ಗೋಕರ್ಣ : ದಕ್ಷಿಣದ ಕಾಶಿ ಎಂದೆ ಖ್ಯಾತಿಯಾಗಿರುವ ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಮಹಾ ಶಿವರಾತ್ರಿಯ ನಿಮಿತ್ತ ಸೋಮವಾರ ದೊಡ್ಡ ರಥೋತ್ಸವ ನಡೆಯಿತು.
ಈ ರಥೋತ್ಸವದಲ್ಲಿ ನಾಡಿನ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ವರ್ಷಕ್ಕೊಮ್ಮೆ ನಡೆಯುವ ಈ ರಥೋತ್ಸವವನ್ನು ವೀಕ್ಷಿಸುವುದಕ್ಕಾಗಿ ಲಕ್ಷಾಂತರ ಜನರು ರಸ್ತೆಯುದ್ದಕ್ಕೂ ಜನರ ದಟ್ಟಣೆ ಉಂಟಾಯಿತು.
ದೇವಸ್ಥಾನದ ಆಡಳಿತ ಮಂಡಳಿಯವರು, ಪೊಲೀಸ್ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿಯವರು ರಥೋತ್ಸವ ಸರಾಗವಾಗಿ ನಡೆಯುವಂತೆ ಸುವ್ಯವಸ್ಥೆಯನ್ನು ಕೈಗೊಂಡಿದ್ದರು. ಕೋಟಿತೀರ್ಥ ಹಾಗೂ ಪ್ರಮುಖ ಕಡಲು ತೀರಗಳಲ್ಲಿ ಜಾಗೃತಿಯ ಮಾಹಿತಿ ಫಲಕವನ್ನು ಹಾಕುವುದರ ಜತೆಗೆ, ಧ್ವನಿವರ್ಧಕಗಳನ್ನು ಕೂಡ ಅಳವಡಿಸಿ ಇಲ್ಲಿಯ ಅಪಾಯದ ಬಗ್ಗೆ ಸೂಚನೆಗಳನ್ನು ನೀಡುತ್ತಿದ್ದರು. ನೆರೆದ ಭಕ್ತರು ತಮ್ಮ ಇಷ್ಟಗಳನ್ನು ಬಯಸಿ, ಅದನ್ನು ಪೂರೈಸುವಂತೆ ದೇವರಲ್ಲಿ ಪ್ರಾರ್ಥಿಸಿ ಬಾಳೆಹಣ್ಣು ಹಾಗೂ ಕಡಲೆಗಳನ್ನು ರಥಕ್ಕೆ ಎಸೆಯುವ ಮೂಲಕ ಧನ್ಯತೆ ಮೆರೆದರು.