ಜೊಯಿಡಾ: ಮನಸ್ಸಿದ್ದರೆ ಮಾರ್ಗವಿದೆ ಎನ್ನುವುದಕ್ಕೆ ರಾಮನಗರದ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿಯೇ ಸಾಕ್ಷಿ ಎಂದು ಹೇಳುತ್ತಾರೆ. ಇಲ್ಲಿನ ಪ್ರಾಥಮಿಕ ಶಾಲೆ ಕಳೆದ ಒಂದು ದಶಕದಿಂದ ಸುಣ್ಣ ಬಣ್ಣ ಕಂಡಿರಲಿಲ್ಲ. ಕಾರಣ ಇಷ್ಟೇ ಇಲ್ಲಿನ ಈ ಮಾದರಿ ಶಾಲೆಯಲ್ಲಿ ಸುಮಾರು 20 ಕೊಠಡಿಗಳಿದ್ದು 400ಕ್ಕು ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದು ಸುಣ್ಣ ಬಣ್ಣಕ್ಕೆ ತಗಲುವ ಖರ್ಚು ಲಕ್ಷಾಂತರ ರೂಪಾಯಿಗಳಷ್ಟು ಆಗುತ್ತಿರುವ ಕಾರಣ ಯಾರೂ ಧೈರ್ಯಕ್ಕೆ ಕೈ ಹಾಕುತ್ತಿರಲಿಲ್ಲ. ಆದರೆ ಈಗಿನ ಎಸ್. ಡಿ. ಎಂ.ಸಿಯವರು , ಪಾಲಕರು , ಶಿಕ್ಷಕರು , ವಿದ್ಯಾರ್ಥಿಗಳೆಲ್ಲ ಸೇರಿ ಸುಮಾರು ರೂ.3ವರೆ ಲಕ್ಷ ಹಣ ಕೊಡಿಸಿ ಎಲ್ಲಾ ಕೊಠಡಿಗಳನ್ನು ಶೃಂಗರಿಸಿದ್ದಾರೆ. ಇದರಿಂದ ಶಾಲೆ ಈಗ ಎಲ್ಲರ ಗಮನ ಸೆಳೆಯುತ್ತಿದ್ದು ಶಿಕ್ಷಕರು ಖುಷಿಯಿಂದ ಶಾಲೆಯಲ್ಲಿ ಓಡಾಡಿ ಮಕ್ಕಳಿಗೆ ಬೋಧಿಸುತ್ತಿದ್ದಾರೆ.
ಎಸ್. ಡಿ .ಎಂ.ಸಿ ಅಧ್ಯಕ್ಷ ಕೃಷ್ಣಾ ದೇಸಾಯಿ ಹೇಳುವಂತೆ ಕಳೆದ ಹಲವಾರು ವರ್ಷಗಳಿಂದ ಶಾಲೆಗೆ ಅಲಂಕಾರವಿಲ್ಲದೆ ಕಳೆಗುಂದಿತ್ತು. ಈಗ ಎಲ್ಲರ ಸಹಕಾರದಿಂದ ಶಾಲೆಯ ಅಲಂಕಾರ ರಂಗೇರಿದ್ದು ಓಡಾಡಲು ಖುಷಿಯಾಗುತ್ತಿದೆ.ಈಗ ನಮಗೆ ಸಾರ್ಥಕ ಭಾವನೆ ಬಂದಿದೆ. ಮಕ್ಕಳೂ ಕೂಡ ಖುಷಿಯಿಂದ ಅಭ್ಯಾಸ ಮಾಡುತ್ತಿದ್ದಾರೆ ಎನ್ನುತ್ತಾರೆ. ಎಲ್ಲಾ ಶಾಲೆಗಳ ಆಡಳಿತ ಮಂಡಳಿಯವರಿಗೂ ರಾಮನಗರದ ಶಾಲೆ ಪಾಠ ಹೇಳಿದಂತಿದೆ.