ದುಪ್ಪಟ್ಟು ಹಣ ಪೀಕುತ್ತಿರುವ ಶಿರಸಿಯ HSRP ಫಿಟ್ಮೆಂಟ್ ಸೆಂಟರ್
ಹೊನ್ನಾವರ : 2019ರ ಏ.1ಕ್ಕಿಂತ ಮೊದಲು ಖರೀದಿ ಮಾಡಿದ ವಾಹನಗಳಿಗೆ ಉನ್ನತ ಸುರಕ್ಷತಾ ನೋಂದಣಿ ಫಲಕ (HSRP) ಕಡ್ಡಾಯವಾಗಿ ಅಳವಡಿಸಬೇಕು ಎಂಬ ಸಾರಿಗೆ ಇಲಾಖೆಯ ಆದೇಶದಂತೆ ವಾಹನದ ಮಾಲೀಕರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಇದೀಗ ನಂಬರ್ ಪ್ಲೇಟ್ ಪಡೆಯಲು ದುಪ್ಪಟ್ಟು ಹಣ ಕೇಳುತ್ತಿರುವುದು ವಾಹನ ಮಾಲೀಕರಿಗೆ ಹೊರೆಯಾಗಿ ಪರಿಣಮಿಸಿದೆ.
ಜಿಲ್ಲೆಯಲ್ಲಿ HSRP ನಂಬರ್ ಪ್ಲೇಟ್ ಅರ್ಜಿ ಸಲ್ಲಿಸಿದವರಲ್ಲಿ ಹೆಚ್ಚಿನ ಜನರಿಗೆ ಶಿರಸಿಯ ಶೋರೂಮ್ ಅಥವಾ ನಂಬರ್ ಪ್ಲೇಟ್ ಸೆಂಟರ್‌ಗಳಲ್ಲಿ ನಮೂದಿಸಲಾಗಿದೆ. ಅರ್ಜಿ ಸಲ್ಲಿಸುವಾಗ ಅದಕ್ಕೆ ತಗುಲುವ ವೆಚ್ಚವನ್ನು ಬರಿಸಲಾಗಿದೆ. ಬಹುತೇಕ ಶೋರೂಮ್‌ನವರು ಕೇವಲ ಕೊರಿಯರ್ ಚಾರ್ಜ್ ಪಡೆದು ವಾಹನ ಮಾಲೀಕರಿಗೆ ಹತ್ತಿರದ ಶೋರೂಮ್ಗಳಿಗೆ ಅಥವಾ ಅರ್ಜಿ ಸಲ್ಲಿಸಿದ ಸೆಂಟರ್‌ಗೆ ಕಳುಹಿಸಿ ಕೊಡುತ್ತಿದ್ದಾರೆ. ಇವರ ಈ ಉದಾರತೆಯಿಂದ ವಾಹನ ಮಾಲೀಕರಿಗೆ ಬೈಕ್ ತೆಗೆದುಕೊಂಡು ಶಿರಸಿಗೆ ಘಟ್ಟ ಹತ್ತಿ ಹೋಗುವುದು ತಪ್ಪಿದೆ.
ದುಪ್ಪಟ್ಟು ಹಣ ಕೇಳುತ್ತಿರುವ ಶಿರಸಿಯ HSRP ಫಿಟ್ಮೆಂಟ್ ಸೆಂಟರ್ :
ಕೆಲವು ವಾಹನ ಮಾಲೀಕರು ಅರ್ಜಿ ಸಲ್ಲಿಸುವಾಗ FTA ಕಂಪನಿಯನ್ನು ಆಯ್ಕೆ ಮಾಡಿಕೊಂಡಿದ್ದು, ಇದೆ ಕಂಪನಿ ನಂಬರ್ ಪ್ಲೇಟ್ ಕೊಡಲು ಸತಾಯಿಸುತ್ತಿದೆ. ಇದರ ರಾಜ್ಯದ ಕಚೇರಿ ಬೆಂಗಳೂರಿನಲ್ಲಿದೆ. ಇದರ ಶಾಖಾ ಕಚೇರಿ ಜಿಲ್ಲೆಗೆ ಸಂಬಂಧ ಪಟ್ಟಂತೆ HSRP ಫಿಟ್ಮೆಂಟ್ ಸೆಂಟರ್ ಶಿರಸಿಯಲ್ಲಿದ್ದು,ನಂಬರ್ ಪ್ಲೇಟ್ ಇಲ್ಲಿ ಬಂದು ಜಮಾವಣೆ ಆಗಿದೆ. ಪ್ರಾರಂಭದಲ್ಲಿ ವಾಹನ ಸಮೇತ ಬಂದು ನಂಬರ್ ಪ್ಲೇಟ್ ತೆಗೆದುಕೊಂಡು ಹೋಗಬೇಕು ಎಂದು ಹೇಳಲಾಗಿತ್ತು, ನಂಬರ್ ಪ್ಲೇಟ್ ಜೊತೆ 150 ರೂಪಾಯಿಯ ಪ್ರೇಮ್ ಕಡ್ಡಾಯವಾಗಿ ತೆಗೆದುಕೊಳ್ಳಬೇಕಿತ್ತು. ಗ್ರಾಹಕರ ಒತ್ತಡ ಹೆಚ್ಚಾದಂತೆ ನಂಬರ್ ಪ್ಲೇಟ್ ಕೊರಿಯರ್ ಮೂಲಕ ಕಳುಹಿಸಿ ಕೊಡುತ್ತೇವೆ. ಅದಕ್ಕೆ 250 ರೂ. ಚಾರ್ಜ್ ಆಗುತ್ತೆ, ಕೊರಿಯರ್ ಶುಲ್ಕ ಪ್ರತ್ಯೇಕ ಕೊಡಬೇಕು ಎಂದವರು, ನಂತರ 300 ರೂ. ಮತ್ತು ಕೊರಿಯರ್ ಚಾರ್ಜ್ ಪ್ರತ್ಯೇಕ ಕೊಡಬೇಕು ಎಂದು ದಿನಕ್ಕೊಂದು ಮೊತ್ತ ಹೇಳುತ್ತಿದ್ದಾರೆ.
