Slide
Slide
Slide
previous arrow
next arrow

ಸಮಾಜಸೇವೆಯಲ್ಲಿ ಸ್ಕೊಡ್ವೆಸ್ ಪಾತ್ರ ಅಗ್ರಗಣ್ಯ

300x250 AD

ಸ್ಕೋಡ್ವೆಸ್ 18ನೇ ಶಕ್ತಿ ದಿವಸ ಸಾಧಕರಿಗೆ ಸನ್ಮಾನ,ಗೌರವ | ವೆಂಕಟೇಶ ನಾಯ್ಕ ಸಾರಥ್ಯಕ್ಕೆ ಗಣ್ಯರ ಮೆಚ್ಚುಗೆ

ಶಿರಸಿ: ನಮ್ಮ ನಡುವಿನ ಸಾಧಕರ ಸ್ಪೂರ್ತಿಯಿಂದ ಹೊಸ ಸಾಧಕರನ್ನು ಸೃಷ್ಟಿಸುವ ಕಾರ್ಯವಾಗಬೇಕಿದೆ ಎಂದು ಕೈಗಾ ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಸೈಟ್ ಡೈರೆಕ್ಟರ್ ಪ್ರಮೋದ್ ಜಿ. ರಾಯಚೂರು ಹೇಳಿದರು. ಅವರು ಭಾನುವಾರ ಶಿರಸಿಯಲ್ಲಿ ನಡೆದ ಪ್ರತಿಷ್ಠಿತ ಸ್ಕೊಡ್‌ವೆಸ್ ಸಂಸ್ಥೆಯ 18ನೇ ಶಕ್ತಿ ದಿವಸ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಸಮುದಾಯದ ಬೇಡಿಕೆ ಮತ್ತು ಅವಶ್ಯಕತೆಗಳನ್ನು ಆಧರಿಸಿ ಕಾರ್ಯನಿರ್ವಹಿಸಲು ವೃತ್ತಿಪರ ಸಿಬ್ಬಂದಿಗಳ ಸಾಮರ್ಥ್ಯ ಬಲವರ್ಧನೆ ಮಾಡುವಲ್ಲಿ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯವ್ಯವಸ್ಥೆ ಅನುಕರಣೀಯ ಎಂದರು.

ಶಕ್ತಿದಿವಸದ ಅಂಗವಾಗಿ ಆಯೋಜಿಸಲಾಗಿದ್ದ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಗುಜರಾತ್‌ನ ದೇಸಾಯಿ ಫೌಂಡೇಶನ್‌ನ  ಕಾರ್ಯನಿರ್ವಾಹಕ ನಿರ್ದೇಶಕರಾದ ಮಿತ್ತಲ್ ಗೋಹಿಲ್‌, ವ್ಯಾಪಕವಾಗಿ ಬೆಳೆಯುತ್ತಿರುವ ಆಧುನಿಕ ವಿಜ್ಞಾನ ಹಾಗೂ ತಂತ್ರಜ್ಞಾನಗಳು ಹಲವಾರು ಅವಶ್ಯಕತೆಗಳನ್ನು ಪೂರೈಸಿದ್ದರೂ ಅನಿರೀಕ್ಷಿತವಾದ ಹಲವಾರು ಗಂಭೀರ ಸಮಸ್ಯೆಗಳನ್ನು ಸಹ ಸೃಷ್ಟಿಸುತ್ತಿವೆ. ಇದು ದೇಶದ ಆರ್ಥಿಕ ಪ್ರಗತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಕೊಡ್‌ವೆಸ್ ಸಂಸ್ಥೆಯು ಸಮಸ್ಯೆಗಳ ಮೂಲ ಸ್ವರೂಪವನ್ನು ಅರ್ಥೈಸಿಕೊಂಡು ಕಾರ್ಯನಿರ್ವಹಿಸುತ್ತಿರುವುದರಿಂದ ದೇಸಾಯಿ ಫೌಂಡೇಶನ್ ಸ್ಕೊಡ್‌ವೆಸ್ ಸಂಸ್ಥೆಯೊಂದಿಗೆ ಸೇವಾ ಒಪ್ಪಂದ ಮಾಡಿಕೊಂಡಿದೆ ಎಂದರು.

