Slide
Slide
Slide
previous arrow
next arrow

ಉತ್ತರ ಕನ್ನಡಕ್ಕೆ ಮತ್ತೆ ಅನಂತನೇ ಉತ್ತರ!!

300x250 AD

ಹಳೆಮುಖಕ್ಕೆ ಮಣೆ ಹಾಕಲಿದೆಯಾ ಬಿಜೆಪಿ ಹೈಕಮಾಂಡ್ | ಬದಲಾದರೆ ಕಾಗೇರಿಗೆ‌ ಚಾನ್ಸ್

ಶಿರಸಿ: ಮುಂಬರುವ ಲೋಕಸಭಾ ಚುನಾವಣೆಗೆ ಭಾಜಪಾ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ ಬಿಡುಗಡೆಗೊಳಿಸಿದ್ದು, ರಾಜ್ಯದಲ್ಲಿ ಸಾಕಷ್ಟು ಅಚ್ಚರಿ ನಿರ್ಣಯಗಳನ್ನು ತೆಗೆದುಕೊಳ್ಳುವ ಮೂಲಕ ಹಾಲಿ‌ಸಂಸದರಿಗೆ ಶಾಕ್ ನೀಡಿದೆ. ಅಭಿವೃದ್ಧಿಯಲ್ಲಿ ನಂಬರ್ ಒನ್ ಸಂಸದ ಎಂದೇ ಗುರುತಿಸಿಕೊಂಡಿದ್ದ ಮೈಸೂರಿನ ಪ್ರತಾಪ್ ಸಿಂಹರಿಗೆ ಸಹ ಬದಲಾವಣೆಯ ಬಿಸಿ ತಟ್ಟಿದ್ದು, ಹೈಕಮಾಂಡ್ ಯಾವ ಆಧಾರದ ಮೇಲೆ ಟಿಕೆಟ್ ಹಂಚಿಕೆ ಮಾಡುತ್ತಿದೆ ಎಂಬುದು ಕಾರ್ಯಕರ್ತರ ವಲಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ಘೋಷಣೆಯಾದ ರಾಜ್ಯದ 20 ಕ್ಷೇತ್ರದಲ್ಲಿ ಉತ್ತರ ಕನ್ನಡ ಮಿಸ್:
ಟಿಕೆಟ್ ಹಂಚಿಕೆಯಲ್ಲಿ ಪ್ರತಿಬಾರಿಯಂತೆ ಈ ಬಾರಿ ಉತ್ತರ ಕನ್ನಡಕ್ಕೆ ಮೊದಲ ಪಟ್ಟಿಯಲ್ಲಿ ಸ್ಥಾನ ಕಾಣದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹಾಲಿ ಸಂಸದ ಅನಂತಕುಮಾರ ಹೆಗಡೆ ಇಷ್ಟು ವರ್ಷ ಯಾವುದೇ ಅಡತಡೆಯಿಲ್ಲದೇ ಟಿಕೆಟ್ ಸರಾಗವಾಗಿ ಪಡೆಯುತ್ತಿದ್ದರು. ಆದರೆ ತಮ್ಮ ಮಾತಿನ ಓಘದಲ್ಲಿ ಹಾದಿ ತಪ್ಪುವ ಮೂಲಕ ಬಿಜೆಪಿಯ ಕೇಂದ್ರ ಹಾಗು ರಾಜ್ಯ ನಾಯಕರುಗಳಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ. ಈ ಮೊದಲು ನೀಡಿದ್ದ ಕೇಂದ್ರ ಸಚಿವ ಸ್ಥಾನವೂ ಸಹ ಇದೇ ಕಾರಣಕ್ಕೆ ಕೈತಪ್ಪಿತ್ತು ಎಂದೇ ಅಂದಾಜಿಸಲಾಗಿದೆ. ಈ ಬಾರಿ ಉತ್ತರ ಕನ್ನಡದಲ್ಲಿಯೂ ಸಹ ಬದಲಾವಣೆಯ ಗಾಳಿ ಗಟ್ಟಿಯಾಗಿ ಬೀಸುವ ಕಾರಣಕ್ಕೆ ಉತ್ತರ ಕನ್ನಡವನ್ನು ಈ ಪಟ್ಟಿಯಲ್ಲಿ ಹೊರಗಿಟ್ಟಿದ್ದಾರೆ ಎನ್ನುವುದು ಬಹುತೇಕರ ಸಾಮಾನ್ಯ ವಾದವಾಗಿದೆ.

