ಯಲ್ಲಾಪುರ: ಬೆಂಗಳೂರಿನ ನಗರತ್ ಪೇಟೆಯ ಮುಖೇಶ್ ಎನ್ನುವವರು ತಮ್ಮ ಅಂಗಡಿಯಲ್ಲಿ ಹನುಮಾನ್ ಚಾಲೀಸ ಭಜನೆ ಹಾಕಿದ್ದಕ್ಕೆ ಅವರ ಮೇಲೆ ಹಲ್ಲೆ ಮಾಡಿರುವ ಘಟನೆಯನ್ನು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಖಂಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣ, ಹಿಂದೂ ವಿರೋಧಿ ನೀತಿಯಿಂದ ಸಮಾಜಘಾತುಕ ಶಕ್ತಿಗಳ ಆಟಾಟೋಪ ಎಲ್ಲೆ ಮೀರಿದೆ ಎಂದು ರಾಜ್ಯ ಸರ್ಕಾರವನ್ನು ಆರೋಪಿಸಿರುವ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಹಿಂದೂಗಳ ಧಾರ್ಮಿಕ ಮನೋಭಾವನೆಗೆ ಧಕ್ಕೆ ತರುವಂತಹ ಹಲವು ಘಟನೆಗಳು ನಡೆಯುತ್ತಿದ್ದು ಇದು ಅದರ ಮುಂದುವರಿದ ಭಾಗವಾಗಿದೆ. ಹಿಂದುಗಳು ತಮ್ಮ ದೇವರ ಆರಾಧನೆಯನ್ನೂ ಮಾಡಬಾರದು ಅಂದರೆ ಏನರ್ಥ? ಮಸೀದಿಗಳಿಂದ ಇಡೀ ಊರಿಗೆ ಕೇಳುವಷ್ಟು ದೊಡ್ಡದಾಗಿ ಆಜಾನ್ ಕೂಗುವಾಗ ಹಿಂದುಗಳು ಸಹಿಸಿಕೊಳ್ಳುವದಿಲ್ಲವೇ? ಹನುಮಾನ್ ಚಾಲಿಸಾ ಹಾಕಿದರೆ ಬಂದು ಹೊಡೆಯುವ ಮಟ್ಟಕ್ಕೆ ಬಂದಿದ್ದಾರೆ ಅಂದರೆ ಇದು ಆತಂಕಕಾರಿ ಬೆಳವಣಿಗೆಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾದಿ ತಪ್ಪಿದೆ ಎಂದಿದ್ದಾರೆ.
ಈ ಪ್ರಕರಣದಲ್ಲಿ ಹಿಂದೂ ಯುವಕರನ್ನು ಬಂಧಿಸುವ ಮೂಲಕ ಸರ್ಕಾರ ಪ್ರಕರಣದ ದಾರಿ ತಪ್ಪಿಸಲಾಗುತ್ತಿದೆಯೇ ಎಂದು ಸಂಶಯ ಮೂಡುತ್ತಿದೆ. ಮೊದಲಿನಿಂದಲೂ ಅಲ್ಪಸಂಖ್ಯಾತರನ್ನು ಓಲೈಸಿಕೊಂಡು ಬಂದಿರುವ ಕಾಂಗ್ರೆಸ್ ಆರೋಪಗಳ ರಕ್ಷಣೆಗಾಗಿ ಹಿಂದೂ ಯುವಕರನ್ನೂ ಬಂಧಿಸಿದೆಯೇ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಿ ಮತ್ತು ಅವರ ಹಿಂದಿರುವ ಸಮಾಜಘಾತುಕ ಶಕ್ತಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಸರ್ಕಾರ ಮುತುವರ್ಜಿ ವಹಿಸಬೇಕು. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದರೆ ರಾಜ್ಯಾದ್ಯಂತ ಹನುಮಾನ್ ಚಾಲೀಸ ಬಹಿರಂಗ ಪಠಣ, ಪ್ರಸಾರದ ಅಭಿಯಾನ ಕೈಗೊಳ್ಳಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನೂ ರಾಜ್ಯ ಸರ್ಕಾರಕ್ಕೆ ಕೋಣೆಮನೆಯವರು ನೀಡಿದ್ದಾರೆ.
ಹಲ್ಲೆ ಮತ್ತು ಘಟನೆ ವಿವರ:
ಬೆಂಗಳೂರಿನ ನಗರತ್ ಪೇಟೆಯಲ್ಲಿ ಮೊಬೈಲ್ ಸರ್ವೀಸ್ ಅಂಗಡಿ ನಡೆಸುತ್ತಿರುವ ಮುಖೇಶ್ ಭಾನುವಾರ ಸಂಜೆ ತನ್ನ ಅಂಗಡಿಯಲ್ಲಿ ಹನುಮಾನ್ ಚಾಲಿಸಾ ಪ್ರಸಾರ ಮಾಡಿದ್ದಾನೆ. ಈ ಸಂದರ್ಭದಲ್ಲಿ ಏಕಾಏಕಿ ಅಂಗಡಿಯತ್ತ ನುಗ್ಗಿದ ಐದು ಜನರ ಗುಂಪು, ನಾವು ನಮಾಜ್ ಮಾಡುವ ವೇಳೆ ಹನುಮಾನ್ ಚಾಲಿಸಾವನ್ನು ಜೋರಾಗಿ ಹಾಕಿದ್ದೇಕೆ ಎಂದು ಪ್ರಶ್ನಿಸಿ ಭಜನೆಯನ್ನು ನಿಲ್ಲಿಸುವಂತೆ ಧಮ್ಕಿ ಹಾಕಿದ್ದಾರೆ. ಅದಕ್ಕೆ ಮುಖೇಶ್ ಆಕ್ಷೇಪ ವ್ಯಕ್ತಪಡಿಸಿದಾಗ ಐದೂ ಜನರೂ ಸೇರಿ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಈ ಎಲ್ಲ ಘಟನೆಯೂ ಅಂಗಡಿಯ ಸಿಸಿ ಟಿವಿ ಯಲ್ಲಿ ದಾಖಲಾಗಿದೆ. ನಂತರ ಹಲ್ಲೆಗೊಳಗಾಗಿ ಗಾಯಗೊಂಡ ಅಂಗಡಿ ಮಾಲೀಕ ಮುಖೇಶ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.
ಭಾನುವಾರ ಸಂಜೆ 6.30ರ ಸುಮಾರಿಗೆ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ, ಈ ಪ್ರಕರಣದಲ್ಲಿ ಮೂವರು ಆರೋಪಿಗಳಾದ ಸುಲೇಮಾನ್, ಶಹನವಾಜ್ ಮತ್ತು ರೋಹಿತ್ ನನ್ನು ಬಂಧಿಸಿದ್ದು,ಇಬ್ಬರು ತಲೆಮರಿಸಿ ಕೊಂಡಿದ್ದಾರೆ. ಹನುಮಾನ್ ಚಾಲೀಸ ಪಠಣೆಗಾಗಿ ಹಲ್ಲೆಯಾದ ಪ್ರಕರಣದಲ್ಲಿ ಹಿಂದೂ ಯುವಕರನ್ನು ಬಂಧಿಸಿರುವುದು ಸಂಶಯಕ್ಕೆ ಕಾರಣವಾಗಿದೆ.