ದಾಂಡೇಲಿ : ಕೆನರಾ ವೆಲ್ಫೇರ್ ಟ್ರಸ್ಟಿನ ಇಎಂಎಸ್ ಆಂಗ್ಲ ಮಾಧ್ಯಮ ಶಾಲೆಗೆ ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಿಎಸ್ಆರ್ ಯೋಜನೆಯಡಿ ನಿರ್ಮಿಸಲಾದ ನೂತನ ಭೋಜನಾಲಯದ ಉದ್ಘಾಟನೆಯು ಮಂಗಳವಾರ ಬೆಳಿಗ್ಗೆ ಜರುಗಿತು.
ಭೋಜನಾಲಯವನ್ನು ಉದ್ಘಾಟಿಸಿ ಮಾತನಾಡಿದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ತಿವಾರಿ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ಮಾರ್ಗದರ್ಶನದಲ್ಲಿ ಕಾರ್ಖಾನೆಯ ಸಿಎಸ್ಆರ್ ಯೋಜನೆಯಡಿ ಈ ಶಾಲೆಗೆ ಭೋಜನಾಲಯವನ್ನು ನಿರ್ಮಾಣ ಮಾಡಲಾಗಿದೆ. ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ದಾಂಡೇಲಿ ಹಾಗೂ ದಾಂಡೇಲಿ ಸುತ್ತಮುತ್ತಲ ಶೈಕ್ಷಣಿಕ, ಸಾಮಾಜಿಕ ಮತ್ತು ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ ಕೆಲಸ ನಿರ್ವಹಿಸುತ್ತಿದೆ. ಶೈಕ್ಷಣಿಕ ಕ್ಷೇತ್ರ ಪ್ರಗತಿ ಸಾಧಿಸಿದಾಗ ದೇಶದ ಪ್ರಗತಿ ಸುಲಭ ಸಾಧ್ಯ. ಈ ನಿಟ್ಟಿನಲ್ಲಿ ಶೈಕ್ಷಣಿಕ ಕ್ಷೇತ್ರದ ಬಲವರ್ಧನೆಗೆ ವೆಸ್ಟ್‌ಕೋಸ್ಟ್ ಕಾಗದ ಕಾರ್ಖಾನೆ ತನ್ನನ್ನು ತಾನು ತೊಡಗಿಸಿಕೊಂಡಿದೆ. ಕಾಗದ ಕಾರ್ಖಾನೆಯ ಕಾರ್ಯ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡುತ್ತಿರುವ ದಾಂಡೇಲಿಯ ಜನತೆಯ ಸಹಕಾರದಿಂದಾಗಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಮತ್ತಷ್ಟು ಸೇವಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಪಡಿಸಲು ಸಾಧ್ಯವಾಗಿದೆ ಎಂದರು. ಇವತ್ತು ಉದ್ಘಾಟನೆಗೊಂಡ ಭೋಜನಾಲಯವನ್ನು ಈ ಶಾಲೆಯ ವಿದ್ಯಾರ್ಥಿಗಳು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಎಸ್.ಎಸ್.ನೂಲಿನ್ ಮಾತನಾಡಿ ಇಷ್ಟು ದೊಡ್ಡ ಶಿಕ್ಷಣ ಸಂಸ್ಥೆಗೆ ಅತಿ ಅಗತ್ಯವಾಗಿ ಭೋಜನಾಲಯ ಬೇಕಿತ್ತು. ಆ ಕಾರ್ಯವನ್ನು ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಮಾಡಿದೆ. ಇದು ಅತ್ಯಂತ ಶ್ಲಾಘನೀಯವಾದ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಕಾಗದ ಕಾರ್ಖಾನೆಯ ಈ ಅಭಿನಂದನೀಯ ಕಾರ್ಯವನ್ನು ಶಿಕ್ಷಣ ಇಲಾಖೆ ಸದಾ ಗೌರವಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೆನರಾ ವೆಲ್ಫೇರ್ ಟ್ರಸ್ಟಿನ ಟ್ರಸ್ಟಿ ವಿ.ಎನ್.ನಾಯಕ, ಕೆನರಾ ವೆಲ್ಫೇರ್ ಟ್ರಸ್ಟಿನ ಈ ಶೈಕ್ಷಣಿಕ ಸಂಸ್ಥೆಗೆ ದಾಂಡೇಲಿ ಜನತೆ ನೀಡುತ್ತಿರುವ ಸಹಕಾರ ಸ್ಮರಣೀಯ. ಸಂಸ್ಥೆಯು ಸಾಧ್ಯವಾದಷ್ಟು ರೀತಿಯಲ್ಲಿ ಈ ಭಾಗದಲ್ಲಿ ಶೈಕ್ಷಣಿಕ ಸೇವೆಯನ್ನು ಸಲ್ಲಿಸಲು ಅತ್ಯಂತ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತದೆ ಎಂದರು.