ಅನಂತನ ಬಿಟ್ಟರೆ ಕ್ಷೇತ್ರಕ್ಕೆ ಇನ್ಯಾರು ?

300x250 AD

ಹಾಲಿ ಸಂಸದ ಅನಂತಕುಮಾರ ಹೆಗಡೆ ಹೊರತಾಗಿ ಜಿಲ್ಲೆಯಲ್ಲಿ ಸಾಕಷ್ಟು ಕಾರ್ಯಕರ್ತರು ಇದ್ದರೂ ಸಹ, ಹೈ ಕಮಾಂಡ್ ಬಯಸುವುದು ರಿಸ್ಕ್ ಇಲ್ಲದ ಗೆಲುವನ್ನಾಗಿದೆ. ಹೈ ರಿಸ್ಕ್ ತೆಗೆದುಕೊಂಡು ತೀರಾ ಹೊಸಮುಖಕ್ಕೆ ಟಿಕೆಟ್ ನೀಡಿ, ಗೆಲ್ಲಿಸುವ ಇರಾದೆಯನ್ನು ಹೈಕಮಾಂಡ್ ತೆಗೆದುಕೊಳ್ಳುವಂತೆ ಕಾಣುವುದಿಲ್ಲ. ಹಾಗಾಗಿ ಕ್ಷೇತ್ರಕ್ಕೆ ಚಿರಪರಿಚಿತ ವ್ಯಕ್ತಿಗಳ ಪೈಕಿ ಇನ್ನೊಂದು ಹೆಸರು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ. ಸರಳ, ಸಜ್ಜನ ರಾಜಕಾರಣಿ ಎಂದೇ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಕಾಗೇರಿಗೆ ಎರಡನೇ ಆದ್ಯತೆಯಾಗಿ ಸ್ಥಾನ ದೊರೆಯಬಹುದು. ಅದರ ಹೊರತಾಗಿ ಹರಿಪ್ರಕಾಶ ಕೋಣೆಮನೆ ಹೆಸರು ಪ್ರಬಲವಾಗಿ ಕೇಳಿಬಂದರೂ ಸಹ, ಕ್ಷೇತ್ರದಲ್ಲಿ ಮತ್ತಷ್ಟು ಓಡಾಡುವ ಅವಶ್ಯಕತೆ ಇದ್ದಂತೆ ತೋರುತ್ತದೆ. ಅನಂತಮೂರ್ತಿ ಹೆಗಡೆ ಹೆಸರು ಕ್ಷೇತ್ರದಲ್ಲಿ ಸಾಕಷ್ಟು ಓಡಾಡಿದರೂ ಪಕ್ಷಕ್ಕೆ ಹೊಸಬರು. ರಾಜಕಾರಣಿಗಳ ಬಿಟ್ಟು ಸಂಘಪರಿವಾರದಲ್ಲಿ ಜಿಲ್ಲೆಯ ಮಟ್ಟಿಗೆ ಕೇಳಿ ಬರುವ ಮತ್ತೊಂದು ಹೆಸರು ಚಕ್ರವರ್ತಿ ಸೂಲಿಬೆಲೆ. ಹಾಗೇ ನೋಡಿದರೆ, ಅವರಿಗಿರುವ ಸೈದ್ಧಾಂತಿಕ ಬದ್ಧತೆ, ಕ್ಷೇತ್ರ ಓಡಾಟ, ಕಾರ್ಯಶೈಲಿ, ವಾಗ್ಝರಿ, ಹೈ ನಾಯಕರ ನಿಕಟ ಸಂಪರ್ಕ ಎಲ್ಲವನ್ನೂ ಗಮನಿಸಿದರೆ ಸೂಲಿಬೆಲೆಗೆ ಎಂಪಿ ಟಿಕೆಟ್ ಪಡೆಯುವುದು ಅಷ್ಟೇನು ಕಷ್ಟಸಾಧ್ಯವಲ್ಲ. ಆದರೆ ರಾಜಕೀಯದಲ್ಲಿ ನಿರಾಸಕ್ತಿ ಹೊಂದಿರುವ ಕಾರಣಕ್ಕೆ ರಾಜಕೀಯದಿಂದ ದೂರ ಇದ್ದರೆ ಎಂಬುದು ಅವರ ಒಡನಾಡಿಗಳ ಮಾತು. ಆದರೆ ಈ ಬಾರಿ ಅವರೂ ಸಹ ಸಂದರ್ಶನವೊಂದರಲ್ಲಿ ಕೆಲವು ಸಂಗತಿಗಳಿಗೆ ರಾಜಕೀಯದ ಸ್ಥಾನ-ಮಾನ ಅನಿವಾರ್ಯವಾಗುತ್ತದೆ ಎಂದು ಹೇಳಿದ್ದು, ಅವರ ರಾಜಕೀಯ ಆಸಕ್ತಿ ಬದಲಾಗಿದೆಯೇ ಎಂಬುದನ್ನು ಕಾದುನೋಡಬೇಕು. ಹೈಕಮಾಂಡ್ ಕೇಳಿದ್ದಲ್ಲಿ, ಸಂಘ-ಪರಿವಾರದ ನಾಯಕರ ಒತ್ತಾಯಕ್ಕೆ ಸೂಲಿಬೆಲೆ ಅಭ್ಯರ್ಥಿಯಾದರೂ ಅಚ್ಚರಿಯಿಲ್ಲ. ಆದರೆ ಅದಕ್ಕೆ ಅವರು ಮನಸ್ಸು ಮಾಡಬೇಕಷ್ಟೇ.

