Slide
Slide
Slide
previous arrow
next arrow

ಕಾಸರಕೋಡು ವಾಣಿಜ್ಯ ಬಂದರಿನಿಂದ ಹೊನ್ನಾವರ ಸರ್ವನಾಶ: ರಾಜೇಶ್ ತಾಂಡೇಲ್

300x250 AD

ಹೊನ್ನಾವರ : ಅಭೂತಪೂರ್ವ ಪ್ರವಾಸೋದ್ಯಮ ಪರಿಸರವನ್ನು ಹೊಂದಿರುವ ಹೊನ್ನಾವರವನ್ನು ಸರ್ವನಾಶಗೊಳಿಸಲು ಕಾಸರಕೋಡು ವಾಣಿಜ್ಯ ಬಂದರು ಎಂಬ ವಿನಾಶಕಾರಿ ಧೂಮಕೇತು ಅಪ್ಪಳಿಸಲು ಸಜ್ಜಾಗಿದ್ದು, ಕ್ಷಣಗಣನೆ ಆರಂಭವಾಗಿದೆ ಎಂದು ಟೊಂಕಾದ ಮೀನುಗಾರ ಹೋರಾಟಗಾರ ರಾಜೇಶ್ ಗೋವಿಂದ ತಾಂಡೇಲ್ ಆತಂಕ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಪ್ರವಾಸೋದ್ಯಮ ಜಗತ್ತಿನಲ್ಲಿ ಅಭೂತಪೂರ್ವ ಸ್ಥಾನದಲ್ಲಿ ವಿರಾಜಮಾನವಾಗಿದ್ದು ಈ ಅದ್ವಿತೀಯ ಸಾಧನೆಗೆ ಜನ ಬೆರಗಾಗಿದ್ದಾರೆ. ಬ್ಲೂಫ್ಲಾಗ್ ಮಾನ್ಯತೆ ಪಡೆದ ಅಪ್ಸರಕೊಂಡ ಬೀಚ್, ಶರಾವತಿ ಕಾಂಡ್ಲವನ, ಶರಾವತಿ ಹೀನ್ನೀರು ಪ್ರದೇಶಗಳು ತಾಲೂಕಿನ ಸಮೃದ್ಧಪೂರ್ಣ ಪ್ರವಾಸಿ ಸ್ಥಳಗಳಾಗಿ ಜಾಗತಿಕ ಪುಟಗಳಲ್ಲಿ ತನ್ನನ್ನು ಗುರುತಿಸಿಕೊಂಡಿದೆ.

ಕಾಸರಕೋಡು ಟೊಂಕಾ ಉದ್ದೇಶಿತಾ ಖಾಸಗಿ ವಾಣಿಜ್ಯ ಬಂದರು ಪ್ರದೇಶವು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಖಾಸಗಿ ಬಂದರು ನಿರ್ಮಾಣವಾದರೆ ಹೊನ್ನಾವರ ಸರ್ವನಾಶವಾಗುವುದರಲ್ಲಿ ಸಂಶಯವೇ ಇಲ್ಲ. ಇಲ್ಲಿ ಕಲ್ಲಿದ್ದಲು ಆಮದು ಮತ್ತು ರಫ್ತು ಪ್ರಕ್ರಿಯೆ ನಡೆಯಲಿದ್ದು, ಅದರ ಧೂಳು ಇಡೀ ತಾಲೂಕಿನ ಶರಾವತಿ ಎಡದಂಡೆ ಮತ್ತು ಬಲದಂಡೆಯ ಪ್ರದೇಶವನ್ನು ವ್ಯಾಪಿಸಿಕೊಳ್ಳಲಿದೆ ಮತ್ತು ಶರಾವತಿ ನದಿ ಸಂಪೂರ್ಣವಾಗಿ ಕಲುಷಿತಗೊಳ್ಳಲಿದೆ. ಇಲ್ಲಿನ ಜನರ ಆದಾಯದ ಮೂಲವಾಗಿರುವ ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಸಂಪೂರ್ಣ ನಾಶವಾಗುತ್ತದೆ.

ಈ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿಯನ್ನು ವಿರೋಧಿಸಿ ಕಾಸರಕೋಡು ಮೀನುಗಾರರು ನಿರಂತರವಾಗಿ ಹತ್ತು ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದ್ದಿದು ಕಳೆದ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಮೀನುಗಾರರಿಗೆ ಬೆಂಬಲ ನೀಡಿದ ರಾಜಕೀಯ ವ್ಯಕ್ತಿಗಳು ಇದೀಗ ಅಧಿಕಾರದ ಗದ್ದುಗೆ ಏರಿದ ಬಳಿಕ ಉಸುರುವಳ್ಳಿಯಂತೆ ಸಂಪೂರ್ಣ ಬದಲಾಗಿದ್ದು ಪ್ರಸ್ತುತ ಬಂದರು ನಿರ್ಮಾಣ ಕಂಪನಿಯೊಂದಿಗೆ ಶಾಮೀಲಾಗಿ ಬಡ ಮೀನುಗಾರರನ್ನು ಒಕ್ಕಲೆಬ್ಬಿಸುವ ಕುಹಕ ಸಂಚು ಮಾಡುತ್ತಿದ್ದಾರೆ. ಈ ಹಿಂದೆ ಅವರನ್ನು ನಂಬಿಕೊಂಡು ಬಂದ ಮೀನುಗಾರರಿಗೆ ಬೆಂಕಿಯಿಂದ ಬಾಣಲೆಗೆ ಬಿದ್ದ ಅನುಭವ.

