ಜೋಯಿಡಾ: ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ, ಬಸವೇಶ್ವರ ಹಾಗೂ ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ಸರಳವಾಗಿ ಆಚರಿಸಲಾಯಿತು. ಚುನಾವಣೆ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಸಾಂಕೇತಿಕವಾಗಿ ಕಾರ್ಯಕ್ರಮ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಂಜುನಾಥ ಮುನ್ನೊಳ್ಳಿ,ಇಲಾಖಾ ಅಧಿಕಾರಿ,ಸಿಬ್ಬಂದಿಗಳು ಉಪಸ್ಥಿತರಿದ್ದರು. ತಾಲೂಕಿನ ಉತ್ತರಕರ್ನಾಟಕದ ಶಿವ ಶರಣರ ಪ್ರಸಿದ್ಧ ಪುಣ್ಯ ಕ್ಷೇತ್ರ ಉಳವಿ ಶ್ರೀ ಚೆನ್ನ ಬಸವೇಶ್ವರ ದೇವಾಲಯದಲ್ಲಿ ಬಸವಜಯಂತಿಯ ಪ್ರಯುಕ್ತ ದಿನವಿಡೀ ಅರ್ಚಕರಾದ ಶಂಕರಯ್ಯ ಕಲ್ಮಠರವರ ಹಾಗೂ ಸಹ ಅರ್ಚಕರ ನೇತೃತ್ವದಲ್ಲಿ ವಿಶೇಷ ಪೂಜೆ,ವಿವಿಧ ಧಾರ್ಮಿಕ,ಭಜನಾ ಕಾರ್ಯಕ್ರಮಗಳು ವಿವಿಧೆಡೆಯಿಂದ ಆಗಮಿಸಿದ ಭಕ್ತಾಧಿಗಳಿಂದ ಶ್ರದ್ದಾಮನೋಭಾವನೆಯಿಂದ ನಡೆಯಿತು. ತಾಲೂಕಿನ ಹಳೆಕೋಣಪಾದಲ್ಲಿ ಬಸವೇಶ್ವರ ದೇವಾಲಯದಲ್ಲಿ ಬಸವ ಜಯಂತಿಯ ಪ್ರಯುಕ್ತ ಗ್ರಾಮದ ಪ್ರಮುಖರು ಹಾಗೂ ಗ್ರಾಮಸ್ಥರು ಜಾತ್ರೋತ್ಸವವನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಂಭ್ರಮ, ಸಡಗರದಿಂದ ಆಚರಿಸಿದರು. ಕುಂಬಾರವಾಡಾದಲ್ಲಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ 8ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಅಕ್ಷಯ ತೃತೀಯಾ, ಬಸವ ಜಯಂತಿಯ ನಿಮಿತ್ತ ಶ್ರೀ ಸತ್ಯನಾರಾಯಣ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಈ ಬಾರಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ, ಮೊದಲ ಮೂರು ಸ್ಥಾನ ಪಡೆದ ಕು.ಪೂಜಾ ಸುಧಾಕರ ದೇಸಾಯಿ, ಕು.ಅಶ್ವಿನಿ ಗುರುನಾಥ ಗಾವಡೆ, ಕು.ಪೂಜಾ ಚಂದ್ರಕಾಂತ ಪಾಲಕರ, ಕುಂಬಾರವಾಡಾ ಪ್ರೌಢ ಶಾಲೆಯ ವಿದ್ಯಾರ್ಥಿನಿಯರನ್ನು ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಪ್ರತಿಷ್ಠಾಪನಾ ಸಮಿತಿಯ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.