ಯಲ್ಲಾಪುರ: ಪಟ್ಟಣದ ತಾಲೂಕಾ ಆಡಳಿತ ಸೌಧದ ಎದುರು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿರುವ ದೇಶದ್ರೋಹಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ, ಬಿಜೆಪಿ ಯಲ್ಲಾಪುರ ಮಂಡಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣೆಮನೆ ಮಾತನಾಡಿ, ಕಾಂಗ್ರೆಸ್ ಬಹುಮತ ಪಡೆದು ಸರ್ಕಾರ ರಚನೆ ಆದಾಗಿನಿಂದ ರಾಜ್ಯದ ವಿವಿಧೆಡೆ ಪಾಕಿಸ್ತಾನದ ಧ್ವಜ ಹಾರಾಡುತ್ತಿರುವುದನ್ನು ನಾವು ಕಂಡಿದ್ದೇವೆ. ಅಂದಿನಿಂದ ಆರಂಭವಾಗಿ ಇಂದು ನಮ್ಮ ರಾಜ್ಯದ ಶಕ್ತಿ ಕೇಂದ್ರದಲ್ಲಿಯೇ ಪಾಕಿಸ್ತಾನ ಪರ ಘೋಷಣೆ ಕೂಗುವಂತಹ ಪರಿಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ತಂದೊಡ್ಡಿದೆ. ದೇಶದ ಪ್ರತ್ಯೇಕತಾವಾದಿ ಶಕ್ತಿಗಳನ್ನು ಪೋಷಿಸುವ ಕಾರ್ಯ ಇಂದಿನ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ನಾಸಿರ್ ಹುಸೇನ್ ಅವರ ವಿಜಯವನ್ನು ಅವರ ಬೆಂಬಲಿಗರು ಭಾರತ – ಪಾಕಿಸ್ತಾನದ ನಡುವಿನ ಯುದ್ಧದಲ್ಲಿ ಪಾಕಿಸ್ತಾನ ಗೆದ್ದಂತೆ ಸಂಭ್ರಮಿಸುವುದು ವಿಷಾದನೀಯ. ಇದನ್ನು ಪ್ರಶ್ನಿಸಿದ ಮಾಧ್ಯಮಗಳ ವಿರುದ್ಧವೇ ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಹಿಂದೆಯೂ ಸಹ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಾಧ್ಯಮದ ಸ್ವಾತಂತ್ರ್ಯವನ್ನು ಕಿತ್ತುಕೊಂಡಿತ್ತು. ಸ್ವಾತಂತ್ರ್ಯದ 75 ವರ್ಷಗಳ ಬಳಿಕವೂ ಮಾಧ್ಯಮಕ್ಕೆ ಸ್ವಾತಂತ್ರ್ಯ ಇಲ್ಲದ ಪರಿಸ್ಥಿತಿ ರಾಜ್ಯದಲ್ಲಿ ಉಂಟಾಗಿದೆ. ಇವೆಲ್ಲವನ್ನೂ ವಿರೋಧ ಪಕ್ಷವಾಗಿ ಬಿಜೆಪಿ ಕಟುವಾಗಿ ಖಂಡಿಸುತ್ತದೆ. ಇಂತಹ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅತ್ಯಗತ್ಯ ಎಂದರು.
ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ರಾಜೆಂದ್ರ ನಾಯ್ಕ ಮಾತನಾಡಿ, ಘಟನೆಯ ಕುರಿತು ಪರಿಶೀಲನೆ ನಡೆಸುವುದಾಗಿ ಕಾಂಗ್ರೆಸ್ ಮುಖಂಡರು ಹೇಳುತ್ತಾರೆ ಹೊರತು, ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ನೀಡಲೇಬೇಕು ಎಂದು ಒತ್ತಾಯಿಸಿದರು.
ಹಿರಿಯ ಮುಖಂಡ ಪ್ರಮೋದ್ ಹೆಗಡೆ ಮಾತನಾಡಿ, ನಮ್ಮ ಸುಸಂಸ್ಕೃತ ದೇಶಕ್ಕೆ ಪ್ರತಿನಿತ್ಯ ಅಶಾಂತಿಯನ್ನು ಉಂಟು ಮಾಡುತ್ತಿರುವ ಪಾಕಿಸ್ತಾನದ ಪರ ಘೋಷಣೆ ಕೂಗಿರುವುದು ಖಂಡನಾರ್ಹ ಎಂದು ತಿಳಿಸಿದರು.
ಪ್ರತಿಭಟನಾಕಾರರು ತಹಸೀಲ್ದಾರ್ ಎಂ .ಗುರುರಾಜ್ ಅವರ ಮುಖಾಂತರ ರಾಷ್ಟ್ರಪತಿಗಳಿಗೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.