Slide
Slide
Slide
previous arrow
next arrow

ನನಗೆ ರಾಜಕಾರಣ ಬರಲ್ಲ ಎಂದ ಕಾಗೇರಿಗೆ ಜನರೇ ಪಾಠ ಕಲಿಸುತ್ತಾರೆ: ಡಾ.ಅಂಜಲಿ ತಿರುಗೇಟು

300x250 AD

ಬನವಾಸಿ: ‘ಅಂಜಲಿಗೆ ರಾಜಕಾರಣ ಬರಲ್ಲ’ ಎಂದಿರುವ ಬಿಜೆಪಿ ಅಭ್ಯರ್ಥಿ ಕಾಗೇರಿಯವರಿಗೆ ಕ್ಷೇತ್ರದ ಜನರೇ ಮೇ 7ರಂದು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ತಿರುಗೇಟು ನೀಡಿದರು.

ಬನವಾಸಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಅಂಜಲಿ ರಾಜಕಾರಣದಲ್ಲಿ ಚಿಕ್ಕವಳು’ ಎಂದು ಕಾಗೇರಿ ಹೇಳುತ್ತಾರೆ. ಅವರು ಹಿರಿಯರು, ಅವರ ಹೇಳಿಕೆಗಳಿಗೆ ನಾನು ಉತ್ತರ ಕೊಡಲ್ಲ. ರಾಜಕಾರಣದಲ್ಲಿ ನಾನು ಚಿಕ್ಕವಳೇ, ದೊಡ್ಡವಳಾಗಲು ಬಂದಿಲ್ಲ. ಸಮಾಜಸೇವೆಗಾಗಿ ನಾನು ಬಂದಿದ್ದೀನಿ‌. ಆದರೆ ಅವರು ಜನ ಸತ್ತರೂ ಪರವಾಗಿಲ್ಲ ರಾಜಕಾರಣ ಬಿಡಲ್ಲ ಎನ್ನುವವರು. ಬಡವರು ಬಡವರಾಗೇ‌ ಉಳಿಯಬೇಕು, ಸಾಲ ಮಾಡಿಕೊಂಡು ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಮನಸ್ಥಿತಿ ಬಿಜೆಪಿಗರದ್ದು. ಆದರೆ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಿದೆ. ಆದರೆ ಬಿಜೆಪಿಗರು ಅದರ ಮೇಲೂ ರಾಜಕಾರಣ ಮಾಡುತ್ತಾರೆ. ಹಸ್ತಕ್ಕೆ ಮತ ದೇಶಕ್ಕೆ ಹಿತ ಎನ್ನುವುದನ್ನ ಜನ ಅರಿಯಬೇಕು ಎಂದರು.