300x250 AD

ಪ್ರತಿಭಟಿಸಿದ ಮೀನುಗಾರರಿಗೆ ಪೊಲೀಸ್ ಲಾಠಿ ಏಟುಗಳ ಜೊತೆಗೆ ಒಬ್ಬೊಬ್ಬರ ಮೇಲೆ ಇಪ್ಪತ್ತೆಂಟಕ್ಕೂ ಹೆಚ್ಚು ಕೇಸುಗಳನ್ನು ಹಾಕಲಾಗಿದೆ. ಓಟು ಹಾಕಿ ಗೆಲ್ಲಿಸಿದ್ದ ತಪ್ಪಿಗೆ ಮಹಾನುಭಾವ ರಾಜಕಾರಣಿ ಸೂಕ್ತವಾದ ಬಹುಮಾನವನ್ನೇ ನೀಡಿದ್ದಾನೆ. ನಮ್ಮ ಪ್ರಜಾಪ್ರಭುತ್ವದ ಕ್ರೂರ ಅಣಕವಿದು ಎಂದು ಅಳಲನ್ನು ತೊಡಿಕೊಂಡಿದ್ದಾರೆ. 

ಇದೀಗ ಕಾಸರಕೋಡು ಟೊಂಕಾದಲ್ಲಿ ತರಾತುರಿಯಲ್ಲಿ ರಸ್ತೆಕಾಮಗಾರಿ ನಡೆಸಲಾಗುತ್ತಿದೆ. ಕೋರ್ಟ್ ಆದೇಶ, ಚುನಾವಣಾ ನೀತಿ ಸಂಹಿತೆ ಯಾವುದೇ ಲೆಕ್ಕಕ್ಕಿಲ್ಲ.ಶತಾಯಗತಾಯ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಮಾಡಲೇಬೇಕು ಎಂಬ ಉದ್ದೇಶವನ್ನು ಮುಂದಿಟ್ಟುಕೊಂಡು ದುರುದ್ದೇಶಪೂರ್ವಕವಾಗಿ 144 ಸೆಕ್ಷನ್ ಹಾಕಿ ರಸ್ತೆ ಕಾಮಗಾರಿ ಕಾರ್ಯ ಭರದಿಂದ ಸಾಗುತ್ತಿದೆ. ಜಿಲ್ಲಾಡಳಿತವೇ ಇದರ ಸಾರಥ್ಯ ವಹಿಸಿರುವುದು ಆಘಾತಕಾರಿ ವಿಚಾರ. ಕಾಸರಕೋಡು ಟೊಂಕಾ ಸಮುದ್ರ ತೀರಕ್ಕೆ ಜಿಲ್ಲಾಡಳಿತ ಅಂತಿಮ ಮೊಳೆ ಹೊಡೆಯುತ್ತಿದ್ದು, ಈಗಾಗಲೇ ಇಲ್ಲಿ ಕಡಲಾಮೆಗಳನ್ನು ಬರದಂತೆ ಓಡಿಸಲಾಗಿದ್ದು, ಇದೀಗ ಮೀನುಗಾರರನ್ನು ಸಾಮೂಹಿಕವಾಗಿ ಒಕ್ಕಲೆಬ್ಬಿಸಲು ಕೊನೆಯ ಕ್ಷಣಗಳ ಕಸರತ್ತು ನಡೆಯುತ್ತಿದೆ. ಇಲ್ಲಿ ಹಲವು ವರ್ಷಗಳಿಂದ ಮನೆ ಬದುಕು ಕಟ್ಟಿಕೊಂಡಿರುವ ಮೀನುಗಾರರು ಕಳವಳಗೊಂಡಿದ್ದು ಅವರ ಬದುಕು ಸರ್ವನಾಶವಾಗಲಿದ್ದು, ಅದರೊಂದಿಗೆ ಹೊನ್ನಾವರದ ಪರಿಸರ ವ್ಯವಸ್ಥೆಯೂ ನಾಶವಾಗಲಿದೆ.  

   ಜಿಲ್ಲೆಯ ಪ್ರವಾಸೋದ್ಯಮ, ಮೀನುಗಾರಿಕೆ ಮತ್ತು ಕೃಷಿ ಚಟುವಟಿಕೆಗಳ ಜನರ ಜೀವನಾಧಾರಗಳಿಗೆ ಖಾಸಗಿ ವಾಣಿಜ್ಯ ಬಂದರು ನಿರ್ಮಾಣದಿಂದ ಊಹಿಸಲಾರದಷ್ಟು ಪ್ರತಿಕೂಲ ದುಷ್ಪರಿಣಾಮ ಉಂಟಾಗುತ್ತದೆ. ಉದ್ದೇಶಿತ ಖಾಸಗಿ ವಾಣಿಜ್ಯ ಬಂದರಿನಲ್ಲಿ ಮುಖ್ಯವಾಗಿ ಕಲಿದ್ದಲು ಆಮದು ಮತ್ತು ರಪ್ತು ಪ್ರಕ್ರಿಯೆಗಳು ನಡೆಯಲಿದ್ದು,ಇದರಿಂದ ಹೊನ್ನಾವರದ ಜೀವನದಿ ಶರಾವತಿ ಕಲುಷಿತಗೊಂಡು ಬರಡಾಗುವ ಭಯಾನಕ ದಿನಗಳು ಬರಲಿದೆ. ಜಿಲ್ಲೆಯ ಜನತೆ ಇದರ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ. ಸಮಸ್ತ ಪ್ರಜ್ಞಾವಂತ ಜನತೆ ಈ ಹೋರಾಟದಲ್ಲಿ ಭಾಗವಹಿಸಬೇಕೆಂದು ರಾಜೇಶ್ ತಾಂಡೇಲ್ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Share This
300x250 AD
300x250 AD
300x250 AD
Back to top