ಶಿರಸಿ: ನಾಟಕದಿಂದಲೇ ಮುಖ್ಯಮಂತ್ರಿ ಎಂದು ಹೆಸರು ಪಡೆದ ಹೆಸರಾಂತ ನಟ ಮುಖ್ಯಮಂತ್ರಿ ಚಂದ್ರು ಅವರ ಪ್ರಧಾನ ಭೂಮಿಕೆಯಲ್ಲಿನ ‘ಮುಖ್ಯಮಂತ್ರಿ’ ನಾಟಕ ಮಾರ್ಚ 16ರಂದು ಶಿರಸಿಯ ರಂಗಧಾಮದಲ್ಲಿ ನಡೆಯಲಿದೆ.
ನಗರದ ನೆಮ್ಮದಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿರಿಯ ರಂಗಕರ್ಮಿ, ನಿರ್ದೇಶಕ, ನಟ ಡಾ. ಬಿ.ವಿ.ರಾಜರಾಮ್ ಮಾಹಿತಿ ನೀಡಿ, ಅಂದು ಸಂಜೆ 7ಕ್ಕೆ ರಂಗಧಾಮದಲ್ಲಿ ಕಲಾಗಂಗೋತ್ರಿ ರಂಗ ತಂಡದ ಕಲಾವಿದರರು ಎರಡು ತಾಸಿನ ಮುಖ್ಯಮಂತ್ರಿ ನಾಟಕ ಪ್ರಸ್ತುತಗೊಳಿಸಲಿದ್ದಾರೆ ಎಂದರು. ಸುವರ್ಣ ಸಂಭ್ರಮ ಕಂಡ ಕಲಾ ಗಂಗೋತ್ರಿಗೆ ಈಗ 52ನೇ ವರ್ಷ ನಡೆಯುತ್ತಿದೆ. ನಮ್ಮ ಸಂಸ್ಥೆಯ ಪ್ರಮುಖ ಪ್ರದರ್ಶನಗಳಲ್ಲಿ ಒಂದಾದ ‘ಮುಖ್ಯಮಂತ್ರಿ’ ನಾಟಕ 1980ರಿಂದ ರಾಜ್ಯ, ಹೊರ ರಾಜ್ಯ, ಹೊರ ದೇಶದಲ್ಲೂ ಪ್ರದರ್ಶನ ನೀಡಲಾಗಿದೆ. 44 ವರ್ಷ ಈ ನಾಟಕಕ್ಕೆ ಆಗಿದೆ. ಪ್ರತಿ ವರ್ಷ 20, 25ಪ್ರದರ್ಶನ ಕಾಣುತ್ತಿದ್ದು, 824 ನೇ ನಾಟಕ ಪ್ರದರ್ಶನಕ್ಕೆ ಶಿರಸಿಯಲ್ಲಿ ಸಜ್ಜಾಗುತ್ತಿದ್ದೇವೆ ಎಂದರು.
ಮೂವತ್ತು ವರ್ಷದ ಹಿಂದೆ ಶಿರಸಿಯಲ್ಲಿ ಇದೇ ನಾಟಕ ಪ್ರದರ್ಶನ ಕಂಡಿತ್ತು. ಈಗ ಮತ್ತೊಮ್ಮೆ ಶಿರಸಿಯಲ್ಲಿ ಪ್ರದರ್ಶನ ಮಾಡಲಾಗುತ್ತಿದೆ ಎಂದ ರಾಜಾರಾಮ ಅವರು, ಮುಖ್ಯಮಂತ್ರಿ ನಾಟಕದಿಂದಲೇ ಚಂದ್ರು ಅವರು ಖಾಯಂ ಮುಖ್ಯಮಂತ್ರಿಗಳಾಗಿ ಪರಿಚಿತರಾಗಿದ್ದಾರೆ. 500ಕ್ಕೂ ಅಧಿಕ ಸಿನೇಮಾ, ಧಾರವಾಹಿ, ನಾಟಕದಲ್ಲೂ ನಿರಂತರವಾಗಿ ನಟರಾಗಿ ಚಂದ್ರು ಅವರು ನಾಡಿನಲ್ಲಿ ಮನೆ ಮಾತಾಗಿದ್ದಾರೆ ಎಂದರು. 44 ವರ್ಷದ ಹಿಂದೆ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾಕ್ಕೆ ರಚಿಸಿದ್ದ ಹಿಂದಿ ನಾಟಕವನ್ನು ಟಿ. ಎಸ್.ಲೋಹಿತಾಶ್ವ ಅನುವಾದ ಮಾಡಿದ್ದಾರೆ.
