ಸಿದ್ದಾಪುರ: ಪಟ್ಟಣದಲ್ಲಿ ಎರಡನೇ ಹಂತದಲ್ಲಿ ನಡೆಯುತ್ತಿರುವ ಚತುಷ್ಪತ ರಸ್ತೆ ಕಾಮಗಾರಿ ಕುಂಟುತ್ತಾ ಸಾಗಿರುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ ಎಂದು ಬಿಜೆಪಿ ಸಿದ್ದಾಪುರ ಮಂಡಲದ ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ್ ಹೇಳಿದ್ದಾರೆ.
ಸಿದ್ದಾಪುರ ಪಟ್ಟಣದ ಸೌಂದರ್ಯ ಹೆಚ್ಚಿಸಿ ವಾಹನ ಸಂಚಾರಕ್ಕೆ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗಲೆಂದು ಹಿಂದಿನ ಬಿಜೆಪಿ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪ್ರಯತ್ನದಿಂದ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಚತುಷ್ಟತ ರಸ್ತೆ ಕಾಮಗಾರಿಗೆ ಎರಡು ಹಂತದಲ್ಲಿ ಹಣ ಬಿಡುಗಡೆ ಮಾಡಿಲಾಗಿತ್ತು. ಮೊದಲನೇ ಹಂತದ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಬಂದು 10 ತಿಂಗಳಾದರೂ ಭಗತ್ ಸಿಂಗ್ ಸರ್ಕಲ್‌ನಿಂದ ಹೊಸೂರು ಜೋಗ ಸರ್ಕಲ್‌ವರೆಗಿನ ಎರಡನೇ ಹಂತದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ 1-2 ಕಿಮೀ ರಸ್ತೆ ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದು ನೋಡಿ ಜನ ಇದು ಪಂಚವಾರ್ಷಿಕ ಯೋಜನೆಯೇ? ಎಂದು ಆಡಿಕೊಕೊಳ್ಳುತ್ತಿದ್ದಾರೆ.
ಹೊಸೂರು ಸಾಗರ ಕ್ರಾಸ್ ಭೂತಪ್ಪನ ಕಟ್ಟೆಯಿಂದ ಹೊಸೂರು ಜೋಗ ಕ್ರಾಸ್‌ವರೆಗೆ ರಸ್ತೆ ಅಗಲೀಕರಣಕ್ಕಾಗಿ ರಸ್ತೆ ಅಗೆದು ಮಣ್ಣು ತೆಗೆದು 20 ದಿನ ಕಳೆದಿದೆ. ಇನ್ನೂ ಕಾಮಗಾರಿ ಪ್ರಾರಂಭಿಸಿಲ್ಲ. ರಸ್ತೆ ಅಗೆದ ಪರಿಣಾಮ ಮಡಿವಾಳಕೇರಿ ಹಾಗೂ ಎಲ್.ಬಿ ನಗರ ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಕಳೆದ 20 ದಿನದಿಂದ ಎಲ್.ಬಿ. ನಗರ ಹಾಗೂ ಮಡಿವಾಳಕೇರಿ ನಿವಾಸಿಗಳು ಬೇರೆ ಕಡೆ ಅವರ ವಾಹನ ನಿಲ್ಲಿಸಿ ನಡೆದುಕೊಂಡೆ ಓಡಾಡುವ ಸಮಸ್ಯೆ ಎದುರಾಗಿದೆ. ರಸ್ತೆ ಅಗೆದು 20 ದಿನಗಳು ಕಳೆದು ರಸ್ತೆ ಸಂಪರ್ಕ ಕಡಿತಗೊಂಡಿದ್ದರೂ ಇನ್ನು ಕಾಮಗಾರಿ ಆರಂಭಿಸದೇ ಇರುವುದು ನೋಡಿದರೆ ಸಂಬಂಧಪಟ್ಟ ಅಧಿಕಾರಿಗಳು ಎಲ್.ಬಿ. ನಗರ ಹಾಗೂ ಮಡಿವಾಳಕೇರಿಯ ಜನ ಓಡಾಟಕ್ಕೆ ರಸ್ತೆ ಮಾರ್ಗದ ಬದಲಾಗಿ ವಾಯುಮಾರ್ಗ, ಜಲಮಾರ್ಗ ಬಳಸುತ್ತಾರೆ ಎಂದು ಭಾವಿಸಿದ್ದಾರೋ ಅಥವಾ ಯಾರದೋ ಸೂಚನೆಯ ಮೇರೆಗೆ ಉದ್ದೇಶಪೂರ್ವಕವಾಗಿಯೇ ಅಲ್ಲಿನ ನಿವಾಸಿಗಳಿಗೆ ತೊಂದರೆ ಆಗಲೆಂದೇ ಕಾಮಗಾರಿ ವಿಳಂಬ ಮಾಡುತ್ತಿದ್ದಾರೋ ತಿಳಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 20 ದಿನದಿಂದ ಅಲ್ಲಿನ ನಿವಾಸಿಗಳು ರಸ್ತೆ ಸಂಪರ್ಕ ಕಡಿತಗೊಂಡು ಹಿಂಸೆ ಅನುಭವಿಸುತ್ತಿದ್ದರೂ ಸಹ ಸಂಬಂಧಪಟ್ಟವರು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ. ರಸ್ತೆ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡದೇ ಇದ್ದಲ್ಲಿ ಮಡಿವಾಳ ಕೇರಿ ಹಾಗೂ ಎಲ್. ಬಿ. ನಗರ ನಿವಾಸಿಗಳು ವಾಹನಗಳನ್ನು ಸಿದ್ದಾಪುರ ಜೋಗ ಮುಖ್ಯ ರಸ್ತೆಯಲ್ಲಿಯೇ ನಿಲ್ಲಿಸಿ, ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಮಾಧ್ಯಮದ ಮೂಲಕ ಎಚ್ಚರಿಕೆ ನೀಡಿದ್ದಾರೆ.