ಖಾನಾಪುರದಲ್ಲಿ ಮನೆ ಇದ್ದರೂ, ಕ್ಷೇತ್ರದ ಜನತೆಗಾಗಿ ಬನವಾಸಿಗೆ ನಾನು ಒಂದೇ ತಿಂಗಳಲ್ಲಿ ಎರಡು ಬಾರಿ ಬಂದು ಹೋಗಿದ್ದೇನೆ. ಹಳಿಯಾಳ ಶಾಸಕರಾದರೂ ಆರ್.ವಿ.ದೇಶಪಾಂಡೆಯವರು ಭೇಟಿ ನೀಡಿದ್ದಾರೆ, ಇಲ್ಲಿಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನ ಮಾಡಿದ್ದಾರೆ. ಆದರೆ ಪಕ್ಕದಲ್ಲೇ ಮನೆ ಇರುವ ಬಿಜೆಪಿ ಅಭ್ಯರ್ಥಿ ಕಾಗೇರಿಯವರು ಎಷ್ಟು ಬಾರಿ ಬನವಾಸಿಗೆ ಬಂದಿದ್ದಾರೆ? ಆರು ಬಾರಿ ಶಾಸಕರು, ಸಚಿವರು, ಸ್ಪೀಕರ್ ಆಗಿ ಏನು ಕೆಲಸ ಮಾಡಿದ್ದಾರೆ? ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ಶಿರಸಿ ಶಾಸಕ ಭೀಮಣ್ಣ ನಾಯ್ಕ, ಹಲವಾರು ವರ್ಷಗಳಿಂದ ಕ್ಷೇತ್ರದಲ್ಲಿ ನಮ್ಮ ಸಂಸದರಿಲ್ಲ. ಈ ಬಾರಿ ಮತ ನೀಡಿ ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಯತ್ನಿಸಬೇಕು. ಚುನಾವಣಾ ಪೂರ್ವ ಐದು ಗ್ಯಾರಂಟಿ ಘೋಷಣೆ ಮಾಡಿ ಅದನ್ನ ಜನರಿಗೆ ಮುಟ್ಟಿಸಿದ್ದೇವೆ. ಕಾಂಗ್ರೆಸ್ ಗೆದ್ದರೆ ರಾಜ್ಯದ ಜನರ ಆರ್ಥಿಕ, ಸಾಮಾಜಿಕ ಸ್ಥಿತಿ ಸುಧಾರಿಸಲಿದೆ. ಕಾಂಗ್ರೆಸ್ ಸರ್ಕಾರ ಏನೂ ಕೆಲಸ ಮಾಡಿಲ್ಲವೆಂದು ಬಿಜೆಪಿ ಮುಖಂಡರು ಹೇಳುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಕಾಂಗ್ರೆಸ್‌ನವರು. ೬೦ ವರ್ಷ ದೇಶಕ್ಕೆ ಮೂಲಸೌಕರ್ಯ ಒದಗಿಸಿದವರು, ಅಭಿವೃದ್ಧಿ ಮಾಡಿದ್ದು ನಮ್ಮ ಪಕ್ಷ. ಬಿಜೆಪಿಗರದ್ದು ಹತ್ತು ವರ್ಷಗಳಲ್ಲಿ ಶೂನ್ಯ ಸಾಧನೆ. ದೇಶದಲ್ಲಿ ಅತ್ಯಾಚಾರ, ಅನಾಚಾರ ನಡೆದರೂ ರಕ್ಷಣೆ ನೀಡದ್ದು ಬಿಜೆಪಿ ಸರ್ಕಾರ. ಏಕತೆ ಕಾಣಲು ಕಾಂಗ್ರೆಸ್ ಸರ್ಕಾರ ಬರಬೇಕಿದೆ. ಆರು ಬಾರಿ ಗೆದ್ದು ಮಂತ್ರಿಯಾದರೂ ಅಭಿವೃದ್ಧಿ ಮಾಡದ ಬಿಜೆಪಿ ಅಭ್ಯರ್ಥಿ, ಅತಿಕ್ರಮಣದಾರರ ಸಮಸ್ಯೆ ಬಗ್ಗೆ ಎಲ್ಲೂ ಚಕಾರವೆತ್ತಿಲ್ಲ. ಕಸ್ತೂರಿ ರಂಗನ್ ಬಗ್ಗೆ ಮಾತನಾಡದ, ಅಭಿವೃದ್ಧಿ ಮಾಡದ ಅಭ್ಯರ್ಥಿ ಲೋಕಸಭೆಗೆ ಆಯ್ಕೆ ಮಾಡಿದರೆ ಅಭಿವೃದ್ಧಿ ಸಾಧ್ಯವೆ? ಎಂದು ಪ್ರಶ್ನಿಸಿದರು.

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, ಬನವಾಸಿ ಭಾಗದಲ್ಲಿ ಅಭಿವೃದ್ಧಿ ಮಾಡಿರುವುದು ಕಾಂಗ್ರೆಸ್. ತಿಂದ ಅನ್ನಕ್ಕೆ ದ್ರೋಹ ಮಾಡಬಾರದು. ಅವರಿಗಾಗಿ ಕೆಲಸ ಮಾಡಬೇಕು. ಕಾಂಗ್ರೆಸ್‌ಗೆ ದೇಶದಲ್ಲಿ ಪರ್ಯಾಯ ಪಕ್ಷವಿಲ್ಲ. ಹಿಂದುಳಿದ, ಬಡಜನರ ಪಕ್ಷವೆಂದರೆ ಅದು ಕಾಂಗ್ರೆಸ್ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಸುಳ್ಳು ಹೇಳಲು ಬಿಜೆಪಿಗರು ಈಗಾಗಲೇ ಶುರು ಮಾಡಿದ್ದಾರೆ. ಅವರಿಗೆ ಅದನ್ನ ಬಿಟ್ಟರೆ ಬೇರೇನೂ ಗೊತ್ತಿಲ್ಲ. ೧೦೦ ದಿನ ಕೇಳಿದ ಅವರಿಗೆ ೧೦ ವರ್ಷ ಗೆಲ್ಲಿಸಿದರೂ ಒಂದೇ ಒಂದು ಭರವಸೆಯನ್ನ ಬಿಜೆಪಿ ಸರ್ಕಾರ ಈಡೇರಿಸಿಲ್ಲ. ಅವರಿಗೆ ಸುಳ್ಳು ಬಿಟ್ಟರೆ ಬೇರೆ ಬಂಡವಾಳ ಇಲ್ಲ. ನಾವು ಜಾಗೃತರಾಗಬೇಕಿದೆ. ೩೦ ವರ್ಷ ಸಂಸದರನ್ನ ಕಳೆದುಕೊಂಡಿದ್ದೇವೆ. ಮೇಲೆ ನೋಡಿ ಮತ ಹಾಕಿದ್ದಕ್ಕೆ ನೀಡಿದ ಉಡುಗೊರೆ ೪೦೦ ರೂ. ಇದ್ದ ಸಿಲಿಂಡರ್ ಈಗ ೧೨೦೦ ರೂ., ೭೦ ರೂ. ಪೆಟ್ರೋಲ್ ಈಗ ೧೦೫ ರೂ. ಆಗಿದೆ. ಮಾನ ಮರ್ಯಾದೆ ಇಲ್ಲದ, ಜವಾಬ್ದಾರಿ ಇಲ್ಲದ ಪಕ್ಷ ಬಿಜೆಪಿ. ನಾವು ಸಾಮಾನ್ಯ ಜನ ಬದುಕುವಂತೆ ಮಾಡುತ್ತೇವೆ, ಒಂದು ಅವಕಾಶ ಕೊಡಿ. ಇನ್ನೊಬ್ಬರು ಸುಳ್ಳು ಹೇಳುವವರು ಬಂದಿದ್ದಾರೆಂದು ಈವರೆಗೆ ಸುಳ್ಳು ಹೇಳಿದವರನ್ನ ಬಿಜೆಪಿ ಬದಲಿಸಿದಂತೆ ನಾವು ಮಾಡಲ್ಲ ಎಂದರು.