ಸಮಾರಂಭದಲ್ಲಿ ಖಾಸಗಿ ಪ್ರಸಾರದ ಸ್ಕೊಡ್‌ವೆಸ್ ವಿಕಾಸ ಪಥ ಮಾಸ ಪತ್ರಿಕೆಯ 2ನೇ ಆವೃತ್ತಿ ಬಿಡುಗಡೆ ಮಾಡಿದ ಬ್ರಿಟಾನಿಯಾ ನ್ಯೂಟ್ರಿಷನ್ ಫೌಂಡೇಶನ್‌ನ ಸಿಎಸ್‌ಆರ್ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕಾ ಸಿಂಗ್ ಮಾತನಾಡಿ, ಸ್ಕೊಡ್‌ವೆಸ್ ಸಂಸ್ಥೆ ಬೆಳೆದುಬಂದ ಹಂತಗಳನ್ನು ವಿಶ್ಲೇಷಿಸುತ್ತಾ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳು ವೃತ್ತಿಪರತೆಯನ್ನು ರೂಢಿಸಿಕೊಂಡು ಸಮಾಜದ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಾಂಸ್ಥಿಕವಾಗಿ ಬೆಳೆಯಲು ಸಾಧ್ಯ ಎಂದರು.

ಡಾ. ಶರಣ ಬಿರಾದಾರ್ ಮೆಮೋರಿಯಲ್ ಅವಾರ್ಡ್ ಪ್ರದಾನ ಮಾಡಿ ಮಾತನಾಡಿದ ಬಳ್ಳಾರಿ ಕೇಂದ್ರ ಸ್ಥಾನವನ್ನು ಹೊಂದಿರುವ ಸುಕೋ ಬ್ಯಾಂಕ್ ಲಿ.ನ ಪ್ರಧಾನ ವ್ಯವಸ್ಥಾಪಕ ಟಿ.ಎನ್. ಈಶ್ವರನ್ ಸ್ಕೊಡ್‌ವೆಸ್ ಸಂಸ್ಥೆಯ ಪಾರದರ್ಶಕ ಆರ್ಥಿಕ ನಿರ್ವಹಣಾ ವಿಧಾನವನ್ನು ಗಮನಿಸಿಯೇ ಸಂಸ್ಥೆಯೊಂದಿಗೆ ಮಹಿಳಾ ಆರ್ಥಿಕ ಬಲವರ್ಧನಾ ಚಟುವಟಿಕೆಗಳ ಅನುಷ್ಠಾನಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ಸ್ಕೊಡ್‌ವೆಸ್ ಸಂಸ್ಥೆಯ ಅಧ್ಯಕ್ಷರೂ ಆದ ಡಾ. ಹೆಚ್.ಸಿ. ಬೋರಲಿಂಗಯ್ಯ, ಹದಿನೆಂಟು ವರ್ಷಗಳ ಕಾಲ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡ ಸ್ಕೊಡ್‌ವೆಸ್ ನಾಲ್ಕು ರಾಜ್ಯಗಳಿಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಮುಂದಿನ ದಿನಗಳಲ್ಲಿ ಒಂದು ಕೋಟಿ ಫಲಾನುಭವಿಗಳನ್ನು ಸಂಪರ್ಕಿಸುವ ಉದ್ದೇಶ ಹೊಂದಲಾಗಿದೆ ಎಂದರು. 

ಸಮಾರಂಭದ ವೇದಿಕೆಯಲ್ಲಿ ಸ್ಕೊಡ್‌ವೆಸ್ ಸಂಸ್ಥೆಯ ಉಪಾಧ್ಯಕ್ಷರಾದ ಕುಮಾರ ವಿ. ಕೂರ್ಸೆ, ಸಹ-ಕಾರ್ಯದರ್ಶಿಗಳಾದ ವಸಂತ ಹಾದಿಮನೆ, ಖಜಾಂಚಿಗಳಾದ ಹೆಚ್.ಜಿ. ಲತಾ, ಸಲಹಾ ಮಂಡಳಿಯ ಸದಸ್ಯರಾದ ಡಾ. ಆರ್. ವಾಸುದೇವ, ಕಾರ್ಯಕಾರಿ ಸದಸ್ಯರಾದ ದಯಾನಂದ ಅಗಾಸೆ, ಸ್ಕೊಡ್‌ವೆಸ್ ಸಂಸ್ಥೆಯ ಸದಸ್ಯರಾದ ಜ್ಯೂಲಿಯಾನ ಫರ್ನಾಂಡೀಸ್, ಲಲಿತಾ ಹೆಗಡೆ, ಪ್ರತಿಭಾ ಭಟ್ ಹಾಗೂ ಕಿಮ್ಸ್, ಹುಬ್ಬಳ್ಳಿಯ ಹಿರಿಯ ವೈದ್ಯಾಧಿಕಾರಿಗಳಾದ ಡಾ. ಉಮೇಶ್ ಬಿರಾದಾರ ಉಪಸ್ಥಿತರಿದ್ದರು. 

