ಶಿರಸಿ: ಬಿಜೆಪಿ ಶಿರಸಿ ನಗರ ಮಂಡಲದ ವತಿಯಿಂದ ನಗರದ ಪಂಡಿತ ದೀನದಯಾಳ ಭವನದಲ್ಲಿ ಗಣಹವನ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಈ ಹಿಂದೆ ಸಂಘಟನೆಯ ಕೆಲಸ ಮಾಡಿದ ಶಿರಸಿ ನಗರ ಮಂಡಲದ ಎಲ್ಲಾ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಈ ಬಾರಿಯ ಬಿಜೆಪಿ ಗೆಲುವು ಐತಿಹಾಸಿಕವಾಗಲಿದೆ. ಮೋದಿ ಜಿ ಪುನಃ ಗೆದ್ದು ಸರ್ಕಾರ ರಚನೆ ಮಾಡಬೇಕು ಎನ್ನುವುದು ದೇಶವಾಸಿಗಳ ಒತ್ತಾಸೆಯಾಗಿದೆ ಎಂದರು. ಒಂದು ಉತ್ತಮ ನಾಯಕತ್ವ ಸಿಕ್ಕಾಗ, ಸಂಘಟನೆಯ ಕೆಲಸ ಮಾಡುವ ಕಾರ್ಯಕರ್ತರಲ್ಲಿ ಹೆಚ್ಚಿನ ಉತ್ಸಾಹ ಸಹಜವಾಗಿ ಮೂಡುತ್ತದೆ. ಅಂತಹ ಸುವರ್ಣಕಾಲದಲ್ಲಿ ನಾವಿದ್ದೇವೆ ಎಂದರು.
ಅಸಂಖ್ಯ ಭಾರತೀಯರ ರಾಮ ಮಂದಿರದ ಕನಸು ಇವತ್ತು ನನಸಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ ಆರ್ಟಿಕಲ್ 370 ರದ್ದತಿ ಮಾಡಿ 370ರ ಗುರಿಯೊಂದಿಗೆ ಚುನಾವಣೆಗೆ ಹೋಗುತ್ತಿದೆ. ಎನ್.ಡಿ.ಎ ಒಟ್ಟಾಗಿ ನಾನೂರು ಕ್ಷೇತ್ರಗಳನ್ನೂ ಮೀರಿ ಗೆಲ್ಲುವ ಗುರಿ ಹೊಂದಿದೆ ಎಂದರು. ನಮ್ಮ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿಯೂ ಕಳೆದ ಬಾರಿಗಿಂತ ಹೆಚ್ಚಿನ ಲೀಡ್ ಗಳಿಸಲಿಕ್ಕೆ ಕಾರ್ಯಕರ್ತರು ಶ್ರಮವಹಿಸಿ ದುಡಿಯೋಣ ಎಂದರು.
ಜನಸಂಘದ ದೀಪವಿಂದು ಬಿಜೆಪಿಯ ಕಮಲವಾಗಿ ಅರಳಿದೆ. ಈ ಹಿಂದೆ ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿದ ಪಾರ್ಟಿಯ ಹಿರಿಯರಿಗೆ ಸನ್ಮಾನ ಮಾಡುವ ಮೂಲಕ ನಾವು ನಡೆದುಬಂದ ದಾರಿಯನ್ನು ನೆನಪಿಸಿಕೊಳ್ಳುವ ಅವಕಾಶವನ್ನು ಈ ಕಾರ್ಯಕ್ರಮ ಒದಗಿಸಿ ಕೊಟ್ಟಿದೆ ಎಂದರು ಹಾಗೂ ನಗರ ಮಂಡಲದ ಪದಾಧಿಕಾರಿಗಳನ್ನು ಅಭಿನಂದಿಸಿದರು.
ನಗರ ಮಂಡಲ ಅಧ್ಯಕ್ಷರಾದ ಆನಂದ ಸಾಲೇರ ಮಾತನಾಡಿ ಹಿರಿಯ ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಇಂದು ಸಂಘಟನಾತ್ಮಕವಾಗಿ ಬಲವರ್ಧನೆ ಹೊಂದಿದೆ, ಅವರನ್ನು ಸ್ಮರಿಸಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ನಾವು ಒಂದಾಗಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸೋಣ ಎಂದು ಕರೆ ಕೊಟ್ಟರು.
ಈ ಸಂದರ್ಭದಲ್ಲಿ ದಿ. ಜಿ ಎಂ ನಾಯ್ಕ ಅವರ ಮಗ ಎಂ ಜಿ ನಾಯ್ಕ, ದಿ. ವಿನೋದ ಮಡಗಾಂವ್ಕರ ಅವರ ಪತ್ನಿ ವಿಜಯಲಕ್ಷ್ಮಿ, ಮಾಜಿ ಶಾಸಕರಾದ ವಿವೇಕಾನಂದ ವೈದ್ಯ, ಶಶಿಕಾಂತ ಪಂಡಿತ, ಶ್ರೀಕಾಂತ ನಾಯ್ಕ, ನಂದನ ಸಾಗರ, ಗಣಪತಿ ನಾಯ್ಕ ಮತ್ತು ರಾಜೇಶ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ನಗರ ಮಂಡಲದ ಪ್ರದಾನ ಕಾರ್ಯದರ್ಶಿ ನಾಗರಾಜ ನಾಯ್ಕ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಸನ್ಮಾನಿತರಾದ ಮಾಜಿ ಶಾಸಕರಾದ ವಿವೇಕಾನಂದ ವೈದ್ಯ ಹಾಗೂ ಗಣಪತಿ ನಾಯ್ಕ ತಮ್ಮ ಅನಿಸಿಕೆ ಹಂಚಿಕೊಂಡರು. ಮಾಜಿ ವಿಧಾನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದರಾದ ಅನಂತಕುಮಾರ ಹೆಗಡೆ, ಜಿಲ್ಲಾಧ್ಯಕ್ಷರಾದ ಎನ್.ಎಸ್. ಹೆಗಡೆ ಶುಭ ಹಾರೈಸಿದ್ದಾರೆ.
ಜಿಲ್ಲಾ ಕಾರ್ಯದರ್ಶಿ ಶರ್ಮಿಳಾ ಮಾದನಗೇರಿ ಮತ್ತು ಜಿಲ್ಲಾ ಖಜಾಂಚಿ ರಮಾಕಾಂತ್ ಭಟ್, ಎಸ್ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಶ್ರೀಕಾಂತ ಬಳ್ಳಾರಿ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಕುಮಾರ ಬೋರ್ಕರ್, ಗ್ರಾಮೀಣ ಅಧ್ಯಕ್ಷರಾದ ಉಷಾ ಹೆಗಡೆ ಅವರು ಉಪಸ್ಥಿತರಿದ್ಧರು. ಪ್ರಧಾನ ಕಾರ್ಯದರ್ಶಿ ಮಹಾಂತೇಶ ಹಾದಿಮನೆ ಕಾರ್ಯಕ್ರಮ ನಿರ್ವಹಿಸಿದರು.