ಶಿರಸಿ : ರಾಜ್ಯ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಶಿರಸಿ ಶ್ರೀ ಮಾರಿಕಾಂಬಾ ದೇವಿ ಜಾತ್ರೆಯು ಮಾ.19 ರಿಂದ ಆರಂಭಗೊಳ್ಳಲಿದ್ದು, ನಗರದ ಬಿಡ್ಕಿಬೈಲಿನಲ್ಲಿನ ಜಾತ್ರಾ ಗದ್ದುಗೆಯ ಸುತ್ತಮುತ್ತಲು ಚಪ್ಪರದ ಪ್ರವೇಶದ್ವಾರ ಹಾಗೂ ಮುಖಮಂಟಪದ ನಿರ್ಮಾಣ, ಅಲಂಕಾರದ ಕಾರ್ಯಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಕಳೆದ 5 ಜಾತ್ರೆಗಳಿಂದ ಜಾತ್ರಾ ಪ್ರವೇಶದ್ವಾರ ಹಾಗೂ ಮುಖಮಂಟಪ ಮತ್ತು ಇತರ ನಿರ್ಮಾಣಗಳನ್ನು, ಅಲಂಕರಣಗಳನ್ನು ನಿರ್ಮಿಸುತ್ತ ಬಂದಿರುವ ಉಡುಪಿಯ ಮಂಜುನಾಥ ಇಲೆಕ್ಟ್ರಿಕಲ್ಸ್‌ನ ರಾಜೇಶ ರಾವ್ ಈ ವರ್ಷವೂ ನಿರ್ಮಾಣದ ಕಾರ್ಯ ನಡೆಸುತ್ತಿದ್ದಾರೆ.
ಇದು ಶ್ರೀದೇವಿಗೆ ಸೇವೆ ಸಲ್ಲಿಸುತ್ತಿರುವ 6ನೇ ಜಾತ್ರೆ ಆಗಿದೆ. ಈ ವರ್ಷ ವಿಶೇಷ ವಿನ್ಯಾಸದ ಮಂಟಪ ನಿರ್ಮಿಸಲಾಗುತ್ತಿದೆ ಎಂದು ರಾಜೇಶ ರಾವ್ ಹೇಳಿದ್ದಾರೆ.
ಇಂದು ಶ್ರೀಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿದ ರಾಜೇಶ ರಾವ್, ನಂತರ ಜಾತ್ರಾ ಚಪ್ಪರದ ಪ್ರವೇಶ ದ್ವಾರ ಹಾಗೂ ಮುಖಮಂಟಪ ನಿರ್ಮಾಣ ಕಾರ್ಯಕ್ಕೆ ಬಾಬದಾರ ಜಗದೀಶ ಗೌಡ ಅವರೊಡನೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಾಬದಾರ ಪ್ರಮುಖರಾದ ವಿಜಯ ನಾಡಿಗ, ರಮೇಶ ದಬ್ಬೆ, ರಾಜೇಶ ಹಾಗೂ ಇತರರು ಉಪಸ್ಥಿತರಿದ್ದರು. ಬಿಡ್ಕಿಬೈಲಿನ ಜಾತ್ರಾ ಗದ್ದುಗೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾಗೂ ಕೋಣನಬಿಡ್ಕಿ ಪ್ರದೇಶದಲ್ಲಿ ಜಾತ್ರಾ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ನಗರದಲ್ಲಿ ನಿಧಾನವಾಗಿ ಜಾತ್ರೆಯ ಕಳೆ ಮೂಡುತ್ತಿದೆ.