ಘಟ್ಟದ ಕೆಳಗಿನವರಿಗೆ ಸಂಕಷ್ಟ :
ಅದು ಹೇಳಿ ಕೇಳಿ ಹಳೆ ವಾಹನದ ನಂಬರ್ ಪ್ಲೇಟ್ ಅಳವಡಿಕೆ, ಕೆಲವು ವಾಹನ ಸ್ಥಳೀಯ ಓಡಾಡಕ್ಕೆ ಮಾತ್ರ ಬಳಸಲಾಗುತ್ತಿದೆ. ಅದರಲ್ಲೂ ತುಂಬಾ ಜನರ ಬೈಕ್ ವಯಸ್ಕರು, ನಿವೃತ್ತಿ ಹೊಂದಿದವರು, ಮಹಿಳೆಯರೇ ಒಳಗೊಂಡಿದ್ದಾರೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳದ ಜನರು ಇಂತವರು ಬೈಕ್ ತೆಗೆದು ಕೊಂಡು ಶಿರಸಿ ಘಟ್ಟ ಹತ್ತಿ ಹೋಗುವುದು ಸಾಹಸವೇ ಸರಿ, ಅದರ ಹೊರತಾಗಿ ದಾಂಡೇಲಿ, ಹಳಿಯಾಳ ಹೀಗೆ ಬೇರೆ ಬೇರೆ ತಾಲೂಕಿನ ವಾಹನ ಮಾಲೀಕರಿಗೆ ಶಿರಸಿ ಪ್ರಯಾಣ ಪ್ರಯಾಸದಾಯಕವಾಗಿದೆ. ರಿಕ್ಷಾ ಬಾಡಿಗೆ ಮಾಡಿ ಬೈಕ್ ತೆಗೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಂಪನಿ ಮೇಲೆ ಕ್ರಮ ಆಗಬೇಕಿದೆ :
ಸಾರಿಗೆ ಇಲಾಖೆಯಿಂದ ಗುರುತಿಸಿದ ಮೂಲ ವಾಹನ ಉತ್ಪಾದನಕ ಕಂಪನಿಗಳು ಹಾಗೂ ಅಧಿಕೃತ ವಾಹನ ಡೀಲರ್ಗಳು ಮಾತ್ರವೇ ಹೆಚ್.ಎಸ್.ಆರ್.ಪಿ (HSRP) ನಂಬರ್ ಪ್ಲೇಟ್ ಅಳವಡಿಸಲು ಮಾನ್ಯತೆ ಪಡೆದಿರುತ್ತಾರೆ. ಅದರಂತೆ FTA ಕಂಪನಿಯ ಶಾಖೆ ಜಿಲ್ಲೆಯಲಿದ್ದು ಅದು ಗ್ರಾಹಕರಿಗೆ ಹೊರೆ ಆಗಿ ಪರಿಣಮಿಸಿದೆ. ಯಾರ ಮಾತನ್ನು ಕೇಳದೆ ತಮ್ಮದೇ ಆದ ನಿಯಮ ಹೇಳುತ್ತಿದೆ. ಜಿಲ್ಲೆಯ ಪ್ರತಿನಿಧಿಗೆ ಮಾತನಾಡಿದರೆ, ಅವರು ಬೆಂಗಳೂರು ಕಚೇರಿಯ ನಂಬರ್ ಕೊಡುತ್ತಾರೆ. ಅವರು ಇಲ್ಲೆ ಮಾತಾಡಿ ಹೇಳಿ ಫೋನ್ ಕಟ್ ಮಾಡುತ್ತಾರೆ. ಒಟ್ಟಾರೆ ಜನ ಸಾಮಾನ್ಯರ ಹಣ ಲೂಟಿ ಮಾಡಲೆಂದೆ ಈ ಕಂಪನಿ ಕಾಯುತ್ತಿದ್ದಂತೆ ಇದೆ.