ಕೆನರಾ ವೆಲ್ಫೇರ್ ಟ್ರಸ್ಟಿನ ಟ್ರಸ್ಟಿ ಡಾ.ಕೃಷ್ಣ ಪ್ರಭು ಮತ್ತು ಟ್ರಸ್ಟಿನ ಆಡಳಿತಾಧಿಕಾರಿ ರವೀಂದ್ರ ಕಿಣಿ ಸಂದರ್ಭೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೆನರಾ ವೆಲ್ಫೇರ್ ಟ್ರಸ್ಟಿನ ಅಧ್ಯಕ್ಷರು ಹಾಗೂ ಹಿರಿಯ ನ್ಯಾಯವಾದಿಗಳಾಗಿರುವ ಎಸ್.ಪಿ.ಕಾಮತ್ ನಮ್ಮ ಸಂಸ್ಥೆಯ ಮನವಿಗೆ ಸಕಾಲಿಕವಾಗಿ ಸ್ಪಂದಿಸಿ ಭೋಜನಾಲಯದ ಕಟ್ಟಡವನ್ನು ತ್ವರಿತಗತಿಯಲ್ಲಿ ನಿರ್ಮಿಸಿಕೊಟ್ಟ ವೆಸ್ಟ್‌ಕೋಸ್ಟ್ ಕಾಗದ ಕಾರ್ಖಾನೆಯ ಶೈಕ್ಷಣಿಕ ಬದ್ಧತೆ ಅಭಿನಂದನೀಯ. ಒಂದು ಶೈಕ್ಷಣಿಕ ಸಂಸ್ಥೆಯ ಪ್ರಗತಿ ಸಂಸ್ಥೆಯಿಂದ ಮಾತ್ರ ಸಾಧ್ಯವಾಗದು. ಸಂಸ್ಥೆಯ ವಿದ್ಯಾರ್ಥಿಗಳ ಪಾಲಕರ, ಊರ ನಾಗರಿಕರ, ಸಂಘ ಸಂಸ್ಥೆಗಳ ಸಹಕಾರದ ಜೊತೆಗೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯಂತಹ ಪ್ರತಿಷ್ಠಿತ ಕಾರ್ಖಾನೆಗಳ ಸಹಕಾರ ಅಭಯ ಅತೀ ಮುಖ್ಯವಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ನೀಡುವ ಕೊಡುಗೆ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗಬಲ್ಲದು. ಒಂದು ಊರಿನ ಅಭಿವೃದ್ಧಿಯಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಎಷ್ಟು ಮುಖ್ಯವೋ, ಅದೇ ರೀತಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಆ ಊರಿನ ಸಹಕಾರವು ಅತಿ ಮುಖ್ಯ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಸಂಸ್ಥೆಯ ಪ್ರಗತಿಗೆ ದಾಂಡೇಲಿಯ ಜನತೆ ನೀಡಿದ ಪ್ರೋತ್ಸಾಹ, ಸಹಕಾರ ಸದಾ ಸ್ಮರಣೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಭೋಜನಾಲಯವನ್ನು ನಿರ್ಮಿಸಿ ಕೊಟ್ಟಿರುವ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಪರವಾಗಿ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ತಿವಾರಿ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಇ.ಎಂ.ಎಸ್ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ನಗರಸಭೆಯ ಸದಸ್ಯರಾದ ರೋಶನಜಿತ್, ನಗರಸಭೆಯ ಸದಸ್ಯರಾದ ಪದ್ಮಜಾ ಪ್ರವೀಣ್ ಜನ್ನು, ಜೆವಿಡಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಉದ್ಯಮಿ ನವೀನ್ ಕಾಮತ್ ಉಪಸ್ಥಿತರಿದ್ದರು. ಇಎಂಎಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯನಿ ಸಕ್ಕುಬಾಯಿ ಸ್ವಾಗತಿಸಿದರು. ವಿದ್ಯಾರ್ಥಿನಿ ಬೃಂದಾ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕಿ ಅರ್ಚನಾ ಪೆರ್ನಾಂಡಿಸ್ ವಂದಿಸಿದರು. ಶಿಕ್ಷಕಿ ಚಂದ್ರಕಲಾ ರಾಯ್ಕರ್ ನಿರೂಪಿಸಿದರು.