ಶಿರಸಿ: ನಮ್ಮ ಸಂಸ್ಕೃತಿಯ ಮೂಲ ಬೇರುಗಳಾದ ವೇದದ ಸಂರಕ್ಷಣೆಗೆ ತಾಲೂಕಿನ ಕೊಳಗಿಬೀಸ್ ಮಾರುತಿ ದೇವಾಲಯ ಕಳೆದ 26 ವರ್ಷಗಳಿಂದ ತನ್ನ ಕೊಡುಗೆ ನೀಡುತ್ತ ಬಂದಿದೆ. ಶನಿವಾರದಿಂದ ದೇವಾಲಯದ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ 15 ದಿನಗಳ ವೇದಾಧ್ಯಯನ ಶಿಬಿರ ಆರಂಭಗೊಂಡಿದೆ.
ಸಂಸ್ಕೃತ ಭಾಷೆ ಸುಂಸ್ಕೃತಿಯ ತವರು. ಸಂಸ್ಕೃತ ಕಲಿತವರು ಸಂಸ್ಕೃತಿ ಮರೆಯುವುದಿಲ್ಲ. ಜೀವನದಲ್ಲಿ ಸುಸಂಸ್ಕೃತರಾಗುತ್ತಾರೆ. ಮಕ್ಕಳು ಬೇಸಿಗೆ ರಜೆಯನ್ನು ಮನೆಯಂಗಳದಿ ಆಟವಾಡಿ ಕಳೆಯುವ ಬದಲು ವೇದಗಳ ಅಧ್ಯಯನ ಮಾಡಿ ಸುಸಂಸ್ಕೃತ ಜೀವನಕ್ಕೆ ನಾಂದಿ ಹಾಡಲಿ ಎಂಬ ಉದ್ದೇಶದಿಂದ ಉಚಿತವಾಗಿ ವೇದಾಧ್ಯನ ಶಿಬಿರ ವನ್ನು ದೇವಾಲಯದ ಆಡಳಿತ ಮಂಡಳಿ ಮತ್ತಿ ಇಲ್ಲಿಯ ಯುವಕ ಸಂಘ ಆರಂಭಿಸಿದೆ.
ವಿದ್ಯಾರ್ಥಿ ಜೀವನದಲ್ಲಿ ಕಲಿತ ವೇದ ಜೀವನದ ಉದ್ದಕ್ಕೂ ವಜ್ರ ಲೇಪನದಂತೆ ಉಳಿಯುತ್ತದೆ. ಕೊಳಗಿಬೀಸ್ ದೇವಾಲಯದಲ್ಲಿ ವೇದಾಧ್ಯಯನ ಮಾಡಿದ ಅನೇಕ ಬಾಲಕರು ಇಂದು ಮಹಾನಗರಗಳಲ್ಲಿ ಉದ್ಯೋಗದಲ್ಲಿ ಇದ್ದರೂ ಅಂದು ಕಲಿತ ಮಂತ್ರ, ವೇದಗಳು ಇಂದಿಗೂ ಅವರಲ್ಲಿ ಭದ್ರವಾಗಿದೆ.
ಶನಿವಾರದಿಂದ ಆರಂಭಗೊಂಡ 27ನೇ ವರ್ಷದ ವೇದಾಧ್ಯಯನ ಶಿಬಿರಕ್ಕೆ ವಿ.ಮಂಜುನಾಥ ಭಟ್ ಶಿರಸಿ ಚಾಲನೆ ನೀಡಿದರು. ಕೊಳಗಿಬೀಸ್ ಮಾರುತಿ ದೇವಾಲಯದ ಪ್ರಧಾನ ಅರ್ಚಕ ವಿ. ಕುಮಾರ ಭಟ್, ದೇವಾಲಯದ ಅಧ್ಯಕ್ಷ ಶ್ರೀಧರ ಹೆಗಡೆ ಇಳ್ಳುಮನೆ ಇದ್ದರು. ಆಸಕ್ತ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ.