ಶಿರಸಿ: ನಗರದ ಯೋಗಮಂದಿರ ಸಭಾಭವನದಲ್ಲಿ ಸ್ಥಳೀಯ ರಾಗಮಿತ್ರ ಪ್ರತಿಷ್ಠಾನ ಪ್ರತಿ ತಿಂಗಳ ಮೊದಲ ಸೋಮವಾರದಂದು ಏರ್ಪಡಿಸುತ್ತಿರುವ ಸಾಧನೆಯ ಕಲಾವಿದರ ಸನ್ಮಾನ ಹಾಗೂ ಸಂಗೀತ ಕಾರ್ಯಕ್ರಮ ಜನಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಚಿತ್ರಕಲೆ ಹಾಗೂ ಗಾಯನ ಕ್ಷೇತ್ರದಲ್ಲಿ ಕೀರ್ತಿಗಳಿಸಿದ ರೇಖಾ ಸತೀಶ ಭಟ್ಟ ನಾಡಗುಳಿ ಮತ್ತು ಗಾಯಕ ವಿದ್ವಾನ್ ಶ್ರೀಧರ ಹೆಗಡೆ ದಾಸನಕೊಪ್ಪ ಅವರಿಗೆ ಶಾಲು, ಸ್ಮರಣಿಕೆ ಫಲ ತಾಂಬೂಲದೊಂದಿಗೆ ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮ ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಯಡಳ್ಳಿ ಮಾ.ಶಿ.ಪ್ರ ಸಮಿತಿಯ ನಿರ್ದೇಶಕ ಹಾಗೂ ಸಮಾಜ ಸೇವಕ ದತ್ತಾತ್ರೇಯ ವಿಶ್ವೇಶ್ವರ ಹೆಗಡೆ ಕಾನಗೋಡ, ಸನ್ಮಾನ ಕಾರ್ಯಕ್ರಮ ನೆರವೇರಿಸಿ, ಮಾತನಾಡುತ್ತ, ಸಾಧನೆಯ ಕಲಾವಿದರನ್ನು ಗುರುತಿಸಿ, ಸನ್ಮಾನಿಸುವುದು ಯುವ ಪೀಳಿಗೆಗೆ ಆದರ್ಶ ಪ್ರಾಯವಾಗಿದ್ದು, ಶಾಸ್ತ್ರೀಯ ಸಂಗೀತಾಭ್ಯಾಸ ಜೀವನದ ಸಾಧನೆಗೆ ಹೆಚ್ಚಿನ ಪ್ರಯೋಜನಕಾರಿಯಾಗುತ್ತದೆ ಎಂದರು.
ಅತಿಥಿಗಳಾಗಿದ್ದ ನಿವೃತ್ತ ಇಂಜೀನಿಯರ್ ಎಂ.ಎನ್.ಹೆಗಡೆ ಮಾಳೇನಳ್ಳಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಸಂಗೀತಾಭಿಮಾನಿ ಆರ್.ಎನ್.ಭಟ್ಟ ಸುಗಾವಿ ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಗಾಯಕಿ, ಚಿತ್ರಕಲಾವಿದೆ ರೇಖಾ ಸತೀಶ ಭಟ್ಟ ಮಾತನಾಡಿ, ನಮಗರಿವಿಲ್ಲದೇ ನಮ್ಮಲ್ಲಿಯ ಕಲೆ ಪ್ರತಿಭೆ ಗುರುತಿಸಿ, ಗೌರವಿಸಿದಾಗ ಮನಸ್ಸಿಗೆ ಬಹಳ ಸಂತೋಷ ಉಂಟಾಗುತ್ತದೆ. ಪ್ರಶಸ್ತಿಗಾಗಿ ಬೆನ್ನು ಬೀಳದೇ ನಮ್ಮ ಸಾಧನೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದರೆ ಗೌರವ ಪುರಸ್ಕಾರಗಳು ತಾವಾಗಿಯೇ ಬರುತ್ತವೆ. ಹಾಗೇ ಸಮಾಜ ನಮ್ಮನ್ನು ಕಲೆಯನ್ನು ಗುರುತಿಸುತ್ತದೆ ಎನ್ನುತ್ತ ಕೃತಜ್ಞತೆ ತಿಳಿಸಿದರು.
