ಶಿರಸಿ: ಉತ್ತರ ಕರ್ನಾಟಕದಲ್ಲಿಯೇ ಪ್ರಪ್ರಥಮ ಬಾರಿಗೆ ಶಿರಸಿಯ ಯಲ್ಲಾಪುರ ನಾಕಾ ಸಮೀಪದಲ್ಲಿರುವ ಗಾಣಿಗರ ಸಮುದಾಯ ಭವನದಲ್ಲಿ, ಮಾರ್ಚ್ 1, 2 ಮತ್ತು 3ರಂದು ಸಂಘಟಿಸಲಾಗಿದ್ದ ರಾಜ್ಯ ಮಟ್ಟದ ರ‍್ಯಾಂಕಿಂಗ್ ಕೇರಂ – 2024 ಅತ್ಯಂತ ಯಶಸ್ವಿಯಾಗಿ ಜರುಗಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಕರ್ನಾಟಕ ರಾಜ್ಯ ಕೇರಂ ಸಂಸ್ಥೆಯಿಂದ ಮಾನ್ಯತೆ ಪಡೆದ ಶಿರಸಿಯ ಸ್ಪೂರ್ತಿ ಕೇರಂ ಅಸೋಸಿಯೇಷನ್ ಆಶ್ರಯದಲ್ಲಿ, ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ಪೂರಕವಾಗಿ ರಾಷ್ಟ್ರೀಯ ನಿಯಮಾನುಸಾರ ಏರ್ಪಡಿಸಲಾದ ಈ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಅಖಿಲಭಾರತ ಕೇರಂ ಮಹಾಮಂಡಳಿಯ ದಕ್ಷಿಣ ವಲಯ ಕಾರ್ಯದರ್ಶಿ ಮೊಹಮ್ಮದ್ ಅಸದುಲ್ಲಾ ಖಾನ್ ಅನ್ಸಾರಿ ಉದ್ಘಾಟಕರಾಗಿಯೂ , ಸ್ಕೊಡ್ವೇಸ್ ಪ್ರಮುಖ ವೆಂಕಟೇಶ ನಾಯ್ಕ್, ಸರೋಜ ಫಾರ್ಮಾದ ಹಸ್ತಿಮಲ್ ಚೌಧರಿ, ರಾಜ್ಯ ಕೇರಂ ಸಂಘದ ಎಚ್. ಶಿವಾಜಿರಾವ್ ಮತ್ತು ವೈಕುಂಠವಾಸನ್, ರಾಷ್ಟ್ರಮಟ್ಟದ ಕೇರಂ ನಿರ್ಣಾಯಕ ಹಾಗೂ ನಿವೃತ್ತ ಇಸ್ರೋ ಅಧಿಕಾರಿ ನಿರ್ಮಲಕುಮಾರ್ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಉ.ಕ. ಜಿಲ್ಲಾ ಕೇರಂ(ಥಂಬ್) ಸಂಘದ ಸಂಸ್ಥಾಪಕ ಅಧ್ಯಕ್ಷ ರವಿ ಹೆಗಡೆ ಗಡಿಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರಮಟ್ಟದ ಕೇರಂ ನಿರ್ಣಾಯಕರೂ, ತರಬೇತುದಾರರೂ ಆದ ಚಂದ್ರು ಭಟ್ಟ ಉಪಸ್ಥಿತರಿದ್ದರು.
ಪುರುಷರಿಗೆ, ಹಿರಿಯರಿಗೆ, ಮಹಿಳೆಯರಿಗೆ, 18 ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಿದ್ದು ವಿಜೇತರಾದವರಿಗೆ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೊಫಿಗಳನ್ನು ಹೈನುಗಾರಿಕೆಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ರಾಜೇಶ್ವರಿ ಹೆಗಡೆ ಹಾಗೂ ಹಿರಿಯ ಕೇರಂ ಆಟಗಾರ ಆರ್.ಡಿ. ಹೆಗಡೆ ಮತ್ತೀಹಳ್ಳಿ ವಿತರಿಸಿದರು. ಚಂದ್ರು ಭಟ್ ಮತ್ತು ರೋಹಿತ್ ಕುಡಾಳ್ಕರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಾಜಿ ವಿಶ್ವ ಕೇರಂ ಚಾಂಪಿಯನ್ ಶಂಕರ, ರಾಷ್ಟ್ರೀಯ ಚಾಂಪಿಯನ್ ಶೈನಿ ಮತ್ತು ಕೇರಂ ಸಾಧಕಿ ಶಿಕ್ಷಕಿ ಶಾಲಿನಿ ಭಟ್ ಇವರನ್ನು ಸನ್ಮಾನಿಸಲಾಯಿತು.
