ಶಿರಸಿ: ಹಣ ನೀಡುವಂತೆ ಪೀಡಿಸಿ, ಪ್ರೀತಮ್ ಪಾಲನಕರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮೂವರ ವಿರುದ್ಧ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಅಜ್ಜಿಬಳ ಸಮೀಪದ ಸೊಂಡ್ಲಬೈಲ್ನ ರವೀಶ ವೆಂಕಟ್ರಮಣ ಹೆಗಡೆ, ಇಲ್ಲಿನ ಗಣೇಶನಗರದ ಗಣೇಶ ಸುಬ್ರಾಯ ಆಚಾರಿ, ಊರತೋಟದ ಓಮ್ ಹೆಗಡೆ ವಿರುದ್ಧ ಪ್ರಕರಣ ದಾಖಲಾಗಿದೆ. ತನ್ನ ಅಣ್ಣ ಪ್ರೀತಮ್ ಪ್ರಕಾಶ ವಾಲನಕರನಿಗೆ ಆರೋಪಿತರಾದ ರವೀಶ ಹೆಗಡೆ, ಗಣೇಶ ಆಚಾರಿ ಮನೆಯ ವ್ಯವಹಾರದ ವಿಷಯದಲ್ಲಿ ವಿನಾಕಾರಣ ಪದೇ ಪದೇ ದೂರವಾಣಿ ಕರೆ ಮಾಡಿ ಹಣ ನೀಡುವಂತೆ ಪೀಡಿಸಿ, ಹಣ ನೀಡದೇ ಇದ್ದರೆ ಸ್ವಸ್ತಿಕ್ ಮೀಡಿಯಾ ಚಾನೆಲ್ನಲ್ಲಿ ಅಪಪ್ರಚಾರ ಮಾಡುವುದಾಗಿ ಬೆದರಿಕೆ ಹಾಕಿ ಮಾನಸಿಕ ಹಿಂಸೆ ನೀಡುತ್ತ ಬಂದಿದ್ದರು. ಸಿ.ಪಿ.ಬಝಾರದಲ್ಲಿರುವ ಕಾಮಧೇನು ಜ್ಯುವೆಲರ್ ಅಂಗಡಿಯ ಕಟ್ಟಡ ನಿರ್ಮಾಣ ಕಾರ್ಯದಲ್ಲಿರುವಾಗ ಓಂ ಹೆಗಡೆಯೂ ಮನೆಯವರಿಗೆ ಹೆದರಿಸಿ, ವ್ಯವಹಾರದ ಬಗ್ಗೆ ತೊಂದರೆ ನೀಡುತ್ತ ಬಂದಿದ್ದನು. ಆರೋಪಿತರು ಸ್ವಸ್ತಿಕ್ ಮೀಡಿಯಾ ಚಾನೆಲ್ನಲ್ಲಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಅಪಪ್ರಚಾರದ ಪೋಸ್ಟಗಳನ್ನು ಮಾಡಿ, ಮಾನಸಿಕ ಹಿಂಸೆ ನೀಡಿದ್ದರು.
ಪ್ರೀತಮ್ ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಮನೆಯ ಮರ್ಯಾದೆಗೆ ಹೆದರಿ ಮೇ.14 ರಂದು ನೇಣು ಹಾಕಿಕೊಂಡು ಮೃತಪಟ್ಟಿದ್ದು, ಮೃತ ಪ್ರೀತಮ್ ಸಾವಿಗೆ ಕಾರಣರಾದ ಮೂವರು ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಕೊಳ್ಳುವಂತೆ ಪವನ ಪಾಲನಕರ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಿಎಸ್ಐ ರತ್ನಾ ಕುರಿ ಆರೋಪಿತರ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದಾರೆ.