ಹಳಿಯಾಳ ತಾಲೂಕಿನ ವಿವಿಧೆಡೆ ಪ್ರಚಾರ ನಡೆಸಿದ ಬಿಜೆಪಿ ಅಭ್ಯರ್ಥಿ ಅಭಿಮತ
ಹಳಿಯಾಳ: ಈಗ ಬರುವುದು ಪಂಚಾಯತದ ಚುನಾವಣೆ ಅಲ್ಲ. ದೇಶದ ಭವಿಷ್ಯ ನಿರ್ಧಾರ ಮಾಡುವ ಲೋಕಸಭಾ ಚುನಾವಣೆ. ಕಾರಣ ದೇಶದ ಮುಂದಿನ ಭವಿಷ್ಯ ಉಜ್ವಲ ಆಗಿರಲು ನರೇಂದ್ತ ಮೋದಿ ಅವರಿಂದ ಮಾತ್ರ ಸಾಧ್ಯ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಹಳಿಯಾಳದಲ್ಲಿ ಭಾನುವಾರ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಈ ದೇಶಕ್ಕೆ ನೇತೃತ್ವ ಕೊಡಲು ಸಾಧ್ಯವಿಲ್ಲ. ಅವರಿಗೆ ಮತ ನೀಡಿದಲ್ಲಿ ೫೦ ಸೀಟೂ ಬರದವರಿಗೆ ಮತ ನೀಡಿದಂತಾಗುತ್ತದೆ. ಆದ್ದರಿಂದ ಬಿಜೆಪಿ ೪೦೦ ಕ್ಕೂ ಹೆಚ್ಚು ಸ್ಥಾನ ಪಡೆಯಲು ನಾವು ಕಾರಣ ಆಗಬೇಕು ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ರಾಜ್ಯದಲ್ಲಿ ದ್ವೇಷದ ಚಟುವಟಿಕೆಗಳು ಹೆಚ್ಚಾಗಿದೆ. ಅಪರಾಧಿಕರಣದ ಮನೋಭಾವ ಇದ್ದವರು ತಮ್ಮ ರಕ್ಷಣೆ ಮಾಡುವ ಸರ್ಕಾರ ಬಂದಿದೆ ಅಂದುಕೊಳ್ಳುತ್ತಾರೆ.ಕಾರಣ ನೇಹಾ ಹಿರೇಮಠ ಅವರ ಕೊಲೆಯಂತಹ ದುರ್ಘಟನೆ ನಡೆದಿದೆ. ಜೊತೆಗೆ ಕಳೆದ ೨೪ ಗಂಟೆಯಲ್ಲಿ ರಾಜ್ಯದಲ್ಲಿ ೧೦ ಕೊಲೆಗಳಾಗಿದೆ. ಹೀಗಾದಲ್ಲಿ ರಾಜ್ಯದಲ್ಲಿ ಮನುಷ್ಯರ ಜೀವಕ್ಕೆ ಗ್ಯಾರಂಟಿ ಕೊಡವವರು ಯಾರು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಈಗ ಜೈ ಶ್ರೀರಾಮ್ ಹೇಳುವಂತಿಲ್ಲ, ಹನುಮ ಧ್ವಜ ಹಾರಿಸುವಂತಿಲ್ಲ, ಹಮಮ ಚಾಲೀಸ ಹೇಳುವಂತಿಲ್ಲ. ಹೀಗಾದಲ್ಲಿ ನಮ್ಮ ಸ್ಥಿತಿ ಮುಂದೆ ಏನು ? ಕಾರಣ ಗಂಭೀರವಾಗಿ ಯೋಚಿಸಿ ಮತದಾನ ಪಾಲ್ಗೊಳ್ಳಬೇಕು ಎಂದ ಕಾಗೇರಿ, ಜನರ ಜೀವಕ್ಕೆ, ಸತಾನದ ಧರ್ಮಕ್ಕೆ ಉಳಿಗಾಲ ಇರಬೇಕು ಎಂದಾದಲ್ಲಿ ಕಮಲದ ಹೂವಿಗೆ ಮತ ನೀಡಬೇಕು. ಆ ಮೂಲಕ ನನ್ನನ್ನು ಸಂಸತ್ ಪ್ರವೇಶಿಸಲು ಗೆಲ್ಲಿಸುವ ಭರವಸೆಯಿದೆ ಎಂದರು.
ಬಿಜೆಪಿಯ ಗೆಲುವಿಗೆ ಬೂತ್ ಮಟ್ಟದಲ್ಲಿ ಲೀಡ್ ಕೊಡಿಸಲು ಪ್ರಯತ್ನಿಸಬೇಕು. ಮೆರಾ ಬೂತ್ ಸಬ್ಸೇ ಮಜಬೂತ್ ಎಂಬಂತೆ ಬೂತ್ ನಲ್ಲಿ ಲೀಡ್ ಬಂದಲ್ಲಿ ಗೆಲುವು ಸಾಧ್ಯ. ಹಾಗಾಗಿ ಮುಂದಿನ ೧೫ ದಿನ ಬೂತ್ ನಲ್ಲಿ ಪ್ರತಿ ಮನೆ ಮನೆ ಸಂಪರ್ಕ ಮಾಡಿ, ಸಂಘಟನೆ ಗಟ್ಟಿ ಮಾಡಿ ಗೆಲುವಿಗೆ ನಮ್ಮ ಕೊಡುಗೆ ನೀಡಬೇಕು. ಪೇಜ್ ಪ್ರಮುಖರು ಸೇರಿದಂಗೆ ಎಲ್ಲಾ ಪದಾಧಿಕಾರಿಗಳು ಈ ಬಗ್ಗೆ ಪ್ರಯತ್ನ ಮಾಡಬೇಕು ಎಂದ ಅವರು, ಅಲ್ಪ ಸಂಖ್ಯಾತರು ಒನ್ ಸೈಡೆಡ್ ಮತ ಹಾಕಬಾರದು. ಕಾಂಗ್ರೆಸ್ ನಿಮ್ಮನ್ನು ಮುಖ್ಯ ವಾಹಿನಿಗೆ ಬರಲು ಬಿಡುತ್ತಿಲ್ಲ. ಅವರಿಗೂ ಸಹ ಉಜ್ವಲ ಗ್ಯಾಸ್, ಆಯುಷ್ಮಾನ್ ಯೋಜನೆ, ಕಿಸಾಮ್ ಸಮ್ಮಾನ್ ಯೋಜನೆ, ಶೌಚಾಲಯ, ಅಕ್ಕಿ ಎಲ್ಲವೂ ಸಿಗುತ್ತಿದೆ. ಮತ್ಯಾಕೆ ಒಂದೇ ಕಡೆ ಮತ ಚಲಾಯಿಸುವುದು ಎಂದು ಪ್ರಶ್ನಿಸಿದರು. ಬಿಜೆಪಿ ಎಲ್ಲರಿಗೂ ಒಳ್ಳೆಯದನ್ನು ಮಾಡಿದೆ. ಕಾರಣ ಅದಕ್ಕೆ ಬೆಂಬಲ ನೀಡಬೇಕು ಎಂದರು.
ನಾವು ಸಂತೆಯಲ್ಲಿ ಸಿಗುವ ತರಕಾರಿಯಲ್ಲ. ಕಾರಣ ನಮ್ಮ ಮತವನ್ನು ಮಾರಾಟ ಮಾಡಿಕೊಳ್ಳಬಾರದು. ಹಾಗೆ ಮಾಡದೇ ಜವಾಬ್ದಾರಿಯುತವಾಗಿ ಮತದಾನದಲ್ಲಿ ಪಾಲ್ಗೊಂಡು ಅತಿ ಹೆಚ್ಚಿನ ಮತವನ್ನು ಕಮಲದ ಹೂವಿಗೆ ಕೊಡಬೇಕು. ದೇಶದ ಸುರಕ್ಷಿತವಾಗಿ ಇರಲು ಮೋದಿ ಪ್ರಧಾನಿ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ, ಮಾಜಿ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ್ ಹಾಗೂ ಇತರ ಪದಾಧಿಕಾರಿಗಳು ಇದ್ದರು.
**************
ಅಲ್ಪ ಸಂಖ್ಯಾತರೂ ಬಿಜೆಪಿಗೆ ಬೆಂಬಲ ಕೊಡಬೇಕು. ಅವರು ಒಂದೇ ಕಡೆ ಮತ ಹಾಕಿದಲ್ಲಿ ನಾವೂ ಮಾಡಬೇಕು. ಕಾಂಗ್ರೆಸ್ ಹಿಙದೂಗಳನ್ನು ಜಾತಿ, ಮತ, ಸುಳ್ಳು ಭರವಸೆಯಿಂದ ಒಡೆದು ಸ್ವಾರ್ಥ ಸಾಧನೆಗೆ ಮುಂದಾಗಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಅಭ್ಯರ್ಥಿ.
****************
ಕಾಗೇರಿ ಅವರು ಹಳಿಯಾಳ ತಾಲೂಕಾ ವ್ಯಾಪ್ತಿಯಲ್ಲಿ ಕಲಕಟ್ಟಾ, ಬೆಳವಟಿಗೆ, ಹವಗಿ, ಯಡೋಗಾ, ಹಳಿಯಾಳ ಪಟ್ಟಣ ಭಾಗದಲ್ಲಿ ಪ್ರಚಾರ ನಡೆಸಿದರು. ಸಾರ್ವಜನಿಕ ಸಭೆಗೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಯಿತು. ಭಾಜಪ ಗೆಲುವಿಗೆ ಶ್ರಮ ವಹಿಸುವುದಾಗಿ ಕಾರ್ಯಕರ್ತರು ಘೋಷಣೆ ಮಾಡಿದರು.