ಬಹುಮಾನಿತರ ಯಾದಿ ಇಂತಿದೆ :
ಪುರುಷರ ಸಿಂಗಲ್ಸ್‌ನಲ್ಲಿ ಬೆಂಗಳೂರಿನ ಆರ್.ಎಮ್. ಶಂಕರ – ಪ್ರಥಮ, ಅರುಣಕುಮಾರ ಬೆಂಗಳೂರು – ದ್ವಿತೀಯ ಮತ್ತು ಭದ್ರಾವತಿಯ ದಿವಾಕರ ತೃತೀಯ.
ಹಿರಿಯರ ಸಿಂಗಲ್ಸ್‌ನಲ್ಲಿ ಬೆಂಗಳೂರಿನ ಮುಕ್ತಿಯಾರ್ ಅಹಮದ್ – ಪ್ರಥಮ, ದಾವಣಗೆರೆಯ ಸೈಯದ್ ಸಿರಾಜುದ್ದೀನ್ – ದ್ವಿತೀಯ ಮತ್ತು ಶಿರಸಿಯ ತ್ರಿವಿಕ್ರಮ ಹೆಗಡೆ ತೃತೀಯ.
ಮಹಿಳೆಯರ ಸಿಂಗಲ್ಸ್‌ನಲ್ಲಿ ಬೆಂಗಳೂರಿನ ಶೈನಿ – ಪ್ರಥಮ, ಸ್ಟೆಲಿನಾ ಬೆಂಗಳೂರು – ದ್ವಿತೀಯ ಮತ್ತು ಶಿರಸಿಯ ಶಾಲಿನಿ ಭಟ್ ತೃತೀಯ.
ಹುಡುಗರ ಸಿಂಗಲ್ಸ್‌ನಲ್ಲಿ ಸಾಗರದ ಸುಧನ್ವ – ಪ್ರಥಮ, ಶಿರಸಿಯ ಮಹಮ್ಮದ್ ಆಸೀಫ್ ದ್ವಿತೀಯ ಮತ್ತು ಸಾತ್ವಿಕ್ ದೇವಾಡಿಗ, ಶಿರಸಿ – ತೃತೀಯ.
ಹುಡುಗಿಯರ ಸಿಂಗಲ್ಸ್‌ನಲ್ಲಿ ಶಿರಸಿಯ ಪ್ರಿಯಾ ಭಟ್ – ಪ್ರಥಮ, ಅಪೇಕ್ಷಾ ಭಂಡಾರಿ, ಶಿರಸಿ – ದ್ವಿತೀಯ ಮತ್ತು ಬೆಂಗಳೂರಿನ ಆದಿತ್ರಿ – ತೃತೀಯ.
ಸ್ಪರ್ಧೆಗೆ ಸಂಘಟಕರು ವಿಶೇಷವಾದ ಕಾಳಜಿಯಿಂದ ಮಾಡಿದ ಮಾದರಿ ವ್ಯವಸ್ಥೆ, ಊಟೋಪಚಾರ, ವಸತಿ ಮತ್ತು ಆತಿಥ್ಯದ ಬಗ್ಗೆ ಭಾಗವಹಿಸಿದ ನೂರೈವತ್ತಕ್ಕೂ ಹೆಚ್ಚು ಆಟಗಾರರು ಮತ್ತು ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು ಪ್ರಾಯೋಜಕ ಸಂಸ್ಥೆಗಳಿಗೆ ಹಾಗೂ ದಾನಿಗಳಿಗೆ ಸಂಘಟಕರು ಕೃತಜ್ಞತೆ ತಿಳಿಸಿದ್ದಾರೆ.