ಕಾರವಾರ: ಪಹಣಿಪತ್ರ ಕಲಂ 9 ರಲ್ಲಿ ಸರ್ಕಾರದ ಹಕ್ಕು ಕಡಿಮೆ ಮಾಡಿ, ವಾರಸುದಾರರನ್ನಾಗಿ ಸೇರಿಸಿ ನಮೂನೆ 10 ಹಕ್ಕು ಪತ್ರ ವಿತರಿಸಲು ಲಂಚ ಪಡೆದಿದ್ದ ಅಂಕೋಲಾ ತಹಶೀಲ್ದಾರ ಕಚೇರಿಯ ಪ್ರಥಮ ದರ್ಜೆ ಸಹಾಯಕನಿಗೆ ಭ್ರಷ್ಠಾಚಾರ ಪ್ರತಿಬಂಧಕ ಕಾಯ್ದೆ -1988 ರ ಕ ಲಂ 7, ರಡಿ 1 ವರ್ಷಗಳ ಕಠಿಣ ಕಾರಾಗೃಹ ವಾಸ ಶಿಕ್ಷೆ ಹಾಗೂ ರೂ. 5000 ದಂಡ ಹಾಗೂ ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 6 ತಿಂಗಳ ಕಾರಾವಾಸ ಶಿಕ್ಷೆ. ಕಲಂ13(1)(ಡಿ)ಸಹಿತ 13(2) ರಡಿಯಲ್ಲಿ 2 ವರ್ಷಗಳ ಕಠಿಣ ಕಾರಾಗೃಹ ವಾಸ ಶಿಕ್ಷೆ ಹಾಗೂ ರೂ 10000 ದಂಡ ವಿಧಿಸಿ ಹಾಗೂ ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 1 ವರ್ಷ ಕಾರಾವಾಸ ಶಿಕ್ಷೆ ವಿಧಿಸಿ, ವಿಶೇಷ ಮತ್ತು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಡಿ.ಎಸ್.ವಿಜಯ ಕುಮಾರ್ ತೀರ್ಪು ನೀಡಿದ್ದಾರೆ.
ಪ್ರಕರಣ ಹಿನ್ನಲೆ: ಅಂಕೋಲಾ ತಹಶೀಲ್ದಾರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಶಬ್ಬೀರ್ ಖಾಸಿಮ್ ಶೇಖ ಇವರು, ಅಂಕೋಲಾ ತಾಲೂಕಿನ ಬೊಬ್ರುವಾಡ ಗಣೇಶ ಸೀತಾರಾಮ ನಾಯ್ಕ ಅವರ ಸರ್ವೆ ನಂಬರ್: 28/1, 289/3, 179/4 ಮತ್ತು 179/2 ರ ಪಹಣಿ ಪತ್ರ ಕಲಂ 9 ರಲ್ಲಿ ಕರ್ನಾಟಕ ಸರ್ಕಾರದ ಹಕ್ಕು ಕಡಿಮೆ ಮಾಡಿ ಅವರ ತಾಯಿ ಶಾರದಾ ಸೀತಾರಾಮ ನಾಯ್ಕ ಅವರನ್ನು ವಾರಸುದಾರರನ್ನಾಗಿ ಸೇರಿಸಿ ನಮೂನೆ 10 ಹಕ್ಕು ಪತ್ರ ವಿತರಿಸಲು 2500 ಲಂಚದ ಹಣಕ್ಕೆ ಬೇಡಿಕೆ ಇಟ್ಟು ನಂತರದಲ್ಲಿ 1500 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, 1500 ಲಂಚ ಪಡೆಯುವಾಗ ಟ್ರಾಪ್ ಕಾರ್ಯಚರಣೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ. ಆಪಾದಿತ ನೌಕರರ ವಿರುದ್ದ ವಿಶೇಷ ಮತ್ತು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ, ಉತ್ತರ ಕನ್ನಡದಲ್ಲಿ ದೋಷಾರೋಪಣ ಪತ್ರ ಸಲ್ಲಿಕೆಯಾಗಿ, ವಿಚಾರಣೆ ನಡೆಸಲಾಗಿತ್ತು.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಆಭಿಯೋಜಕ ಲಕ್ಷ್ಮಿಕಾಂತ ಎಮ್ ಪ್ರಭು ವಾದ ಮಂಡಿಸಿರುತ್ತಾರೆ ಎಂದು ಕಾರವಾರ ಲೋಕಾಯಕುತ ಎಸ್ಪಿ ಕುಮಾರ ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.