ತಿಂಗಳಿನ ಗುರು ಅರ್ಪಣೆ ಸಂಗೀತ ಮೊದಲ ಹಂತವಾಗಿ ರಾಗಮಿತ್ರ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಭಕ್ತಿ ಸಂಗೀತ ನಡೆಯಿತು. ನಂತರದಲ್ಲಿ ಯುವ ಪ್ರತಿಭೆ ಧನ್ಯಾ ಹೆಗಡೆ ಕಿಬ್ಬಳ್ಳಿ ಅವರಿಂದ ನಡೆದ ಗಾಯನ ಸಂಗೀತಾಭಿಮಾನಿಗಳಿಗೆ ಮುದ ನೀಡಿದ್ದು, ಮುಂದಿನ ದಿನದಲ್ಲಿ ಭರವಸೆಯ ಗಾಯಕಿ ಎಂಬ ಉದ್ಗಾರಕ್ಕೆ ಭಾಜನರಾದಳು. ಧನ್ಯಾರವರು ರಾಗ್ ಮಾರೋ ಬಿಹಾಗ್ ನಲ್ಲಿ ವಿಸ್ತಾರವಾಗಿ ಹಾಡಿ ನಂತರ ತಾವೇ ರಚಿಸಿ, ಸಂಯೋಜಿಸಿದ ಭಕ್ತಿ ಪ್ರಧಾನ ಹಾಡನ್ನು ಪ್ರಸ್ತುತಗೊಳಿಸಿದರು. ತಬಲಾದಲ್ಲಿ ವಿಜಯೇಂದ್ರ ಹೆಗಡೆ ಅಜ್ಜೀಬಳ, ಹಾರ್ಮೋನಿಯಂನಲ್ಲಿ ಉನ್ನತಿ ಕಾಮತ್ ಸಹಕರಿಸಿದರು.
ನಂತರ ನಡೆದ ಗಾಯನದಲ್ಲಿ ವಿದ್ವಾನ್ ಶ್ರೀಧರ ಹೆಗಡೆ ದಾಸನಕೊಪ್ಪ ತಮ್ಮ ಸಂಗೀಯಕಛೇರಿ ನಡೆಸಿಕೊಡುತ್ತ ರಾಗ್ ಪೂರಿಯಾ ಧನಶ್ರೀಯಲ್ಲಿ ವಿಸ್ತಾರವಾಗಿ ಹಾಡಿದರು. ನಂತರ ರಾಗ್ ಶಂಕರದಲ್ಲಿ ಸ್ವಾಮಿ ವಿವೇಕಾನಂದರು ರಚಿಸಿದ ಹರ ಹರ ಭೂತನಾಥ ಕೃತಿಯನ್ನು ಸೊಗಸಾಗಿ ಹಾಡುತ್ತ ದಾಸರಪದ ಮತ್ತು ಭಜನ್ ಹಾಡಿ ರಾಗ್ ಭೈರವಿಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳಿಸಿದರು. ದಾಸನಕೊಪ್ಪರವರ ಗಾಯನಕ್ಕೆ ಹಾರ್ಮೋನಿಯಂ ನಲ್ಲಿ ವಿದ್ವಾನ್ ಪ್ರಕಾಶ ಹೆಗಡೆ, ತಬಲಾದಲ್ಲಿ ಶಂಕರ ಹೆಗಡೆ ಹಿರೇಮಕ್ಕಿ ಮತ್ತು ಹಿನ್ನೆಲೆಯ ಸಹಗಾನ ಹಾಗೂ ತಾನ್ಪುರದಲ್ಲಿ ಧನ್ಯಾ ಹೆಗಡೆ, ಸಂದೇಶ ಹೆಗಡೆ ತಾಳದಲ್ಲಿ ಅನಂತಮೂರ್ತಿ ಸಾಥ್ ನೀಡಿದರು.
ಕಾರ್ಯಕ್ರಮ ಸಂಘಟಕ ವಿದ್ವಾನ ಪ್ರಕಾಶ ಹೆಗಡೆ ಯಡಳ್ಳಿ ಸ್ವಾಗತಿಸಿದರು. ಗಿರಿಧರ ಕಬ್ನಳ್ಳಿ ನಿರೂಪಿಸಿ, ವಂದಿಸಿದರು.