ಭಟ್ಕಳ: ಇಲ್ಲಿಯ ತೆಂಗಿನಗುಂಡಿ ಬೀಚ್ ಬಳಿಯ ಹನುಮ ಧ್ವಜ ಹಾಗೂ ಸಾವರ್ಕರ್ ನಾಮಫಲಕ ತೆರವು ಮಾಡಿರುವುದನ್ನು ರಾಜ್ಯ ಬಿಜೆಪಿ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ ವೀರ ಸಾವರ್ಕರ್ ಹೆಸರಿನಲ್ಲಿ ಒಂದು ಕಟ್ಟೆ ಕಟ್ಟಿದರೂ ವಿರೋಧ, ನಮ್ಮ ನೆಲದಲ್ಲಿ ನಾವು ಪೂಜಿಸುವ ಈ ನೆಲದ ಆರಾಧ್ಯ ದೇವರುಗಳ ಧ್ವಜ ಹಾರಿಸಿದರೂ ವಿರೋಧ ಮಾಡುತ್ತ ಪ್ರಕರಣ ದಾಖಲಿಸುವ ಮಾನಸಿಕತೆಯ ವಿರುದ್ಧ ಹಿಂದೂಗಳು ಧ್ವನಿ ಎತ್ತಬೇಕಾಗಿದೆ. ‘ಧಾರ್ಮಿಕ ಭಾವನೆಗೆ ಧಕ್ಕೆ, ಗಲಭೆಗೆ ಪ್ರಚೋದನೆ’ ಎನ್ನುವ ಕಾರಣ ನೀಡಿ ಬಿಜೆಪಿ ಸಂಸದರೂ ಸೇರಿದಂತೆ 20ಕ್ಕೂ ಹೆಚ್ಚು ಪ್ರಮುಖರು,ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿರುವ ಪೊಲೀಸರು ಹನುಮ ಧ್ವಜದಿಂದ ಗಲಭೆಗೆ ಪ್ರಚೋದನೆ ಆಗುವುದಾದರೂ ಹೇಗೆ? ಅಥವಾ ಧ್ವಜ ನೋಡಿ ಪ್ರಚೋದನೆಗೆ ಒಳಗಾಗಿ ಗಲಭೆ ಎಬ್ಬಿಸುವವರಾರು? ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು’ ಎಂದಿದ್ದಾರೆ.
ಧಾರ್ಮಿಕ ಭಾವನೆಗೆ ಧಕ್ಕೆ ಎನ್ನುವುದನ್ನು ಒಂದೇ ಧರ್ಮಕ್ಕೆ ಸೀಮಿತವಾಗಿ ಬಳಸುವ ಸರ್ಕಾರ ಮತ್ತು ಅಧಿಕಾರಿಗಳು ‘ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಪಡಿಸಿದ್ದಾರೆ’ ಎಂದು ಯಾರನ್ನಾದರೂ ಬಂಧಿಸಿದ್ದು ಇದೆಯೇ? ಹಾಗಿಲ್ಲದಿರುವಾಗ ಹನುಮ ಧ್ವಜ ಹಾರಿಸಿದ್ದಕ್ಕಾಗಿ ಪ್ರಕರಣ ದಾಖಲಿಸುವ ಈ ಬೆಳವಣಿಗೆ ಖಂಡನೀಯ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಡುವುದಾದರೆ ಕೂಡಲೇ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರ ಮೇಲಿನ ಈ ಪ್ರಕರಣಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಹಾಗೂ ತೆರವುಗೊಳಿಸಿರುವ ಸಾವರ್ಕರ್ ಕಟ್ಟೆ, ಹನುಮ ಧ್ವಜವನ್ನು ಪುನಃ ಸ್ಥಾಪಿಸಲು ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.