300x250 AD

ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಂಸ್ಥೆಯ ಸಿಬ್ಬಂದಿಗಳು, ಸಹ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದ ಈ ಸಮಾರಂಭದ ಆರಂಭದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ವೆಂಕಟೇಶ ನಾಯ್ಕ ಕಾರ್ಯಕ್ರಮದ ಹಿನ್ನೆಲೆ, ಆಶಯದ ಕುರಿತು ಪ್ರಾಸ್ತಾವಿಕವಾಗಿ ತಿಳಿಸಿ ವೇದಿಕೆಯಲ್ಲಿರುವ ಗಣ್ಯರನ್ನು ಪರಿಚಯಿಸಿ ಸ್ವಾಗತಿಸಿದರು.

ಕೊನೆಯಲ್ಲಿ ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಹಣಕಾಸು ಅಧಿಕಾರಿಗಳಾದ ಸರಸ್ವತಿ ಎನ್. ರವಿ ಅವರು ವಂದಿಸಿದರು. ಸ್ಕೊಡ್‌ವೆಸ್ ಸಂಸ್ಥೆಯ ಸದಸ್ಯರಾದ ಪ್ರೊ. ಕೆ.ಎನ್. ಹೊಸಮನಿಯವರು ಕಾರ್ಯಕ್ರಮ ನಿರ್ವಹಿಸಿದರು. 

ರಾಜ್ಯ ಪ್ರಶಸ್ತಿ ಪ್ರದಾನ :

ಸ್ಕೊಡ್‌ವೆಸ್ ಸಂಸ್ಥೆ ಕೊಡಮಾಡುವ “ಸ್ಕೊಡ್‌ವೆಸ್ ಕರ್ನಾಟಕ ಸೇವಾರತ್ನ” ರಾಜ್ಯ ಪ್ರಶಸ್ತಿಯನ್ನು ಸಮಾಜ ಸೇವೆಗಾಗಿ ಶಿರಸಿ ವಿದ್ಯಾನಗರ ರುದ್ರಭೂಮಿ ಅಭಿವೃದ್ಧಿ ಸಮಿತಿಯ ಪರವಾಗಿ ಸಮಿತಿಯ ಅಧ್ಯಕ್ಷರಾದ ಕಾಶಿನಾಥ ಮೂಡಿಯವರಿಗೆ, ವೈದ್ಯಕೀಯ ಸೇವೆಯಲ್ಲಿ ಹತ್ತು ರೂಪಾಯಿ ಡಾಕ್ಟರೆಂದೇ ಪ್ರಖ್ಯಾತರಾದ ಲಕ್ಷಾಂತರ ಜನರಿಗೆ ವೈದ್ಯಕೀಯ ಸೇವೆ ನೀಡಿದ ಕಲಬುರ್ಗಿಯ ಡಾ. ಮಲ್ಹಾರರಾವ್ ಮಲ್ಲೆಯವರಿಗೆ ಹಾಗೂ ಸಾವಯವ ಸುಸ್ಥಿರ ಕೃಷಿ ಕ್ಷೇತ್ರದಲ್ಲಿ ನೂತನ ಪ್ರಯೋಗಗಳ ಮೂಲಕ ಸಾಧನೆ ಮಾಡಿದ ಗದಗಿನ ಪ್ರಗತಿಪರ ಸಾವಯವ ಕೃಷಿ ಸಾಧಕರಾದ ದೇವಪ್ಪ ಗುಂಡಿಕೇರಿಯವರಿಗೆ ಪ್ರದಾನ ಮಾಡಲಾಯಿತು.

ಇದೇ ಸಂದರ್ಭದಲ್ಲಿ 2023-24ನೇ ಸಾಲಿನಲ್ಲಿ ಸಂಸ್ಥೆಯ ವಿವಿಧ ಯೋಜನೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಡಾ. ಶರಣ ಬಿರಾದಾರ ಮೆಮೋರಿಯಲ್ ಅವಾರ್ಡ್ ಹಾಗೂ ವಿಶೇಷ ಸೇವಾ ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು.

Share This
300x250 AD
300x250 AD
300x250 AD
Back to top