Slide
Slide
Slide
previous arrow
next arrow

ಮಾ.5,6ಕ್ಕೆ ಬನವಾಸಿಯಲ್ಲಿ ಫಲಪುಷ್ಪ ಪ್ರದರ್ಶನ

300x250 AD

 ಶಿರಸಿ: ತಾಲೂಕಿನ ಬನವಾಸಿಯಲ್ಲಿ ಮಾ.5 ಮತ್ತು 6ರಂದು ಕದಂಬೋತ್ಸವ ನಡೆಯಲಿದ್ದು, ಇದೇ ಸಂದರ್ಭದಲ್ಲಿಯೇ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನವನ್ನೂ ಏರ್ಪಡಿಸಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ ತಿಳಿಸಿದರು.

ನಗರದ ಇಲಾಖೆ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಕರಾವಳಿ ಉತ್ಸವದಲ್ಲಿ ಈ ಪ್ರದರ್ಶನ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಆ ಉತ್ಸವದ ದಿನಾಂಕ ನಿಗದಿಯಾಗಿದ್ದರಿಂದ ಇದು ಸಾಧ್ಯವಾಗಿರಲಿಲ್ಲ. ಈಗ ಕದಂಬೋತ್ಸವದಲ್ಲಿಯೇ ಈ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದೆ. ಮಾ.5ರ ಸಂಜೆ 5 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸುವರು ಎಂದರು.

ಪ್ರದರ್ಶನದಲ್ಲಿ ಪುಷ್ಪದಿಂದ ಬನವಾಸಿ ಶ್ರೀ ಮಧುಕೇಶ್ವರ ದೇವರ ಕಲಾಕೃತಿ ರೂಪಿಸಲಾಗುತ್ತದೆ. ಅಲ್ಲದೇ ಹೂವಿನಿಂದ ವಿವಿಧ ಕಲಾಕೃತಿ ಮತ್ತು ಸೆಲ್ಫಿ ಮಾದರಿಗಳನ್ನು ನಿರ್ಮಿಸಲಾಗುತ್ತದೆ. ವಿವಿಧ ಜಾತಿಯ ಕತ್ತರಿಸಿದ ಹೂವುಗಳು ಹಾಗೂ  ಹೂವಿನ ಅಲಂಕಾರಿಕ ಕುಂಡಗಳ ಜೋಡಣೆ ಮಾಡಲಾಗುತ್ತದೆ.  ವಿವಿಧ ತರಹದ ಹೂವುಗಳು ಇರಲಿದ್ದು 20-25 ಸಾವಿರ ಕತ್ತರಿಸಿದ ಹೂವುಗಳು, ಎರಡೂವರೆ ಸಾವಿರ ಕುಂಡಗಳು ಇರಲಿವೆ. ವರ್ಟಿಕಲ್ ಗಾರ್ಡನ್ ಮಾದರಿ, ಪುಷ್ಪ ರಂಗೋಲಿ, ತರಕಾರಿ ಕೆತ್ತನೆ ಗಮನ ಸೆಳೆಯುವಂತೆ ಇರುತ್ತದೆ ಎಂದರು.

300x250 AD

ಜಿಲ್ಲೆಯ ವಿವಿಧ ತಾಲೂಕುಗಳಿಂದ ರೈತರು ಬೆಳೆದ ತೋಟಗಾರಿಕಾ ಬೆಳೆಗಳ ಉತ್ತಮ ಪ್ರದರ್ಶಿಕೆಗಳಿರಲಿವೆ. ಅದರಲ್ಲಿ ಹಣ್ಣು, ತರಕಾರಿ, ಹೂವಿನ ಬೆಳೆಗಳು, ಸಾಂಬಾರ ಬೆಳೆಗಳು, ಸಂಸ್ಕರಿಸಿದ ಪದಾರ್ಥಗಳ  ಪ್ರದರ್ಶನ ಹಮ್ಮಿಕೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ ತೋಟಗಾರಿಕಾ ಇಲಾಖೆಯಿಂದ ಸ್ಥಾಪಿತವಾದ ರೈತ ಉತ್ಪಾದಕ ಕಂಪನಿಗಳ ಉತ್ಪನ್ನಗಳ ಪ್ರದರ್ಶನ ಹಾಗೂ ಇಲಾಖಾ ಕಾರ್ಯಕ್ರಮಗಳ ಪಕ್ಷಿನೋಟ ಬಿಂಬಿಸಲಾಗುತ್ತದೆ. ಕಸದಿಂದ ರಸದಡಿ ವಿವಿಧ ತೋಟಗಾರಿಕಾ ತ್ಯಾಜ್ಯದಿಂದ ತಯಾರಿಸಿದ ಉತ್ಪನ್ನಗಳ ಪ್ರದರ್ಶನ, ಹನಿ ನೀರಾವರಿ ಯೋಜನೆ ಮಾದರಿ, ಜೇನು ಕೃಷಿ ಉತ್ಪನ್ನಗಳ ಪ್ರದರ್ಶನ, ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಸಂಸ್ಕರಿತ ಉತ್ಪನ್ನಗಳ ಪ್ರದರ್ಶನ ಆಯೋಜಿಸಲಾಗುತ್ತದೆ. ಪ್ರದರ್ಶನದಲ್ಲಿ ರೈತರ ಉತ್ತಮ ಪ್ರದರ್ಶಿಕೆಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತದೆ ಎಂದರು.

ಫಲಪುಷ್ಪ ಪ್ರದರ್ಶನಕ್ಕೆ ಇಲಾಖೆಯಿಂದ 10.5ಲಕ್ಷ ರೂ.ಲಭ್ಯತೆಯಿದ್ದು, ಇನ್ನು 2ಲಕ್ಷ ಬೇಕಾಗಬಹುದು. ಕೃಷಿ ಇಲಾಖೆ ಆತ್ಮ ಯೋಜನೆಯಲ್ಲಿ ಸಿಗುವ ನಿರೀಕ್ಷೆಯಿದೆ ಎಂದರು. ಕೃಷಿ ಇಲಾಖೆ ಉಪನಿರ್ದೇಶಕ ನಟರಾಜ ಮಾತನಾಡಿ, ಸಿರಿಧಾನ್ಯದ ವರ್ಷವಾದ್ದರಿಂದ ಕದಂಬೋತ್ಸವದಲ್ಲಿ ಕೃಷಿ ಇಲಾಖೆಯಿಂದ ಸಿರಿಧಾನ್ಯದ ನಡಿಗೆ ಕಾರ್ಯಕ್ರಮ ಆಯೋಜಿಸುತ್ತೇವೆ ಎಂದು ತಿಳಿಸಿದರು.
ತೋಟಗಾರಿಕಾ ಅಧಿಕಾರಿಗಳಾದ ಸತೀಶ ಹೆಗಡೆ, ಗಣೇಶ ಹೆಗಡೆ, ಕೃಷಿ ಅಧಿಕಾರಿ ನಂದೀಶ ಗೌಡ ಉಪಸ್ಥಿತರಿದ್ದರು. 

Share This
300x250 AD
300x250 AD
300x250 AD
Back to top