ಸಿದ್ದಾಪುರ: ಸಹಕಾರ ಸಂಘಗಳು ಕ್ರಿಯಾತ್ಮಕವಾಗಿ ನಡೆದು ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ನೌಕರರ ಪಾತ್ರ ಮಹತ್ವದ್ದು. ಅವರು ಗ್ರಾಹಕರನ್ನು ಆಕರ್ಷಿಸಿ, ತಮ್ಮಲ್ಲಿರುವ ಕೃಷಿ ಹಾಗೂ ಕೃಷಿಯೇತರ ಉಪಕರಣಗಳನ್ನು ಮಾರಾಟ ಮಾಡುವಲ್ಲಿ ನೌಕರರು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಅಂತಹ ಸಂಘ ಉನ್ನತಿಯತ್ತ ಸಾಗುತ್ತದೆ ಎಂದು ಸಿದ್ದಾಪುರ ಟಿ.ಎಂ.ಎಸ್. ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಹೇಳಿದರು.
ಅವರು ಸಿದ್ದಾಪುರ ಟಿ.ಎಂ.ಎಸ್. ಶಿರಸಿ ಶಾಖೆಯಲ್ಲಿ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸಿದ್ದ ವಿ.ಡಿ. ಪಾಟೀಲ ಕುಲಕರ್ಣಿ ನಿವೃತ್ತಿ ಹೊಂದಿದ್ದು ಅವರನ್ನು ಸಂಘದ ಪ್ರಧಾನ ಕಾರ್ಯಾಲಯದಲ್ಲಿ ಬೀಳ್ಕೊಡಲಾಯಿತು. ಅದರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿ.ಡಿ. ಪಾಟೀಲ ಕುಲಕರ್ಣಿ ಅವರು ತಮ್ಮ ಸೇವೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ಹೇಳಿದರು. ಉಪಾಧ್ಯಕ್ಷ ಎಂ.ಜಿ. ನಾಯ್ಕ ಹಾದ್ರಿಮನೆ, ನಿರ್ದೇಶಕರುಗಳಾದ ಜಿ.ಎಂ. ಭಟ್ಟ ಕಾಜಿನಮನೆ, ಹೆಗ್ಗರಣಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಎಲ್. ಭಟ್ಟ ಉಂಚಳ್ಳಿ, ನಿರ್ದೇಶಕ ಸುಬ್ರಾಯ ಎಲ್. ಭಟ್ಟ ಸಾಯಿಮನೆ ಮಾತನಾಡಿ ನಿವೃತ್ತಿ ಜೀವನ ನೆಮ್ಮದಿಯಿಂದ ಸಾಗಲಿ ಎಂದು ಹೇಳಿದರು.
ಈ ಸಭೆಯಲ್ಲಿ ನಿರ್ದೇಶಕರುಗಳಾದ ಕೆ.ಕೆ. ನಾಯ್ಕ ಸುಂಕತ್ತಿ, ಜಿ.ಆರ್. ಹೆಗಡೆ ಹಳದೋಟ, ಸಿ.ಎನ್. ಹೆಗಡೆ ತೆಂಗಾರ‍್ಮನೆ, ಎಂ. ಎನ್. ಹೆಗಡೆ ತಲೆಕೇರಿ, ಪಿ.ಕೆ. ನಾಯ್ಕ ಮುಗದೂರು, ಸುಲೋಚನಾ ಶಾಸ್ತ್ರಿ, ಸುಧೀರ ಗೌಡರ್, ಸುಬ್ರಹ್ಮಣ್ಯ ಜಿ. ಭಟ್ಟ ಚಟ್ನಳ್ಳಿ, ಎಲ್.ಆರ್. ಹೆಗಡೆ ಬಾಳೇಕುಳಿ, ಜೆ.ಎನ್. ಹಸಲರ್, ಎನ್.ಡಿ. ನಾಯ್ಕ ಕೋಲಸಿರ್ಸಿ, ವ್ಯವಸ್ಥಾಪಕ ಸತೀಶ ಹೆಗಡೆ ಹೆಗ್ಗಾರಕೈ ರವರು ಹಾಗೂ ಸಲಹಾ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.
ತಮಗಿತ್ತ ಸನ್ಮಾನಕ್ಕೆ ವಿ.ಡಿ. ಪಾಟೀಲ ಕುಲಕರ್ಣಿರವರು ಕೃತಜ್ಞತೆ ಹೇಳುತ್ತಾ ತಾನು ಗದಗದಿಂದ ಇಲ್ಲಿಗೆ ಬಂದು ನನಗೆ ಸೇವೆ ಮಾಡಲು ಅವಕಾಶ ನೀಡಿದ ಸಂಘದ ಅಧ್ಯಕ್ಷರಿಗೂ, ಆಡಳಿತ ಮಂಡಳಿಗೂ ಕೃತಜ್ಞತೆ ಹೇಳಿದರು.
ಮುಕ್ತಾ ಪಾಟೀಲ ಕುಲಕರ್ಣಿ ಅವರೂ ಸಹ ಉಪಸ್ಥಿತರಿದ್ದರು. ಉಪವ್ಯವಸ್ಥಾಪಕರು ಪ್ರಸನ್ನ ಭಟ್ಟ ಕೆರೆಹೊಂಡ ಸ್ವಾಗತಿಸಿದರು. ಉಪಾಧ್ಯಕ್ಷ ಎಂ.ಜಿ. ನಾಯ್ಕ ಹಾದ್ರಿಮನೆ ವಂದಿಸಿದರು.