ಹೊನ್ನಾವರ: ತಾಲೂಕಿನ ಗುಣವಂತೆಯ ಕೆರಮನೆಯ ಶಂಭು ಹೆಗಡೆ ಬಯಲು ರಂಗಮಂದಿರದಲ್ಲಿ ಹದಿನಾಲ್ಕನೇ ರಾಷ್ಟ್ರೀಯ ನಾಟ್ಯೋತ್ಸವದ ತೃತೀಯ ದಿನದ ಸಭಾ ಕಾರ್ಯಕ್ರಮ ವಿದ್ಯುಕ್ತವಾಗಿ ಶುಭಾರಂಭಗೊಂಡಿತು. ಯಕ್ಷಗಾನ ಶೈಲಿಯಲ್ಲಿ ಅನಂತ ಹೆಗಡೆ ದಂತಳಿಕೆ ಗಣಪತಿ ಸ್ತುತಿ ಗೈದರು. ಹಿಮ್ಮೇಳದಲ್ಲಿ ಮೃದಂಗ ವಾದಕರಾಗಿ ನರಸಿಂಹ ಹೆಗಡೆ ಮತ್ತು ಚಂಡೆಯಲ್ಲಿ ಶ್ರೀಧರ ಹೆಗಡೆ ಸಾತ್ ನೀಡಿದರು.
ಸಭಾಧ್ಯಕ್ಷತೆಯನ್ನು ವಹಿಸಿದ ವಿಮರ್ಶಕರು ಆದ ವಿದ್ವಾನ್ ಗ.ನಾ. ಭಟ್ಟ ಮಾತನಾಡುತ್ತ, ಶ್ರೀಮಯ ಕಲಾ ಕೇಂದ್ರದ ಆವರಣಕ್ಕೆ ಅನನ್ಯತೆ ಇದೆ, ವಿಶೇಷತೆಯ ಆಕರ್ಷಣೆ ಇದೆ. ದೇಶದ ವಿವಿಧ ಭಾಗದಲ್ಲಿರುವ ಕಲಾ ಪ್ರಕಾರಗಳನ್ನು ಈ ದಿವ್ಯ ವೇದಿಕೆಯಲ್ಲಿ ಪ್ರದರ್ಶನಕ್ಕೆ ಅವಕಾಶ ಮಾಡಿ ದೇಶವೇ ಕೆರೆಮನೆಯನ್ನು ಸುತ್ತುವಂತೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು. ಸದಾ ರಂಗಭೂಮಿ ಚಿಂತನೆಯನ್ನು ಮಾಡುತ್ತಾ ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಶಂಭು ಹೆಗಡೆಯವರ ಬಗ್ಗೆ ಸಂಶೋಧನೆ ಆಗಬೇಕಾಗಿದೆ ಎಂದರು.
ಸಾಹಿತಿಗಳು ಮತ್ತು ಹಿರಿಯ ಯಕ್ಷಗಾನ ಕಲಾವಿದರಾದ ಡಾ. ರಾಮಕೃಷ್ಣ ಗುಂದಿ, ಶಿಕ್ಷಣ ತಜ್ಞರಾದ ಪ್ರೊಫೆಸರ್ ಕೆ. ಇ. ರಾಧಾಕೃಷ್ಣ ಮತ್ತು ಸಾಹಿತಿಗಳು, ಕಾದಂಬರಿಕಾರರಾದ ಡಾ. ಗಜಾನಂದ್ ಶರ್ಮಾ ಹುಕ್ಕಲು ಇವರಿಗೆ “ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನ” ಮಾಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ರಾಮಕೃಷ್ಣ ಗುಂದಿ ಮಾತನಾಡುತ್ತಾ ಗ್ರಾಮೀಣ ಪ್ರದೇಶದಲ್ಲಿ ರಾಷ್ಟ್ರೀಯ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರುವುದು ಕಷ್ಟ ಸಾಧ್ಯ, ಆದರೂ ನಿರಂತರವಾಗಿ 14 ವರ್ಷಗಳ ಕಾಲ ಈ ಕಾರ್ಯಕ್ರಮ ನಡೆಯುತ್ತಿರುವುದು ಸಾರ್ಥಕ ಸಾಧನೆಯ ಮಾರ್ಗ ಎಂದರು. ಯಕ್ಷಗಾನ ಕ್ಷೇತ್ರದಲ್ಲಿ ಅಲ್ಪಸ್ವಲ್ಪ ಸಾರ್ಥಕ ಕಾರ್ಯ ಮಾಡಿದ ನನ್ನನ್ನು ಗುರುತಿಸಿದ ಕ್ಷಣ ನನ್ನ ಜೀವನದ ಸೌಭಾಗ್ಯ ಎಂದು ಭಾವುಕರಾದರು.