ಮೈಸೂರು ಮಲ್ಲಿಗೆ, ಮೂಕಜ್ಜಿ ಕನಸು ಸೇರಿದಂತೆ 3000ಕ್ಕೂ ಅಧಿಕ ನಾಟಕ ಪ್ರದರ್ಶನ ಸಂಸ್ಥೆ ನಡೆಸಿದೆ. ಅಮೇರಿಕಾ, ಸಿಂಗಾಪುರ, ಮಲೇಶಿಯಾ, ನ್ಯೂಜಿಲ್ಯಾಂಡ್ ಸೇರಿದಂತೆ ಹಲವೆಡೆ ಮುಖ್ಯಮಂತ್ರಿ ನಾಟಕ ಪ್ರದರ್ಶನ ಕಂಡಿದೆ. ಮುಖ್ಯಮಂತ್ರಿ ಚಂದ್ರು ಅವರು ಎಲ್ಲ ನಾಟಕದ ಪ್ರಧಾನ ಪಾತ್ರಧಾರಿಗಳು. ಮಂಜುನಾಥ ಹೆಗಡೆ, ಸಿದ್ದಾರ್ಥ ಭಟ್ಟ, ಡಾ. ಎಂ.ಎಸ್. ವಿದ್ಯಾ, ಕಲಾಗಂಗೋತ್ರಿ ಕಿಟ್ಟಿ ಸೇರಿದಂತೆ ಮೂವತ್ತಕ್ಕೂ ಅಧಿಕ ಕಲಾವಿದರು ಇಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಈವರೆಗೆ ಸುಮಾರು 500 ಹೆಚ್ಚು ಕಲಾವಿದರು ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಒಬ್ಬನೇ ನಟ 44 ವರ್ಷ ಒಂದೇ ಪಾತ್ರ ಮಾಡಿದ್ದು, ಗಿನ್ನಿಸ್ ರೆಕಾರ್ಡ ಆಗುವ ನಾಟಕ ಇದಾಗಿದೆ ಎಂದೂ ಹೇಳಿದರು.
ಶಿರಸಿಯ ಕಲಾಪ್ರೇಮಿಗಳ ಸಹಕಾರದಿಂದ
ಮಾ.16ರಂದು ನಾಟಕ ನಡೆಯಲಿದೆ. 100 ರೂ. ಕಾಣಿಕೆ ಇರಿಸಲಾಗಿದೆ. ನಾಟಕಗಳಿಗೆ ಕಲಾ ಕಾಣಿಕೆಗಳೇ ಆಧಾರವಾಗಿದೆ ಎಂದ ರಾಜಾರಾಮ, ನವಿರು ಹಾಸ್ಯ ವಿಡಂಬನಾತ್ಮಕವಾಗಿ ರಾಜಕೀಯ ನೋಡುವ ಕಾರ್ಯ ಇದಾಗಿದೆ. ನಾಟಕಕ್ಕೆ ಸಹಕಾರ ನೀಡಿದ ಚಿಂತನ ರಂಗ ಅಧ್ಯಯನ ಕೇಂದ್ರ, ಸ್ಕಾಡ್‌ವೇಸ್, ನೆಮ್ಮದಿ ಬಳಗ, ರಂಗಧಾಮ, ಸಾಮ್ರಾಟ್ ಹೋಟೆಲ್, ನಯನ ಫೌಂಡೇಶನ್ ದಲ್ಲಿ ಹಾಗೂ ಸ್ಥಳದಲ್ಲಿ ಕೂಡ ಟಿಕೆಟ್ ಸಿಗಲಿದೆ. ವಿವರಗಳಿಗೆ ಚಂದ್ರು ಉಡುಪಿ 9035774899ಗೆ ಸಂಪರ್ಕ ಮಾಡಬಹುದು
ಎಂದು ಹೇಳಿದರು.
ಈ ವೇಳೆ ಚಂದ್ರು ಉಡುಪಿ, ವೆಂಕಟೇಶ ನಾಯ್ಕ, ವೈಶಾಲಿ ವಿ.ಪಿ.ಹೆಗಡೆ, ಸತೀಶ ಹೆಗಡೆ ಗೋಳಿಕೊಪ್ಪ ಇದ್ದರು.