300x250 AD

ಮಾಜಿ ಶಾಸಕ ವಿ.ಎಸ್.ಪಾಟೀಲ್, ಯುವ ಧುರೀಣ ವಿವೇಕ್ ಹೆಬ್ಬಾರ್ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್.ನಾಯ್ಕ, ರವಿ ಕಲಕರಡಿ, ಸತೀಶ್ ನಾಯ್ಕ, ಸುಮಾ ಉಗ್ರಾಣಕರ್, ಸುಜಾತಾ ಗಾಂವ್ಕರ್, ಸಿ.ವಿ.ಗೌಡ, ನಾಗರಾಜ ನಾರ್ವೇಕರ್, ಶ್ರೀನಿವಾಸ್ ಧಾತ್ರಿ ಮುಂತಾದವರಿದ್ದರು.

ಕೋಟ್…
ಪರೇಶ್ ಮೇಸ್ತಾ ಸಾವನ್ನು ಕಾಂಗ್ರೆಸ್‌ನವರು ಮಾಡಿದ್ದೆಂದು ಸೃಷ್ಟಿ ಮಾಡಿ ಕರಾವಳಿಯಲ್ಲಿ ಕಿಚ್ಚು ಹಚ್ಚಿದ್ದು ಬಿಜೆಪಿ. ಶಾಂತ ಶಿರಸಿಯಲ್ಲೂ ಬೆಂಕಿ ಹಚ್ಚಿದ ಕೀರ್ತಿ ಬಿಜೆಪಿ ಅಭ್ಯರ್ಥಿಯದ್ದು. ಬೆಂಕಿ ಹಚ್ಚಿ ಪೊಲೀಸ್ ಬಸ್ ಹತ್ತಿ ಓಡಿಹೋಗಿದ್ದ ಇವರಿಂದ ಶಾಂತಿ ಬಯಸಲು ಸಾಧ್ಯವೇ?

  • ಭೀಮಣ್ಣ ನಾಯ್ಕ, ಶಿರಸಿ ಶಾಸಕ

ಬಿಜೆಪಿಗರಿಗೆ ದೇಶ ಮಾರಲು ಆಗಿಲ್ಲ, ಉಳಿದೆಲ್ಲವನ್ನೂ ಮಾರಿಬಿಟ್ಟಿದ್ದಾರೆ. ದೇಶ ಮಾರಲೆಂದೆ ಸಂವಿಧಾನ ಬದಲಿಸಲು ಹೊರಟಿದ್ದಾರೆ. ಜನ ಎಚ್ಚರಿಕೆಯಿಂದ ಮತ ನೀಡಬೇಕು.

  • ಮಂಕಾಳ ವೈದ್ಯ, ಜಿಲ್ಲಾ ಉಸ್ತುವಾರಿ ಸಚಿವ

ಜಿಲ್ಲೆಯ ಅಸ್ಮಿತೆ ಕದಂಬ ಉತ್ಸವ ಪ್ರಾರಂಭ ಮಾಡಿದ್ದು ಕಾಂಗ್ರೆಸ್ ಸರಕಾರ. ಬಿಜೆಪಿಗೆ ಅದನ್ನು ಮುಂದುವರೆಸಲು ತಾಕತ್ತು ಇರಲಿಲ್ಲ. ಮತ್ತೆ ಪುನಃ ಪ್ರಾರಂಭಿಸಲು ಕಾಂಗ್ರೆಸ್ ಸರಕಾರವೇ ಬರಬೇಕಾಯಿತು.

  • ಆರ್.ವಿ‌.ದೇಶಪಾಂಡೆ, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ
Share This
300x250 AD
300x250 AD
300x250 AD
Back to top