್ರ ಅಭಿಷೇಕ, ಮಹಾಪೂಜೆ, ರಾತ್ರಿ ಶ್ರೀದೇವರ ಮಹಾರಥೋತ್ಸವ ಕಾರ್ಯಕ್ರಮಗಳು ಅನೇಕ ವಿಧಿ ವಿಧಾನಗಳಿಂದ ನಡೆಯಲಿವೆ. ಬಳಿಕ ಯಕ್ಷ ಶಾಲ್ಮಲಾ ಸಂಸ್ಥೆಯ ನೇತೃತ್ವದಲ್ಲಿ ಯಕ್ಷಗಾನ ಪ್ರದರ್ಶನ ಜರುಗಲಿದೆ.