ಮುಂಡಗೋಡ: ಮಠ- ಮಂದಿರ ಕಟ್ಟೋರು, ಹಿಂದುತ್ವ ಉಳಿಸಿದ್ದು ನಾವು. ಬಿಜೆಪಿಗರದ್ದು ಕೇವಲ ಬಾಯಿಮಾತಿನ ಹಿಂದುತ್ವ. ಅವರು ಬೇಕಿದ್ದರೆ ಹಿಂದುತ್ವದ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ. ರಾಜಕಾರಣದಲ್ಲಿ ಧರ್ಮವಲ್ಲ, ಮತದಾರರಿಗೆ ಸ್ಪಂದನೆ ನೀಡುವವರು ಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ತಾಲೂಕಿನ ಮಳಗಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಗರು ಮಾತು ಕೊಟ್ಟಂತೆ ೧೫ ಲಕ್ಷ ಕೊಟ್ಟು ಮತ ಕೇಳಲು ಬರಲಿ. ಅವರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವ ನೈತಿಕತೆ ಇಲ್ಲ. ಯಾವ ಸಮಸ್ಯೆಗೂ ಸ್ಪಂದಿಸದ ಸಂಸದರಿಗೆ ೩೦ ವರ್ಷ ಅವಕಾಶ ಕೊಟ್ಟಿದ್ದೆವು. ಈ ಬಾರಿ ಯಾವುದೇ ಕಾರಣಕ್ಕೂ ಎಲ್ಲಿಯೂ ವ್ಯತ್ಯಾಸವಾಗಬಾರದು. ಒಂದು ಅವಕಾಶ ಡಾ.ಅಂಜಲಿಯವರಿಗೆ ನೀಡಿ, ಮುಂದೆ ನೀವೇ ಬರಬೇಕೆಂದು ನೀವೇ ಕೇಳುತ್ತೀರಿ ಎಂದರು.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ೭೦ ವರ್ಷದಿಂದ ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿಗರು ಕೇಳುತ್ತಾರೆ. ೧೦ ವರ್ಷ ಇವರು ಏನು ಮಾಡಿದರೆಂದು ಮೊದಲು ಹೇಳಲಿ. ರೈತರು ವರ್ಷಗಟ್ಟಲೆ ಪ್ರತಿಭಟನೆ ಮಾಡಿದರೂ ಎಸಿ ರೂಮಿಂದ ಪ್ರಧಾನಿ ಹೊರಕ್ಕೆ ಬಂದಿಲ್ಲ. ಅವರೆಲ್ಲ ಖಲಿಸ್ತಾನಿ ಭಯೋತ್ಪಾದಕರು ಎಂದು ಕೇಂದ್ರ ಸರ್ಕಾರವೇ ಘೋಷಿಸಿಬಿಟ್ಟಿತು. ಇಂಥ ನಾಯಕರಿಗೆ ಮತ ಹಾಕಬೇಕಾ? ಬಡವರ, ರೈತಪರ ಕೆಲಸ ಮಾಡಿದ್ದು ಕಾಂಗ್ರೆಸ್. ಹತ್ತು ವರ್ಷದಿಂದ ಅವರು ಮನ್ ಕಿ ಬಾತ್ ಹೇಳುತ್ತಾ ಜನ್ ಕಿ ಬಾತ್ ಕೇಳಿಲ್ಲ. ಭಾರತ್ ಜೋಡೋ ಯಾತ್ರೆ ಮೂಲಕ ಜನ್ ಕೀ ಬಾತ್ ಕೇಳಿದ್ದೇವೆ, ಅದರಂತೆ ಪ್ರಣಾಳಿಕೆ ಮಾಡಿದ್ದೇವೆ. ಸಂಸತ್‌ನಲ್ಲಿ ಅರಣ್ಯ ಅತಿಕ್ರಮಣದಾರರ ಹೋರಾಟದ ಬಗ್ಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಶಾಸಕ ಭೀಮಣ್ಣ ನಾಯ್ಕ,ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಾಯಿ ಗಾಂವ್ಕರ್, ಪ್ರದಾನ ಕಾರ್ಯದರ್ಶಿ ಎಂ.ಎನ್ ದುಂಡಸಿ, ಮಾಜಿ ಶಾಸಕ ವಿ.ಎಸ್.ಪಾಟೀಲ್, ಕಾರವಾರ- ಅಂಕೋಲಾ ಕ್ಷೇತ್ರದ ಕೆಪಿಸಿಸಿ ಸಂಯೋಜಕ ಸುನೀಲ್ ನಾಯ್ಕ ಮಳಲ್ಗಾಂವ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಗಾಂವ್ಕರ್, ಮುಂಡಗೋಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನೇಶ್ವರ ಗುಡಿಯಾಳ, ಗ್ಯಾರಂಟಿ ಪ್ರಾಧಿಕಾರದ ತಾಲೂಕಾಧ್ಯಕ್ಷ ರಾಜಶೇಖರ ಹಿರೇಮಠ್, ಚುನಾವಣಾ ಉಸ್ತುವಾರಿ ಸಿ.ವಿ.ಗೌಡ, ಪ್ರಮುಖರಾದ ವಿವೇಕ್ ಹೆಬ್ಬಾರ್, ನಾಗರಾಜ್ ನಾರ್ವೇಕರ್, ಶ್ರೀನಿವಾಸ ಧಾತ್ರಿ, ಕೃಷ್ಣಾ ಹಿರೇಹಳ್ಳಿ, ಕೆಪಿಸಿಸಿ ಕಾರ್ಯದರ್ಶಿ ಕಾರ್ನಲಿನ್ ಫರ್ನಾಂಡಿಸ್ ಮುಂತಾದವರು ಉಪಸ್ಥಿತರಿದ್ದರು.