ಹಿಂದೂ ಹುಲಿ ಅನಂತನ ಮರು ಆಯ್ಕೆ ಗುಟ್ಟೇನು ?
ಹಾಗೇ ನೋಡಿದರೆ ಈ ಬಾರಿ ಬದಲಾವಣೆಯ ಗಾಳಿ ಪ್ರಬಲವಾಗಿ ಕೇಳಿ ಬರುತ್ತಿರುವುದು ಅನಂತಕುಮಾರ ಹೆಗಡೆ ವಿಷಯದಲ್ಲಿ. ಅವರ ಮಾತೇ ಅವರಿಗೆ ಮುಳ್ಳಾಗಿ ಪರಿಣಮಿಸಿದೆ. ಅವರ ಮಾತಿನ ಹೇಳಿಕೆಯನ್ನು ಕಡು ವಿರೋಧಿ ಕಾಂಗ್ರೆಸ್ ತಿರುಚಿ ಅಪಪ್ರಚಾರ ಮಾಡುತ್ತಿದೆ ಎಂಬುದು ಅಭಿಮಾನಿಗಳ ಅಂಬೋಣ. ಆದರೆ ಕರ್ನಾಟಕ ರಾಜ್ಯದಲ್ಲಿ ಮಲಗಿಕೊಂಡಿದ್ದ ರಾಜ್ಯ ಬಿಜೆಪಿಯನ್ನು ಲೋಕಸಭಾ ಚುನಾವಣೆಗೆ ಬಡಿದೆಬ್ಬಿಸುವ ಛಾತಿ ಇರುವ ಏಕೈಕ ನಾಯಕನೆಂದರೆ ಅದು ಅನಂತಕುಮಾರ. ತನ್ನ ಪ್ರಖರ ಹಿಂದುತ್ವದ ಮಾತಿನಿಂದ, ತರುಣರಲ್ಲಿ ಕಿಚ್ಚನ್ನು ಹೊತ್ತಿಸಬಲ್ಲ ನಾಯಕತ್ವವೆಂದರೆ ಅದು ಹಿಂದೂ ಹುಲಿ ಖ್ಯಾತಿಯ ಅನಂತಕುಮಾರ ಮಾತ್ರ. ಅದರ ಹೊರತಾಗಿ ಆರು ಬಾರಿ ಸಂಸದನಾಗಿದ್ದರೂ ಭ್ರಷ್ಟಾಚಾರದ ಸೋಂಕನ್ನು ಲವಲೇಶವೂ ಸೋಕಿಕೊಳ್ಳದ ಅನಂತ, ಹೈ ಕಮಾಂಡ್ ನ ಮರುಆಯ್ಕೆಗೆ ಮತ್ತೊಂದು ಪ್ರಬಲ ಕಾರಣವೆಂದರೆ ಯಡ್ಯೂರಪ್ಪರವರ ಕೃಪಾಕಟಾಕ್ಷ. ರಾಜ್ಯದಲ್ಲಿ ಈ ಬಾರಿಯ ಟಿಕೆಟ್ ಹಂಚಿಕೆಯ ಪ್ಯಾಟರ್ನ್ ನೋಡಿದರೆ, ರಾಜ್ಯದ ವಿಚಾರದಲ್ಲಿ ಕೇಂದ್ರ ನಾಯಕರು ಅಷ್ಟೇನು ರಿಸ್ಕ್ ತೆಗೆದುಕೊಂಡಂತಿಲ್ಲ. ಒಂದೆರಡು ಕ್ಷೇತ್ರ ಹೊರತುಪಡಿಸಿ, ಉಳಿದೆಲ್ಲಾ ಕಡೆ ಯಡ್ಯೂರಪ್ಪ ನೇತೃತ್ವದ ತಂಡ ಸಿದ್ಧಪಡಿಸಿದ ವ್ಯಕ್ತಿಗಳಿಗೇ ಟಿಕೆಟ್ ನೀಡಿದಂತೆ ಕಾಣುತ್ತದೆ. ಆ ಹಿನ್ನಲೆಯಲ್ಲಿ ಗೆಲುವೊಂದೇ ಟಿಕೆಟ್ ನೀಡುವಿಕೆಯ ಮಾನದಂಡವನ್ನಾಗಿಸಿದರೆ ಅನಂತಕುಮಾರ ಮತ್ತೆ ಅಭ್ಯರ್ಥಿಯಾಗುತ್ತಾರೆ. ಅದರ ಹೊರತಾಗಿ ಮೋದಿಯಂತಹ ರಾಜಕಾರಣಿಯ ಆದರ್ಶಗಳನ್ನು ಮಾನದಂಡವಾಗಿಸಿದ್ದಲ್ಲಿ ಅನಂತಕುಮಾರ ಮಾಜಿಯಾಗುವುದರಲ್ಲಿ ಎರಡು ಮಾತಿಲ್ಲ. ಆಗ ನಿರಾಯಾಸವಾಗಿ ಕಾಗೇರಿಗೆ ಅದೃಷ್ಟ ಖುಲಾಯಿಸಿದಂತೆ. ಆದರೆ ಯಾವುದೇ ನಿರ್ಣಯ ತೆಗೆದುಕೊಳ್ಳುವ ಮೊದಲು, ಹೈಕಮಾಂಡ್ ಅನಂತಕುಮಾರರೊಂದಿಗೆ ಚರ್ಚಿಸಿಯೇ ನಿಲುವನ್ನು ಬದಲಾವಣೆ ಮಾಡುತ್ತಾರೆಂದು ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ಟಿಕೆಟ್ ನೀಡುವಿಕೆಗೆ ಕಗ್ಗಂಟಾದ ಉತ್ತರ ಕನ್ನಡಕ್ಕೆ ಯಾರಾಗುತ್ತಾರೆ ಭಾಜಪಾದ ಅಭ್ಯರ್ಥಿ ಎಂಬುದನ್ನು ಒಂದೆರಡು ದಿನದಲ್ಲಿ ಬಿಡುಗಡೆಗೊಳಿಸುವ ಕೇಂದ್ರ ನಾಯಕರ ಅಂತಿಮ ಪಟ್ಟಿಗೋಸ್ಕರ ಕಾಯಬೇಕಿದೆ.

Share This
300x250 AD
300x250 AD
300x250 AD
Back to top