ಕುಮಟಾ; ತಾಲೂಕಿನ ಹಿರೇಗುತ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಎರಡು ವಿವೇಕ ಕೊಠಡಿಗಳನ್ನು ಶಾಸಕ ದಿನಕರ ಶೆಟ್ಟಿ ಶುಕ್ರವಾರ ಉದ್ಘಾಟಿಸಿದರು.
ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಿನಕರ ಶೆಟ್ಟಿ, ನನ್ನ ಕ್ಷೇತ್ರದಲ್ಲಿ ಶಿಕ್ಷಣ ಹಾಗೂ ಆರೋಗ್ಯ ರಂಗದ ಅಭಿವೃದ್ಧಿಯನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಿ ಕಾರ್ಯನಿರ್ವಹಿಸಿದ್ದೇನೆ. ಮನುಷ್ಯನ ಜೀವನ ಸುಗಮವಾಗಿ ಸಾಗಲು ಇವೆರಡೂ ಬಹುಮುಖ್ಯ. ಉಳಿದಂತೆ ಕುಡಿಯುವ ನೀರು ಪೂರೈಕೆ, ಉತ್ತಮ ರಸ್ತೆ-ಸೇತುವೆಗಳ ನಿರ್ಮಾಣಕ್ಕಾಗಿ ವಿಶೇಷ ಕಾಳಜಿ ವಹಿಸಿ ಕರ್ತವ್ಯ ಮಾಡಿದ್ದರ ಕುರಿತು ನನಗೆ ಹೆಮ್ಮೆಇದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಶಾಲಾಕಾಲೇಜುಗಳ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡಲಾಗಿತ್ತು. ಅದರಲ್ಲಿಯೂ ವಿವೇಕ ಶಾಲೆ ಎನ್ನುವುದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹಿರೇಗುತ್ತಿ ಶಾಲೆಯಲ್ಲಿ ಎರಡು ಹೊಸ ವರ್ಗಕೋಣೆಗಳ ನಿರ್ಮಾಣವಾಗಿದೆ. ನಮ್ಮನಮ್ಮ ಊರಿನಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಿಕೊಂಡು ಹೋಗುವ ಗುರುತರ ಜವಾಬ್ದಾರಿ ಇಂದು ಪ್ರತಿಯೋರ್ವ ಪಾಲಕರ ಮೇಲಿದೆ. ಪ್ರತಿ ವರ್ಗಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಇದ್ದಾಗ ಮಾತ್ರ ಶಿಕ್ಷಕರು ಉತ್ತಮವಾಗಿ ಬೋಧನೆಮಾಡುವುದು ಸಾಧ್ಯವಾಗುವುದಲ್ಲದೆ ವಿದ್ಯಾರ್ಥಿಗಳಲ್ಲಿ ಕಲಿಕೆಗೆ ಪೂರಕವಾದ ಸ್ಪರ್ಧಾ ಮನೋಭಾವನೆ ಬೆಳೆಯುತ್ತದೆ. ಇದರಿಂದ ಬೋಧನಾ-ಕಲಿಕಾ ಪ್ರಕ್ರಿಯೆ ಚೆನ್ನಾಗಿ ನಡೆಯಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮುಖಾಂತರ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖಾಸಗಿ ಶಾಲೆಗಳೆಡೆಗೆ ಮುಖಮಾಡುತ್ತಿರುವ ಪಾಲಕರನ್ನು ಸರ್ಕಾರಿ ಶಾಲೆಗಳತ್ತ ಸೆಳೆಯುವ ಜವಾಬ್ದಾರಿ ಶಿಕ್ಷಕರಮೇಲಿದೆ. ಶಿಕ್ಷಣಕ್ಕೆ ಪೂರಕವಾದ ಸೌಲಭ್ಯಗಳನ್ನು ಒದಗಿಸಿಕೊಡುವ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಹೇಳಿದರು.
ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಎಲ್. ಭಟ್, ಗ್ರಾ. ಪಂ. ಸದಸ್ಯರುಗಳಾದ ಮಹೇಶ ನಾಯಕ ಮೊರ್ಬಾ ಹಾಗೂ ಆನಂದು ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆನಂದು ಗಾಂವಕರ ಮತ್ತು ತಾಲೂಕಾಧ್ಯಕ್ಷ ರವೀಂದ್ರ ಭಟ್ ಸೂರಿ, ನಿವೃತ್ತ ಆರಕ್ಷಕ ವರಿಷ್ಠಾಧಿಕಾರಿ ಎನ್. ಟಿ. ಪ್ರಮೋದರಾವ್, ಎಸ್. ಡಿ. ಎಮ್. ಸಿ. ಅಧ್ಯಕ್ಷ ಉದ್ದಂಡ ಗಾಂವಕರ ಉಪಾಧ್ಯಕ್ಷೆ ನಯನಾ ಗುನಗಾ, ಗುತ್ತಿಗೆದಾರ ರಾಮು ಕೆಂಚನ, ಆಶ್ರಯ ಫೌಂಡೇಶನ್ ಸಂಸ್ಥಾಪಕ ರಾಜೀವ್ ಗಾಂವಕರ, ಸಿ. ಆರ್. ಪಿ. ರೋಹಿದಾಸ ನಾಯಕ, ಬಿಜೆಪಿಯ ಸ್ಥಳೀಯ ಪ್ರಮುಖರಾದ ಮಹೇಶ ನಾಯಕ ದೇವರಬಾವಿ, ನೀಲಪ್ಪ ಗೌಡ, ಹಮ್ಮಣ್ಣ ನಾಯಕ, ದೇವಿದಾಸ ನಾಯಕ ಹಾಗೂ ಇತರರು ಇದ್ದರು.