ಯಲ್ಲಾಪುರ: ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸಾಧನೆಗೈದ ಬಹುಮುಖಿ ವ್ಯಕ್ತಿತ್ವದ ಜಿ.ಟಿ.ಭಟ್ ಬೊಮ್ಮನಹಳ್ಳಿಯವರಿಗೆ ಅಭಿನಂದನಾ ಸಮಾರಂಭವು ಮೇ.19, ರವಿವಾರ ಸಂಜೆ ತಾಲೂಕಿನ ಮಂಚಿಕೇರಿಯ ರಾಜರಾಜೇಶ್ವರಿ ಸಭಾಭವನದಲ್ಲಿ ನಡೆಯಿತು.
ಸಮಾರಂಭವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿ ಮಾತನಾಡಿ, ನಮ್ಮ ಸುತ್ತಲಿನ ಅನೇಕ ಮಹನೀಯರು ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಸೇವೆಗಳ ಮೂಲಕ ಗ್ರಾಮೀಣ ಪ್ರದೇಶಗಳ ಹೆಸರನ್ನು ದೇಶ ಮಟ್ಟಕ್ಕೆ ವಿಸ್ತರಿಸಿದ್ದಾರೆ. ಅಂತಹ ಮಹನೀಯರ ಸಾಲಿನಲ್ಲಿ ಜಿ.ಟಿ.ಭಟ್ ಅವರು ಮುಂಚೂಣಿಯಲ್ಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕವಿ ಜಯಂತ ಕಾಯ್ಕಿಣಿ, ರಂಗ ನಿರ್ದೇಶಕ ಚಿದಂಬರ ರಾವ್ ಜಂಬೆ, ಯಕ್ಷಗಾನ ಕಲಾವಿದ ಶಿವಾನಂದ ಹೆಗಡೆ ಕೆರೆಮನೆ, ಬೆಂಗಳೂರಿನ ಸಂಸ್ಕೃತ ವಿ.ವಿ.ಕುಲಪತಿ ಡಾ.ಅಹಲ್ಯಾ ಶರ್ಮ, ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮುಂತಾದವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಾಸಣಗಿ ಸೊಸೈಟಿ ಅಧ್ಯಕ್ಷ ಆರ್.ಎನ್.ಹೆಗಡೆ ಗೋರ್ಸಗದ್ದೆ ಮಾತನಾಡಿದರು. ಅಭಿನಂದನೆಯನ್ನು ಸ್ವೀಕರಿಸಿದ ಜಿ.ಟಿ.ಭಟ್ ಬೊಮ್ಮನಹಳ್ಳಿ ಮಾತನಾಡಿದರು.
ಇದೇ ವೇಳೆ ವಿವಿಧ ಸಂಘ-ಸಂಸ್ಥೆಗಳಿಂದ ಹಾಗೂ ಜಿ.ಟಿ.ಭಟ್ ಅವರ ಶಿಷ್ಯರಿಂದ ಜಿ.ಟಿ.ಭಟ್ ಹಾಗೂ ಪಾರ್ವತಿ ಭಟ್ ದಂಪತಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ರಂಗಕರ್ಮಿ ರಮಾನಂದ ಐನಕೈ ಅಭಿನಂದನಾ ನುಡಿಗಳನ್ನಾಡಿದರು. ರಂಗ ಸಮೂಹದ ಮುಖ್ಯಸ್ಥ ಆರ್.ಎನ್.ದುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಎನ್.ಶಾಸ್ತ್ರಿ ಸ್ವಾಗತಿಸಿದರು. ವಿಶ್ವನಾಥ ಬಾಮಣಕೊಪ್ಪ ವಂದಿಸಿದರು.ಬೊಮ್ಮನಹಳ್ಳಿ ಸಹೋದರಿಯರಾದ ಡಾ.ಶೀಲಾ, ವಿದ್ಯಾ, ಜ್ಯೋತಿ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ಖ್ಯಾತ ಕಲಾವಿದರಿಂದ ತಾಳಮದ್ದಳೆ ನಡೆಯಿತು.