ದಾಂಡೇಲಿ: ಪಂಚಭಾಷೆಗಳ ನಡುವೆ ಕನ್ನಡ ಭಾಷೆಯು ತನ್ನ ಗುರುತರವಾದ ಸಾಮರ್ಥ್ಯವನ್ನು ಹೊಂದಿದೆ. ದಾಂಡೇಲಿಯನ್ನು ಐದು ಭಾಗಗಳಾಗಿ ವಿಂಗಡಿಸಿದರೆ ಐದು ಭಾಷೆಗಳನ್ನು ಇಡಿ ಊರಿಗೆ ಹಂಚಬೇಕಾಗುತ್ತದೆ ಅಷ್ಟೇ ಸೌಹಾರ್ದತೆ ಹೊಂದಿದೆ ಎಂದು ದಾಂಡೇಲಿ ನ್ಯಾಯವಾದಿ ಸೋಮಕುಮಾರ ಎಸ್. ಹೇಳಿದರು.
ಅವರು ದಾಂಡೇಲಿ ತಾಲೂಕಾ 2ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿ, ಬಿಕ್ಕಟ್ಟಿನ ಸಮಯದಲ್ಲಿ ದೇಶದಲ್ಲಿ ಮುಸ್ಲಿಂ ಸಮುದಾಯದವರ ಹತ್ತಿರ ಯಾರೂ ವ್ಯಾಪಾರ ಮಾಡಬಾರದು ಎನ್ನುವ ಅಭಿಯಾನ ಪ್ರಾರಂಭವಾಗಿತ್ತು. ಆದರೆ, ದಾಂಡೇಲಿಯಲ್ಲಿ ಮುಸ್ಲಿಂ ಹಬ್ಬಕ್ಕೆ ಹಿಂದೂ ಸಮುದಾಯದವರು ಹೆಚ್ಚಿನ ರೀತಿಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಾರೆ. ಅದೇ ರೀತಿ ಹಿಂದೂಗಳ ಹಬ್ಬಕ್ಕೆ ಮುಸ್ಲಿಂರು ಹೆಚ್ಚಿನ ವ್ಯಾಪಾರ ಮಾಡುತ್ತಾರೆ. ಇಲ್ಲಿ ದ್ವೇಷ-ದಳ್ಳುರಿಗೆ ಅವಕಾಶವಿಲ್ಲ. ದಾಂಡೇಲಿಯಲ್ಲಿ ಐವತ್ತು ವರ್ಷಗಳ ಹಿಂದೆಯೇ ಸಂಧಾನ ಆಶಯದಂತೆ ದಾಂಡೇಲಿ ಜನರು ಬದುಕಿದ್ದಾರೆ. ಕನ್ನಡಿಗರು ಎಲ್ಲವನ್ನೂ ತನ್ನ ಒಳಗೆ ಹಾಕಿಕೊಳ್ಳುವ ಕನ್ನಡಿಗರ ಔದಾರ್ಯ ಹೊಂದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎನ್.ವಿ.ಪಾಟೀಲ ಆಶಯನುಡಿಗಳಾಡಿದರು. ಸಾಮಾಜಿಕ ಸಾಮರಸ್ಯದ ವಿಷಯದ ಕುರಿತು ಪತ್ರಕರ್ತರ ಸಂದೇಶ ಜೈನ್ ಮಾತನಾಡಿದರು.
ಈ ಸಂದರ್ಭದಲ್ಲಿ ಗೌರವ ಉಪಸ್ಥಿತಯಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷ ಸಂಜಯ ನಂದ್ಯಾಳಕರ, ಯಾಸ್ಮಿನ್ ಕಿತ್ತೂರು, ಅನಿಲ ನಾಯ್ಕರ, ಅಂಬಿಕಾನಗರದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೇಧಾ ಗೌಡ,ಮಾಜಿ ನಗರಸಭೆ ಉಪಾಧ್ಯಕ್ಷೆ ಶಾರದಾ ಪರಶುರಾಮ ಇದ್ದರು.
ಸುರೇಶ ಕಾಮತ್ ಸ್ವಾಗತಿಸಿದರು.ಹೇಮಾ ಕಾಮತ್ ನಿರೂಪಿಸಿದರು.ಸುರೇಶ ಪಾಲನಕರ ವಂದಿಸಿದರು.