ಲೋಕಸಭಾ ಸಮರದಲ್ಲಿದ್ದವರು ಇಂತವರ ಗೋಳು ಕೇಳಿ :
ಸದ್ಯದ ಮಟ್ಟಿಗೆ ಲೋಕಸಭಾ ಚುನಾವಣೆ ಮತ ಬೇರೆ ಜೋರಾಗಿ ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ ಮಾತಿನ ಏಟು ಜೋರಾಗಿದೆ. ಅದರ ನಡುವೆ ಇಂತಹ ಲೂಟಿ ಕೋರರ ಬಗ್ಗೆ ಸ್ವಲ್ಪ ಗಮನ ಕೊಡಬೇಕಿದೆ. ಜನ ಸಾಮಾನ್ಯರ ಹಣವನ್ನು ಉಳಿಸಬೇಕಿದೆ. ಅದರ ಜೊತೆಗೆ ವಾಹನ ತೆಗೆದುಕೊಂಡು ಹೋಗಬೇಕು ಎಂಬ ನಿಯಮದ ಬದಲು, ಕೇವಲ ಕೊರಿಯರ್ ಚಾರ್ಜ್ ಪಡೆದು ನಂಬರ್ ಪ್ಲೇಟ್ ತಲುಪಿಸುವ ಕೆಲಸ ಆಗಬೇಕಿದೆ.
ಕೆಲವರು ಸ್ವಂತ ಅವರೇ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಕೆಲವರು ಸೈಬರ್ ಸೆಂಟರ್ ಗೆ ಹೋಗಿ ಅರ್ಜಿ ಸಲ್ಲಿಸಿದ್ದಾರೆ. ಈ ಕಂಪನಿಯ ದಿನಕ್ಕೊಂದು ಹೇಳಿಕೆಗೆ ಅವರ ಸೇವಾ ಕೇಂದ್ರದ ಮೇಲೆ ಜನರಿಗೆ ಅಪನಂಬಿಕೆ ಉಂಟಾಗುವಂತಾಗಿದೆ. ಇದರ ಜೊತೆಗೆ ಈ ಕಂಪನಿ ಸಾರ್ವಜನಿಕ ಹಣವನ್ನು ಸಂಘಟಿತವಾಗಿ ಲೂಟಿ ಮಾಡುತ್ತಿದ್ದು, ಈ ಬಗ್ಗೆ ಸಮರ್ಪಕವಾಗಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಉಳಿದೆಲ್ಲ ಕಂಪನಿ ನಂಬರ್ ಪ್ಲೇಟ್ ಕಳುಹಿಸಿ ಕೊಡುತ್ತಿದೆ. ಅರ್ಜಿ ಸಲ್ಲಿಸುವಾಗ ಹಣ ಪಾವತಿ ಮಾಡಿದ್ದು ಬಿಟ್ಟರೆ, ಮತ್ತೆ ಹಣ, ಕೇಳುತ್ತಿಲ್ಲ, FTA ಕಂಪನಿ ಮಾತ್ರ ಜನರನ್ನು ಶತಾಯಿಸುತ್ತಿದೆ. ಜನ ಸಾಮಾನ್ಯರಿಗೆ ಅನುಕೂಲ ಆಗುವಂತೆ ಕ್ರಮ ಕೈಗೊಳ್ಳಬೇಕು.–ಅರ್ಜಿ ಸಲ್ಲಿಸಿದ ಆನ್ಲೈನ್ ಕೇಂದ್ರದ ಮಾಲೀಕರು
ಮುಖ್ಯಾಂಶಗಳು:
- ಅರ್ಜಿ ಸಲ್ಲಿಕೆ ಆದ ನಂತರ ಮತ್ತೆ ಯಾಕೆ ಹಣ ಪಾವತಿ ಮಾಡಬೇಕು.
- ನಂಬರ್ ಪ್ಲೇಟ್ ಜೊತೆ ಪ್ರೇಮ್ ಯಾಕೆ ಕಡ್ಡಾಯಗೊಳಿಸಲಾಗಿದೆ.
- ವಾಹನ ಮಾಲೀಕರು ಜವಾಬ್ದಾರಿ ತೆಗೆದುಕೊಂಡರೂ ಕೊರಿಯರ್ ಯಾಕೆ ಮಾಡುತ್ತಿಲ್ಲ.
- ಕೊರಿಯರ್ ಮಾಡುವುದಾದರೆ 300 ರೂ. ಯಾಕೆ ಕೊಡಬೇಕು.
- ಹಳೆಯ ವಾಹನ ಶಿರಸಿ ಘಟ್ಟ ಹತ್ತಿ ಹೋಗುವಷ್ಟು ಸುಸ್ಥಿತಿಯಲ್ಲಿ ಇರುತ್ತದೆಯೆ.?
- ವಯಸ್ಸಾದವರಿಗೆ ವಾಹನ ಅಷ್ಟು ದೂರ ಪ್ರಯಾಣಿಸಲು ಸಾಧ್ಯವಾಗುತ್ತದೆಯೇ?