ಪ್ರೊಫೆಸರ್ ಕೆ.ಇ. ರಾಧಾಕೃಷ್ಣ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ ಸಾಮಾಜಿಕ ಮತ್ತು ರಾಜಕೀಯ ಪ್ರಭುತ್ವಗಳು ಸಂವೇದನೆಗಳನ್ನು ಕಳೆದುಕೊಂಡ ಈ ಪ್ರಸ್ತುತ ಸಂದರ್ಭದಲ್ಲಿ ಕೆರೆಮನೆ ಕುಟುಂಬಗಳು ಸ್ಥಾಪಿಸಿದ ಸಂಸ್ಥೆಗಳು ಸಾಂಸ್ಕೃತಿಕ ಸಂವೇದನೆಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿರುವುದು ವಿಶೇಷ ಎಂದರು.
ರಾಷ್ಟ್ರೀಯ ಸಂಮಾನ ಪ್ರೀತಿಯಿಂದ ಸ್ವೀಕರಿಸಿದ ಡಾ. ಗಜಾನನ ಶರ್ಮ ಮಾತನಾಡುತ್ತಾ ಉತ್ತರ ಕನ್ನಡದಲ್ಲಿ ವಿದ್ವತ್ ಪರಂಪರೆಯ ನದಿ ಹರಿದಿದೆ. ರಾಣಿ ಚೆನ್ನಬೈರಾದೇವಿ ಎಲಿಜಿಬಿತ್ ರಾಣಿಗಿಂತ ಶ್ರೇಷ್ಠ ಇತಿಹಾಸವನ್ನು ದಾಖಲಿಸಿದ ನೆಲ ಉತ್ತರ ಕನ್ನಡ ಜಿಲ್ಲೆ. ಉತ್ತರ ಕನ್ನಡ ಜಿಲ್ಲೆಗೆ ದಿವ್ಯ ಅಸ್ಮಿತೆ ಇದೆ, ಹಾಗೆಯೇ ದಿವ್ಯ ವಿಸ್ಮೃತಿಯೂ ಇದೆ. “ತನ್ನ ಬಣ್ಣಿಸಲಿಲ್ಲ, ಇದಿರು ಹಳಿಯಲಿಲ್ಲ “ಎಂಬಂತಹ ಜನ ಉತ್ತರ ಕನ್ನಡದವರಾಗಿದ್ದಾರೆ ಎಂದರು.
ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದ ಅಂಕಣಕಾರರಾದ ರಾಜು ಅಡಕಳ್ಳಿ ಮಾತನಾಡುತ್ತಾ ಹೆಗ್ಗೋಡಿನಂತಹ ಗ್ರಾಮೀಣ ಪ್ರದೇಶ ಸಾಂಸ್ಕೃತಿಕ ಕ್ರಿಯಾಶೀಲತೆಯನ್ನು ಉಳಿಸಿಕೊಂಡಂತೆ, ಕೆರಮನೆ ಈ ಪ್ರದೇಶವು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಿದೆ ಎಂದರು. ಒಂದು ವಿಶ್ವವಿದ್ಯಾಲಯ ಮಾಡುವ ಕಾರ್ಯ ಇಡುಗುಂಜಿ ಯಕ್ಷಗಾನ ಮೇಳ ಮತ್ತು ಶ್ರೀಮಯ ಕಲಾಕೇಂದ್ರ ಮಾಡಿ ಯಕ್ಷಗಾನವನ್ನು ವಿಶ್ವಗಾನವನ್ನಾಗಿ ಪರಿವರ್ತಿಸಿದೆ ಎಂದರು.
ಶಿವಾನಂದ ಹೆಗಡೆಯವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಈಶ್ವರ್ ಜಿ. ಭಟ್ಟ, ಕಡ್ಲೆ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ನಂತರ ಬೆಂಗಳೂರಿನ ನೂಪುರ ಸಂಸ್ಥೆ ಅವರಿಂದ ಅತ್ಯದ್ಭುತವಾಗಿ ಭರತನಾಟ್ಯ ಪ್ರಸ್ತುತಗೊಂಡಿತು. ಕಲಾಶ್ರೀ ಪಂಡಿತ್ ಮುದ್ದು ಮೋಹನ್ ರವರಿಂದ ಹಿಂದುಸ್ತಾನಿ ಶಾಸ್ತ್ರೀಯ ಗಾಯನ ಪ್ರದರ್ಶಿಸಲ್ಪಟ್ಟಿತು. ತಬಲಾದಲ್ಲಿ ಗೋಪಾಲಕೃಷ್ಣ ಹೆಗಡೆ ಕಲಬಾಗ್ ಹಾಗೂ ಹಾರ್ಮೋನಿಯಂನಲ್ಲಿ ಭರತ್ ಹೆಗಡೆ ಸಾತ್ ನೀಡಿದರು. ಅಂತಿಮವಾಗಿ ಕಿನ್ನರ ಮೇಳ ತುಮರಿ ಇವರಿಂದ ‘ಅನ್ಯಾಳ ಡೈರಿ’ ಎಂಬ ನಾಟಕ ಪ್ರದರ್ಶನಗೊಂಡಿತು.